ಸಾಂದರ್ಭಿಕ ಚಿತ್ರ
Image Credit source: Pinterest
ಕೂದಲಿನ (hair) ಆರೈಕೆಯ ದೃಷ್ಟಿಯಿಂದ ತಲೆ ಸ್ನಾನ ಮಾಡುವಾಗ ಕೆಲ ಸೂಕ್ಷ್ಮತೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ವಾರಕ್ಕೆ ಎಷ್ಟು ಬಾರಿ ತಲೆ ಸ್ನಾನ ಮಾಡಬೇಕು, ಯಾವ ಶ್ಯಾಂಪೂ ಕಂಡೀಷನರ್ ಬಳಸಿದರೆ ಉತ್ತಮ ಎಂಬುದನ್ನು ನೋಡುವಂತೆ ತಲೆ ಸ್ನಾನ ಮಾಡುವಾಗ ನೀರಿನ ತಾಪಮಾನದ ಬಗ್ಗೆಯೂ ಗಮನ ಕೊಡಬೇಕು. ತಪ್ಪಿಯೂ ಬಿಸಿ ಬಿಸಿ ನೀರಿನಿಂದ ತಲೆ ಸ್ನಾನ ಮಾಡಲೇಬಾರದಂತೆ. ಹೀಗೆ ಬಿಸಿ ನೀರಿನಿಂದ ತಲೆಸ್ನಾನ ಮಾಡುವ ಅಭ್ಯಾಸ ನಿಮಗೂ ಇದ್ಯಾ? ಹಾಗಿದ್ರೆ ಇದರಿಂದ ಕೂದಲಿಗೆ ಸಂಬಂಧಿಸಿದ ಯಾವೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.
ಬಿಸಿ ನೀರಿನಿಂದ ತಲೆಸ್ನಾನ ಮಾಡುವುದರಿಂದ ಉಂಟಾಗುವ ಪರಿಣಾಮಗಳೇನು?
- ನಮ್ಮ ನೆತ್ತಿಯಲ್ಲಿ ನೈಸರ್ಗಿಕ ಎಣ್ಣೆಗಳಿದ್ದು ಅವು ಕೂದಲನ್ನು ಪೋಷಿಸಿ ಹೊಳೆಯುವಂತೆ ಮಾಡುತ್ತದೆ. ಬಿಸಿ ನೀರಿನಿಂದ ಕೂದಲನ್ನು ತೊಳೆಯುವುದರಿಂದ ಈ ಎಣ್ಣೆ ಮಾಸಿ ಹೋಗುತ್ತವೆ ಮತ್ತು ಇದು ಕೂದಲು ಒಣಗುವಿಕೆಗೆ ಕಾರಣವಾಗುತ್ತದೆ.
- ಕಲರಿಂಗ್ ಮಾಡಿದ ಕೂದಲಿಗೆ ಸಾಮಾನ್ಯ ಕೂದಲಿಗಿಂತ ಬಿಸಿನೀರು ಹೆಚ್ಚು ಹಾನಿಕಾರಕ. ಇದು ಕೂದಲಿನ ಹೊರಪೊರೆಗಳನ್ನು ತೆರೆಯುತ್ತದೆ, ಇದರಿಂದಾಗಿ ಬಣ್ಣ ಮಾಸಿ ಕೂದಲು ಮಂದವಾಗಿ ಕಾಣುತ್ತದೆ.
- ಬಿಸಿ ನೀರಿನಿಂದ ಕೂದಲನ್ನು ತೊಳೆಯುವುದರಿಂದ ನೆತ್ತಿ ಒಣಗಿ, ತಲೆಹೊಟ್ಟು, ತುರಿಕೆ ಮತ್ತು ಕಿರಿಕಿರಿ ಸಮಸ್ಯೆ ಉಂಟಾಗುತ್ತದೆ.
- ಬಿಸಿನೀರು ನೆತ್ತಿಗೆ ರಕ್ತ ಪರಿಚಲನೆಯನ್ನು ಕಡಿಮೆ ಮಾಡುತ್ತದೆ, ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೂದಲು ಉದುರುವ ಅಪಾಯವನ್ನು ಹೆಚ್ಚಿಸುತ್ತದೆ.
- ಒಣ ನೆತ್ತಿ ಮತ್ತು ದುರ್ಬಲ ಕೂದಲು ಬೇರುಗಳಿಂದ ಒಡೆಯಲು ಪ್ರಾರಂಭಿಸುತ್ತದೆ, ಇದರಿಂದಾಗಿ ಅತಿಯಾದ ಕೂದಲು ಉದುರುವಿಕೆ ಉಂಟಾಗುತ್ತದೆ.
- ನಿರಂತರವಾಗಿ ತಲೆಸ್ನಾನಕ್ಕೆ ಬಿಸಿನೀರನ್ನು ಬಳಸುವುದರಿಂದ ನಿಮ್ಮ ಕೂದಲಿನ ಹೊಳಪು ಕಡಿಮೆಯಾಗುತ್ತದೆ.
- ಕೂದಲನ್ನು ಬಿಸಿ ನೀರಿನಿಂದ ತೊಳೆದಾಗ, ಕೂದಲಿನ ಕಿರುಚೀಲಗಳು ತೆರೆಯುತ್ತದೆ, ಕೂದಲಿನ ಹೊರಪೊರೆಗಳ ಕೆರಾಟಿನ್ ಮತ್ತು ಲಿಪಿಡ್ ಬಂಧಗಳನ್ನು ತೀವ್ರವಾಗಿ ಹಾನಿಗೊಳಿಸುತ್ತದೆ. ಬಿಸಿನೀರನ್ನು ನಿರಂತರವಾಗಿ ಬಳಸಿದರೆ, ನಿಮ್ಮ ಕೂದಲಿಗೆ ಆಗುವ ಹಾನಿಯನ್ನು ಸರಿಪಡಿಸುವುದು ಕಷ್ಟವಾಗುತ್ತದೆ.
ಇದನ್ನೂ ಓದಿ: ಶ್ಯಾಂಪೂಗೆ ಈ ವಸ್ತುವನ್ನು ಬೆರೆಸಿ ಹಚ್ಚಿದರೆ ನಯವಾದ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ
ತಲೆಸ್ನಾನ ಮಾಡಲು ಯಾವ ನೀರು ಉತ್ತಮ?
ಬಿಸಿನೀರು ಕೂದಲಿಗೆ ಗಮನಾರ್ಹ ಹಾನಿಯನ್ನು ಉಂಟುಮಾಡುತ್ತದೆ. ಹಾಗಾಗಿ ತಲೆ ಸ್ನಾನ ಮಾಡಲು ಉಗುರು ಬೆಚ್ಚಗಿನ ನೀರನ್ನು ಬಳಸಿ. ಇದು ನಿಮ್ಮ ನೆತ್ತಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದಲ್ಲದೆ, ಕೂದಲು ಹಾನಿಗೊಳಗಾಗುವುದನ್ನು ತಡೆಯುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ