ಬಾಳೆಹಣ್ಣು ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ, ಬಾಳೆ ಗಿಡದ ಪ್ರತಿಯೊಂದು ಭಾಗವು ಬಹಳಷ್ಟು ಪ್ರಯೋಜನಕಾರಿಯಾಗಿದೆ. ಅದರಲ್ಲಿಯೂ ಈ ಬಾಳೆ ದಿಂಡಿನ ಪ್ರಯೋಜನವನ್ನು ತಿಳಿದವರೇ ಬಲ್ಲರು. ಕಲ್ಲನ್ನು ಕರಗಿಸುವ ಶಕ್ತಿಯಿರುವ ಈ ಬಾಳೆದಿಂಡನ್ನು ನಮ್ಮ ಹಿರಿಯರು ಅನೇಕ ರೋಗಗಳಿಗೆ ಮನೆ ಮದ್ದಾಗಿ ಬಳಸುತ್ತಿದ್ದರು. ಇದರಲ್ಲಿ ನಾರಿನಂಶ ಅಧಿಕವಾಗಿದ್ದು, ಪೊಟ್ಯಾಸಿಯಮ್, ಮೆಗ್ನೀಸಿಯಮ್, ತಾಮ್ರದ ಕಬ್ಬಿಣದಂತಹ ಇತರ ಖನಿಜಗಳನ್ನು ಮತ್ತು ವಿಟಮಿನ್ ಸಿ ಮತ್ತು ಬಿ 6 ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ರೋಗವನ್ನು ಗುಣ ಪಡಿಸುವ ಈ ಬಾಳೆದಿಂಡಿನಲ್ಲಿ ಮೊಸರು ಬಜ್ಜಿ, ಕೋಸಂಬರಿ, ಪಲ್ಯ ಮುಂತಾದ ಅಡುಗೆಗಳನ್ನು ಮಾಡಿ ಸವಿದರೂ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹೀಗಾಗಿ ಈ ಕೆಲವು ಐಟಂಗಳಿದ್ದರೆ ಸಾಕು, ಮನೆಯಲ್ಲೇ ಸುಲಭವಾಗಿ ರುಚಿಕರವಾದ ಬಾಳೆದಿಂಡಿನ ಚಾಟ್ ಮಾಡಿ ಸವಿದರೆ ನಾಲಿಗೆಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಬಲು ಪ್ರಯೋಜನಕಾರಿ.
ಬಾಳೆದಿಂಡು, ಈರುಳ್ಳಿ, ಟೊಮೇಟೊ, ಕೊತ್ತಂಬರಿ ಸೊಪ್ಪು, ಗರಂ ಮಸಾಲ, ಅಚ್ಚಖಾರದಪುಡಿ, ಚಾಟ್ ಮಸಾಲ, ಸೇವ್, ಕ್ಯಾರೆಟ್ ತುರಿ, ನಿಂಬೆರಸ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
ಇದನ್ನೂ ಓದಿ: ಇದು ಕರಾವಳಿ ಸ್ಟೈಲ್ನ ಪತ್ರೊಡೆ, ಇದನ್ನು ಮಾಡುವುದು ತುಂಬಾ ಸುಲಭ
* ಸಣ್ಣಗೆ ಬಾಳೆದಿಂಡು, ಈರುಳ್ಳಿ, ಟೊಮೇಟೊ, ಕೊತ್ತಂಬರಿ ಸೊಪ್ಪನ್ನು ಕತ್ತರಿಸಿಟ್ಟುಕೊಳ್ಳಬೇಕು.
* ಈಗಾಗಲೇ ಈ ಕತ್ತರಿಸಿಟ್ಟ ಬಾಳೆದಿಂಡು, ಈರುಳ್ಳಿ, ಟೊಮೇಟೊ, ಕೊತ್ತಂಬರಿ ಸೊಪ್ಪಿಗೆ ಗರಂ ಮಸಾಲ, ಅಚ್ಚಖಾರದಪುಡಿ, ಚಾಟ್ ಮಸಾಲ, ಕ್ಯಾರೆಟ್ ತುರಿ, ಸೇವ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
* ಆ ಬಳಿಕ ಇದರ ಮೇಲೆ ನಿಂಬೆ ರಸವನ್ನು ಹಿಂಡಿದರೆ ಕಾಫಿ ಜೊತೆಗೆ ಬಾಳೆದಿಂಡಿನ ಚಾಟ್ ಸವಿಯಲು ಸಿದ್ಧ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ