ನಾವು ಧರಿಸುವ ಕೆಲ ಬಟ್ಟೆಗಳು ಒಗೆದ ನಂತರ ಕುಗ್ಗುವುದೇಕೆ? ಇಲ್ಲಿದೆ ನೋಡಿ ಕಾರಣ
ಹೊಸ ಬಟ್ಟೆಗಳನ್ನು ಹಾಕಿಕೊಳ್ಳುವ ಮೊದಲು ಅದನ್ನು ಒಂದು ಬಾರಿ ಒಗೆಯುತ್ತೇವೆ. ಹೀಗೆ ಕೆಲವೊಂದು ಬಟ್ಟೆಗಳು ಮೊದಲ ವಾಶ್‌ನಲ್ಲೇ ಗಾತ್ರದಲ್ಲಿ ಕುಗ್ಗುತ್ತವೆ. ಬಹುಶಃ ಈ ಅನುಭವ ನಿಮಗೂ ಆಗಿರಬಹುದಲ್ವಾ. ಅಷ್ಟಕ್ಕೂ ಈ ಬಟ್ಟೆಗಳು ಒಗೆದ ನಂತರ ಕುಗ್ಗುವುದೇಕೆ, ಅದನ್ನು ಸರಿಪಡಿಸುವುದಾದರೂ ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಮಾರುಕಟ್ಟೆಯಿಂದ ತಂದಂತಹ ಹೊಸ ಬಟ್ಟೆಗಳನ್ನು (clothes) ಒಗೆದ ಬಳಿಕವೇ ಹಾಕಿಕೊಳ್ಳುತ್ತೇವೆ. ದೇಹಕ್ಕೆ ಸರಿಯಾಗಿ ಹೊಂದಿಕೊಳ್ಳುವ ಬಟ್ಟೆಯನ್ನು ತಂದರೂ ಕೆಲವೊಂದು ಬಾರಿ ಕೆಲವು ಬಟ್ಟೆಗಳ ಗಾತ್ರ ಒಗೆದ ನಂತರ ತೀರಾ ಕುಗ್ಗಿ ಹೋಗುತ್ತವೆ. ಇದೇ ಕಾರಣಕ್ಕೆ ಅಮ್ಮಂದಿರೆಲ್ಲಾ ಸ್ವಲ್ಪ ಸಡಿಲವಾಗಿರುವಂತಹ ಬಟ್ಟೆಗಳನ್ನು ಖರೀದಿಸುತ್ತಾರೆ. ಹೀಗೆ ಕೆಲವೊಂದು ಬಟ್ಟೆಗಳು ಒಗೆದ ಬಳಿಕ ಕುಗ್ಗುವುದು ನಿಮ್ಮ ಗಮನಕ್ಕೂ ಬಂದಿರಬಹುದು. ಆದರೆ ಒಗೆದ ನಂತರ ಬಟ್ಟೆಗಳು ಹೀಗೆ ಕುಗ್ಗುವುದೇಕೆ (clothes shrink after wash), ಇದರ ಹಿಂದಿನ ಕಾರಣವೇನು ಎಂಬುದರ ಬಗ್ಗೆ ನಿಮಗೆ ಗೊತ್ತಾ? ಇದಕ್ಕೆ ಕಾರಣವೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ಒಗೆದ ನಂತರ ಕೆಲ ಬಟ್ಟೆಗಳು ಕುಗ್ಗುವುದೇಕೆ?
ಕೆಲವು ಬಟ್ಟೆಗಳು ಒಗೆದ ನಂತರ ಕುಗ್ಗುತ್ತವೆ. ವಿಶೇಷವಾಗಿ ಹತ್ತಿ ಮತ್ತು ಲಿನಿನ್ ಫ್ಯಾಬ್ರಿಕ್ ಬಟ್ಟೆಗಳು ಕುಗ್ಗುತ್ತವೆ. ಇದರ ಹಿಂದಿನ ಕಾರಣವೇನು ಎಂದರೆ ಹತ್ತಿ ಮತ್ತು ಲಿನಿನ್‌ನಂತಹ ನೈಸರ್ಗಿಕ ನಾರುಗಳು ಸೆಲ್ಯುಲೋಸ್ ಅಣುಗಳಿಂದ ಮಾಡಲ್ಪಟ್ಟಿರುತ್ತವೆ. ಹತ್ತಿ ಮತ್ತು ಲಿನಿನ್‌ನಂತಹ ಸಾಮಾನ್ಯ ಜವಳಿ ನಾರುಗಳನ್ನು ಸಸ್ಯ ಮೂಲಗಳಿಂದ ತಯಾರಿಸಲಾಗುತ್ತದೆ. ಈ ನಾರುಗಳು ಅನಿಯಮಿತವಾಗಿರುತ್ತವೆ ಮತ್ತು ಅವುಗಳ ನೈಸರ್ಗಿಕ ರೂಪ ಸುಕ್ಕುಗಟ್ಟಿದಂತಿರುತ್ತವೆ.
ಜವಳಿ ತಯಾರಿಕೆಯ ಸಮಯದಲ್ಲಿ, ಈ ಸೆಲ್ಯುಲೋಸ್ ಸರಪಳಿಗಳನ್ನು ನೇರಗೊಳಿಸಲು ಮತ್ತು ಜೋಡಿಸಲು ಈ ನಾರುಗಳನ್ನು ಯಾಂತ್ರಿಕವಾಗಿ ಎಳೆಯಲಾಗುತ್ತದೆ, ಹಿಗ್ಗಿಸಲಾಗುತ್ತದೆ ಮತ್ತು ತಿರುಚಲಾಗುತ್ತದೆ. ಇದರಿಂದ ನಯವಾದ, ಉದ್ದವಾದ ದಾರಗಳು ರೂಪುಕೊಳ್ಳುತ್ತದೆ. ಈ ದಾರಗಳನ್ನು ಬಟ್ಟೆಗಳಾಗಿ ನೇಯಲಾಗುತ್ತದೆ ಅಥವಾ ಹೆಣೆಯಲಾಗುತ್ತದೆ, ಇದು ಆ ನಾರುಗಳನ್ನು ಅಕ್ಕಪಕ್ಕದಲ್ಲಿ ಹಿಡಿದಿಟ್ಟುಕೊಳ್ಳುವ ಒತ್ತಡವನ್ನು ಲಾಕ್ ಮಾಡುತ್ತದೆ. ಅಲ್ಲದೆ ಇದು ಸ್ಮರಣೆ ಅಥವಾ ಮೆಮೊರಿಯನ್ನು ಹೊಂದಿದ್ದು, ಇದು ಶಾಖ ಅಥವಾ ತೇವಾಂಶ ಪ್ರಕ್ರಿಯೆಗೆ ಒಡ್ಡಿಕೊಂಡಾಗ, ಅವುಗಳು ಕುಗ್ಗಿ ತಮ್ಮ ನೈಸರ್ಗಿಕ ಸ್ಥಿತಿಗೆ ಮರಳುತ್ತವೆ. ಇದರ ಪರಿಣಾಮವಾಗಿ ಬಟ್ಟೆ ಕುಗ್ಗುತ್ತದೆ. ಇದೇ ಕಾರಣದಿಂದ ಹೆಚ್ಚಾಗಿ ಹತ್ತಿ ಹಾಗೂ ಲೆನಿನ್ ಬಟ್ಟೆಗಳು ಒಗೆದ ಬಳಿಕ ಗಾತ್ರದಲ್ಲಿ ಕುಗ್ಗುವುದು.
ಯಾವ ಬಟ್ಟೆ ಹತ್ತಿ ಎಷ್ಟು ಕುಗ್ಗುತ್ತವೆ?
ಹೆಚ್ಚು ಕುಗ್ಗುವ ಬಟ್ಟೆಗಳು ನೈಸರ್ಗಿಕ ನಾರುಗಳನ್ನು ಹೊಂದಿರುವ ಬಟ್ಟೆಗಳಾಗಿವೆ. ಇವುಗಳಿಗೆ ಹೆಚ್ಚಿನ ತೇವಾಂಶದ ಅಗತ್ಯವಿರುತ್ತದೆ.
- ಸಾಮಾನ್ಯವಾಗಿ ಒಂದು ಮೀಟರ್ ಹತ್ತಿ ಬಟ್ಟೆಯು ತೊಳೆದ ನಂತರ 3% ರಿಂದ 5% ರಷ್ಟು ಕುಗ್ಗುತ್ತದೆ.
- ರೇಯಾನ್ ಬಟ್ಟೆಗಳು ಸುಮಾರು 10% ವರೆಗೆ ಕುಗ್ಗುತ್ತವೆ.
- ಲೇಬರ್ ಫ್ಯಾಬ್ರಿಕ್ ಬಟ್ಟೆ 10% ವರೆಗೆ ಕುಗ್ಗುತ್ತವೆ.
- ರಾಸಾಯನಿಕ ನಾರುಗಳು ಅಂದರೆ ಪಾಲಿಯೆಸ್ಟರ್‌ನಂತಹ ಸಂಶ್ಲೇಷಿತ ಬಟ್ಟೆಗಳು ಕಡಿಮೆ ಕುಗ್ಗುವ ದರವನ್ನು ಹೊಂದಿರುತ್ತವೆ, ಸುಮಾರು 4% ನಿಂದ 8% ಆಗಿದೆ.
- ಹತ್ತಿ-ಪಾಲಿಯೆಸ್ಟರ್ ಮಿಶ್ರಣವು 3.5% ರಿಂದ 5.5% ವರೆಗೆ ಕುಗ್ಗುತ್ತದೆ.
ಸಿಂಥೆಟಿಕ್ಸ್ ಏಕೆ ಕುಗ್ಗುವುದಿಲ್ಲ?
ಪಾಲಿಯೆಸ್ಟರ್ ಮತ್ತು ನೈಲಾನ್ ಫ್ಯಾಬ್ರಿಕ್ ಪೆಟ್ರೋಲಿಯಂ ಆಧಾರಿತವಾಗಿಗಿದ್ದು, ಇವುಗಳನ್ನು ಬಾಳಿಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಅವುಗಳ ಸ್ಫಟಿಕದಂತಹ ಪಾಲಿಮರ್ ರಚನೆಯು ಕುಗ್ಗುವಿಕೆಯನ್ನು ತಡೆಯುತ್ತದೆ.
ಇದನ್ನೂ ಓದಿ: ಹುಡುಗಿಯರೇ… ಈ ಎರಡು ಅಂಶಗಳಿರುವ ಲಿಪ್‌ಸ್ಟಿಕ್ ಮುಟ್ಟಿನ ತೊಂದರೆಗೆ ಕಾರಣವಾಗಬಹುದು, ಎಚ್ಚರ
ಈ ಕುಗ್ಗಿದ ಬಟ್ಟೆಗಳನ್ನು ಸರಿಪಡಿಸುವುದೇಗೆ ?
ಒಗೆದ ನಂತರ ಕುಗ್ಗಿದ ಬಟ್ಟೆಗಳನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಮತ್ತೆ ಸರಿಪಡಿಸಬಹುದು. ಒಂದು ವೇಳೆ ನಿಮ್ಮ ನೆಚ್ಚಿನ ಉಡುಪನ್ನು ತೊಳೆಯುವಾಗ ಕುಗ್ಗಿದ್ದರೆ, ಹೇರ್ ಕಂಡೀಷನರ್ ಅಥವಾ ಒಂದು ಚಮಚ ಬೇಬಿ ಶಾಂಪೂ ಬೆರೆಸಿದ ಉಗುರು ಬೆಚ್ಚಗಿನ ನೀರಿನಲ್ಲಿ ಉಡುಪನ್ನು ನೆನೆಸಿ. ನಂತರ ಅದನ್ನು ಒಣಹಾಕಿ. ಕಂಡಿಷನರ್ ‘ಕ್ಯಾಟಯಾನಿಕ್ ಸರ್ಫ್ಯಾಕ್ಟಂಟ್‌ಗಳು’ ಎಂಬ ರಾಸಾಯನಿಕಗಳನ್ನು ಹೊಂದಿರುವುದರಿಂದ ಇದು ಬಟ್ಟೆಯನ್ನು ಮೃದುಗೊಳಿಸುತ್ತದೆ ಮತ್ತು ಅದರ ಕುಗ್ಗುವಿಕೆಯನ್ನು ಕಡಿಮೆ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








