ಉತ್ತಮ ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ನೀವು ದೇಹವನ್ನು ಆರೋಗ್ಯಕರವಾಗಿಡಲು ಬಯಸಿದರೆ ಸಾಕಷ್ಟು ಪ್ರಮಾಣದಲ್ಲಿ ನಿದ್ರೆ ಪಡೆಯಬೇಕಾಗುತ್ತದೆ. ನಿದ್ರೆಯ ಕೊರತೆಯಿಂದಾಗಿ ಅನೇಕ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಆರೋಗ್ಯ ತಜ್ಞರ ಪ್ರಕಾರ, ಆರೋಗ್ಯಕರವಾಗಿರಲು ದಿನಕ್ಕೆ 7 ರಿಂದ 8 ಗಂಟೆಗಳ ನಿದ್ರೆ ಅಗತ್ಯ. ಆದರೆ ಅನೇಕ ಜನರು ಸರಿಯಾದ ನಿದ್ರೆಯನ್ನು ಪಡೆಯುವುದಿಲ್ಲ. ಇದರಿಂದಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಅವರನ್ನು ಬಾಧಿಸಬಹುದು. ಹಾಗಿರುವಾಗ ಈ ಕೆಲವೊಂದು ಆರೋಗ್ಯಕ ಪಾನೀಯಗಳನ್ನು ರಾತ್ರಿ ಮಲಗುವ ಮುನ್ನ ಸೇವನೆ ಮಾಡುವ ಮೂಲಕ ಉತ್ತಮ ಗುಣಮಟ್ಟದ ನಿದ್ರೆಯನ್ನು ಪಡೆಯಬಹುದು. ಮತ್ತು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಬಹುದು.
ಕ್ಯಾಮೊಮೈಲ್ ಟೀ:
ರಾತ್ರಿಯಲ್ಲಿ ಉತತಮ ನಿದ್ರೆಯನ್ನು ಪಡೆಯಲು ಕ್ಯಾಮೋಮೈಲ್ ಚಹಾವನ್ನು ಸೇವನೆ ಮಾಡಬಹುದು. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮಕ್ಕೆ ಬಹಳ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಕ್ಯಾಮೊಮೈಲ್ ಚಹಾವು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಮಾತ್ರವಲ್ಲದೆ ಇದು ನಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ.
ಪುದೀನಾ ಚಹಾ:
ಪುದೀನ ಚಹಾವು ಕೆಫೀನ್ ಮತ್ತು ಕ್ಯಾಲೋರಿಗಳಿಂದ ಮುಕ್ತವಾಗಿದೆ. ಇದರಲ್ಲಿರುವ ಮೆಂಥಾಲ್ ಅಂಶವು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ನಿದ್ರೆಯನ್ನು ಉತ್ತೇಜಿಸುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಇದು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಪ್ರತಿನಿತ್ಯ 30 ನಿಮಿಷಗಳ ಓಟ ಅಥವಾ ವೇಗದ ನಡಿಗೆಯ ಅಭ್ಯಾಸವು ತ್ವಚೆಯ ಆರೋಗ್ಯವನ್ನು ಸುಧಾರಿಸಲು ಸಹಕಾರಿ
ಬೆಚ್ಚಗಿನ ಹಾಲು:
ನೀವು ರಾತ್ರಿಯಲ್ಲಿ ಶಾಂತವಾಗಿ ನಿದ್ರಿಸಲು ಬಯಸಿದರೆ, ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲನ್ನು ಕುಡಿಯಿರಿ. ಇದರಲ್ಲಿರುವ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವು ನಿದ್ರೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೀಗೆ ಪ್ರತಿನಿತ್ಯ ಒಂದು ಲೋಟ ಬೆಚ್ಚಗಿನ ಹಾಲನ್ನು ಕುಡಿಯುವ ಮೂಲಕ ಒತ್ತಡ, ನಿದ್ರಾಹೀನತೆ ಮುಂತಾದ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಹುದು.
ಅರಶಿನ ಹಾಲು:
ಉತ್ತಮ ನಿದ್ರೆಯನ್ನು ಪಡೆಯಲು ನೀವು ಸೇವನೆ ಮಾಡಬೇಕಾದ ಇನ್ನೊಂದು ಪಾನೀಯವೆಂದರೆ ಅರಶಿನ ಹಾಲು. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅರಶಿನದಲ್ಲಿ ಕರ್ಕ್ಯುಮಿನ್ ಅಂಶವಿದ್ದು, ಇದು ಆತಂಕ ಮತ್ತು ಖಿನ್ನತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ರಾತ್ರಿ ಮಲಗುವ ಮುನ್ನ ಅರಶಿನ ಹಾಲನ್ನು ಕುಡಿಯುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ಅಲ್ಲದೆ ಅರಶಿನ ಹಾಲಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ವಿರೋಧಿ ಗುಣಲಕ್ಷಣಗಳಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಹಲವಾರು ಕಾಯಿಲೆಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.
ಬಾದಾಮಿ ಹಾಲು:
ಬಾದಾಮಿಯು ವಿಟಮಿನ್, ಫೈಬರ್, ಟ್ರಿಪ್ಟೊಫಾನ್, ಮೆಲಟೋನಿನ್ ಮತ್ತು ಮೆಗ್ನೇಸಿಯಂ ಸೇರಿದಂತೆ ನಿದ್ರೆಯನ್ನು ಉತ್ತೇಜಿಸುವ ಪ್ರಮುಖ ಖಿನಿಜಗಳಿಂದ ತುಂಬಿದೆ. ಇದು ಉತ್ತಮ ನಿದ್ರೆಯನ್ನು ಪಡೆಯಲು ಸೂಕ್ತವಾದ ಪಾನೀಯವಾಗಿದೆ. ಮತ್ತು ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ಬಾದಮಿ ಹಾಲನ್ನು ನಿದ್ರಾಹೀನತೆಗೆ ಚಿಕಿತ್ಸೆಯಾಗಿ ಪರಿಗಣಿಸಲಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: