
ಪ್ರತಿ ಮನೆಯಲ್ಲೂ ಕೂಡ ಅಡುಗೆಗೆ ಕುಕ್ಕರ್ ಬಳಕೆ ಮಾಡಲಾಗುತ್ತದೆ. ಅನ್ನ ಬೇಯಿಸುವುದರಿಂದ ಹಿಡಿದು ಬೇಳೆ ಬೇಯಿಸುವ, ಸಾಂಬಾರ್ ತಯಾರಿಸುವ ಕೆಲಸವನ್ನು ಪ್ರೆಶರ್ ಕುಕ್ಕರ್ ತ್ವರಿತ ಮತ್ತು ಸುಲಭಗೊಳಿಸುತ್ತದೆ. ಇದು ಕೆಲಸವನ್ನು ಸುಲಭಗೊಳಿಸುತ್ತದೆ ನಿಜ, ಆದರೆ ಇದರಿಂದ ಆರೋಗ್ಯಕ್ಕೆ ಅಪಾಯ ಕೂಡ ಇದೆ. ಹೌದು ಹಳೆಯ ಪ್ರೆಶರ್ ಕುಕ್ಕರನ್ನು (old pressure cooker) ದೀರ್ಘಕಾಲದವರೆಗೆ ಬಳಕೆ ಮಾಡುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಇತ್ತೀಚಿಗಷ್ಟೆ ಮುಂಬೈನ 50 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಸೀಸದ (Lead) ವಿಷದ ಸೇವನೆಯಿಂದ ಪ್ರಾಣ ಕಳೆದುಕೊಂಡರು. ಅವರು ಸುಮಾರು 20 ವರ್ಷದಿಂದ ಒಂದೇ ಅಲ್ಯೂಮಿನಿಯಂ ಕುಕ್ಕರ್‌ನಲ್ಲಿ ಅಡುಗೆ ಮಾಡುತ್ತಿದ್ದು, ಅದರಲ್ಲಿದ್ದ ಸೀಸದ ಅಂಶ ಅವರ ದೇಹಕ್ಕೆ ಸೇರಿದೆ ಎಂಬ ಆಘಾತಕಾರಿ ಸಂಗತಿ ಪತ್ತೆಯಾಗಿದೆ.
ಸೀಸ ಲೋಹವು ಸಾಮಾನ್ಯವಾಗಿ ಅಲ್ಯೂಮಿನಿಯಂ ಪಾತ್ರೆಗಳ ಭಾಗವಾಗಿಲ್ಲ. ಈ ಪಾತ್ರೆಗಳ ಒಳ ಮೇಲ್ಮೈಯಲ್ಲಿ ಆಹಾರಗಳು ಅಂಟಿಂಕೊಳ್ಳದಂತೆ ನಿಕಲ್ ಲೇಪನವನ್ನು ಹಾಕಲಾಗುತ್ತದೆ. ಕಾಲಾನಂತರದಲ್ಲಿ ಇದು ಸವೆಯಲು ಪ್ರಾರಂಭಿಸುತ್ತದೆ. ವಿಶೇಷವಾಗಿ ಹೆಚ್ಚಿನ ತಾಪಮಾನದಲ್ಲಿ ಆಹಾರವನ್ನು ಬೇಯಿಸಿದಾಗ ಈ ಲೇಪನ ಸವೆಯುತ್ತದೆ. ಹೀಗೆ ಪಾತ್ರೆಗಳ ಮೇಲ್ಮೈ ಸವೆದಾಗ, ಅಲ್ಯೂಮಿನಿಯಂ ಸ್ಕ್ರ್ಯಾಪ್ ಬಳಸಿದಾಗ ಅಥವಾ ಪಾತ್ರೆಗಳಿಗೆ ಬೆಸುಗೆ ಹಾಕಿದಾಗ ಸೀಸ ಪಾತ್ರೆಗಳಿಗೆ ಸೇರಿಕೊಳ್ಳುತ್ತವೆ. ಪಾತ್ರೆಗಳು ಮಾತ್ರವಲ್ಲದೆ ಸೀಸವು ಹಳೆಯ ಬಣ್ಣ, ಹಳೆಯ ನೀರಿನ ಕೊಳವೆಗಳಲ್ಲೂ ಕಂಡು ಬರುತ್ತವೆ.
ಅಲ್ಯೂಮಿನಿಯಂ ಕುಕ್ಕರ್ ತುಂಬಾ ಹಳೆಯದಾದಾಗ, ಅದರ ಪದರವು ಸವೆಯಲು ಪ್ರಾರಂಭಿಸುತ್ತದೆ. ಟೊಮೆಟೊ ಅಥವಾ ಹುಣಸೆಹಣ್ಣಿನಂತಹ ಆಮ್ಲೀಯ ಆಹಾರವನ್ನು ಪ್ರತಿದಿನ ಆ ಹಳೆಯ ಪಾತ್ರೆಯಲ್ಲಿ ಬೇಯಿಸಿದರೆ, ಸೀಸ ಮತ್ತು ಅಲ್ಯೂಮಿನಿಯಂನಂತಹ ಲೋಹಗಳು ಪಾತ್ರೆಯಿಂದ ಕರಗಿ ಆಹಾರದಲ್ಲಿ ಸೇರಬಹುದು. ಈ ಆಹಾರದ ಮೂಲಕ ಅದು ದೇಹವನ್ನು ಪ್ರವೇಶಿಸುತ್ತದೆ.
ಕುಕ್ಕರ್ ಸೇರಿದಂತೆ, ತುಂಬಾ ಹಳೆಯದಾದ ವಿಶೇಷವಾಗಿ ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಆ ಪಾತ್ರೆಯಲ್ಲಿರುವ ಸೀಸದ ಅಂಶ ದೇಹಕ್ಕೆ ಸೇರಿಕೊಳ್ಳುತ್ತದೆ. ದೇಹದಲ್ಲಿ ಸೀಸ ನಿಧಾನವಾಗಿ ಸಂಗ್ರಹವಾಗುತ್ತದೆ, ದೇಹದಲ್ಲಿ ಸೀಸದ ಪ್ರಮಾಣ ಅಪಾಯಕಾರಿ ಮಟ್ಟವನ್ನು ತಲುಪಿದಾಗ ಸೀಸದ ವಿಷ ಉಂಟಾಗುತ್ತದೆ. ಈ ವಿಷವು ಕ್ರಮೇಣ ಮೆದುಳು, ನರಗಳು, ಮೂತ್ರಪಿಂಡಗಳು, ಸಂತಾನೋತ್ಪತ್ತಿ ವ್ಯವಸ್ಥೆ ಮತ್ತು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಆರಂಭದಲ್ಲಿ ಲಕ್ಷಣಗಳು ತುಂಬಾ ಸೌಮ್ಯವಾಗಿರುತ್ತವೆ. ಉದಾಹರಣೆಗೆ ಆಯಾಸ, ಕಿರಿಕಿರಿ ಅಥವಾ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿ, ಈ ಲಕ್ಷಣಗಳು ಇನ್ನೂ ಕಡಿಮೆ ಗೋಚರಿಸುತ್ತವೆ, ಆದರೆ ಅವು ನಿಧಾನವಾಗಿ ಗಂಭೀರ ಕಾಯಿಲೆಗಳಾಗಿ ಬೆಳೆಯಬಹುದು. ಆದರೆ ಸಾಮಾನ್ಯ ಸುಸ್ತು ಎಂದು ಜನ ಇದನ್ನು ನಿರ್ಲಕ್ಷ್ಯಿಸುತ್ತಾರೆ.
ರೋಗವು ಸಕಾಲದಲ್ಲಿ ಪತ್ತೆಯಾದರೆ, ಚಿಕಿತ್ಸೆ ಸಾಧ್ಯ. ಈ ರೋಗಿಗೆ ಚೆಲೇಷನ್ ಥೆರಪಿ ಚಿಕಿತ್ಸೆ ನೀಡಲಾಗುತ್ತದೆ, ಇದರಲ್ಲಿ ರಕ್ತದಲ್ಲಿರುವ ಸೀಸವನ್ನು ಬಂಧಿಸುವ ಮತ್ತು ಮೂತ್ರದ ಮೂಲಕ ದೇಹದಿಂದ ಅದನ್ನು ತೆಗೆದುಹಾಕುವ ಔಷಧಿಯನ್ನು ನೀಡಲಾಗುತ್ತದೆ. ಈ ಚಿಕಿತ್ಸೆಯ ಸಮಯದಲ್ಲಿ, ಅಡ್ಡಪರಿಣಾಮಗಳ ಯಾವುದೇ ಅಪಾಯವನ್ನು ತಪ್ಪಿಸಲು ರೋಗಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.
ಇದನ್ನೂ ಓದಿ: ಹುಡುಗಿಯರೇ… ಈ ಎರಡು ಅಂಶಗಳಿರುವ ಲಿಪ್‌ಸ್ಟಿಕ್ ಮುಟ್ಟಿನ ತೊಂದರೆಗೆ ಕಾರಣವಾಗಬಹುದು, ಎಚ್ಚರ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ