ಮನೆಗೆ ಬಂದಂತಹ ಅತಿಥಿಗಳಿಗೆ ಮೊದಲು ನೀರು ಕೊಟ್ಟು ಸತ್ಕರಿಸುವುದೇಕೆ ಗೊತ್ತಾ?
ಸಾಮಾನ್ಯವಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮನೆಗೆ ಬರುವಂತಹ ಅತಿಥಿಗಳಿಗೆ ಮೊದಲು ನೀರು ಕೊಟ್ಟು ಅವರನ್ನು ಸತ್ಕರಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಕೂಡಾ ಇದ್ದೇ ಪದ್ಧತಿಯನ್ನು ಪಾಲಿಸಲಾಗುತ್ತದೆ. ಅಷ್ಟಕ್ಕೂ ಮನೆಗೆ ಬರುವ ಅತಿಥಿಗಳನ್ನು ನೀರು ಕೊಟ್ಟು ಸತ್ಕರಿಸುವುದೇಕೆ ಗೊತ್ತಾ? ಈ ಸಂಪ್ರದಾಯದ ಹಿಂದಿನ ಕಾರಣವನ್ನು ತಿಳಿಯಿರಿ.

ಅತಿಥಿ ದೇವೋ ಭವ ಅಂದರೆ ಅತಿಥಿಗಳು (Guests) ದೇವರಿಗೆ ಸಮಾನ ಎನ್ನುವ ಪರಿಕಲ್ಪನೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ನಮ್ಮ ಸಂಸ್ಕೃತಿಯಲ್ಲಿ ಮನೆಗೆ ಬರುವಂತಹ ಅತಿಥಿಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ. ಜೊತೆಗೆ ಅತಿಥಿಗಳು ಮನೆ ಬಾಗಿಲಿಗೆ ಕಾಲಿಟ್ಟ ತಕ್ಷಣ, ಅವರಿಗೆ ಒಂದು ಲೋಟ ಅಥವಾ ಒಂದು ಚೊಂಬು ನೀರು ಕೊಟ್ಟು ಮನೆಯೊಳಗೆ ಸ್ವಾಗತಿಸುವ (tradition of Water Is Given To Guests First) ಸಂಪ್ರದಾಯ ನಮ್ಮಲ್ಲಿದೆ. ಮನೆಗೆ ಯಾರೇ ಬರಲಿ, ಅವರಿಗೆ ಮೊದಲು ಒಂದು ಲೋಟ ನೀರು ಕೊಟ್ಟು ಸತ್ಕರಿಸಲಾಗುತ್ತದೆ. ಹೀಗೆ ಅತಿಥಿಗಳು ಮನೆಗೆ ಬಂದ ತಕ್ಷಣ ಮೊದಲು ನೀರನ್ನೇ ಏಕೆ ಕೊಡಲಾಗುತ್ತದೆ? ಈ ಸಂಪ್ರದಾಯದ ಹಿಂದಿನ ಕಾರಣ ಏನೆಂಬುದನ್ನು ತಿಳಿಯೋಣ ಬನ್ನಿ.
ಮನೆಗೆ ಬರುವ ಅತಿಥಿಗಳಿಗೆ ಮೊದಲು ನೀರು ಕೊಡುವುದೇಕೆ:
ಗೌರವ ಮತ್ತು ಆತಿಥ್ಯ: ನೀರು ಶುದ್ಧತೆ ಮತ್ತು ಪ್ರೀತಿಯ ಸಂಕೇತ. ಅತಿಥಿಗಳಿಗೆ ನೀರು ನೀಡುವುದು ಅವರಿಗೆ ಗೌರವ ಮತ್ತು ಆತಿಥ್ಯವನ್ನು ತೋರಿಸುವ ಒಂದು ಮಾರ್ಗವಾಗಿದೆ. ಮತ್ತು ಇದು ನೀವು ಅವರ ಬಗ್ಗೆ ಕಾಳಜಿ ವಹಿಸುತ್ತೀರಿ ಎಂಬುದನ್ನು ತೋರಿಸುತ್ತದೆ.
ಪ್ರಾಚೀನ ಸಂಪ್ರದಾಯ: ಹಿಂದೆಲ್ಲಾ ಪ್ರಯಾಣ ತುಂಬಾ ಕಷ್ಟಕರವಾಗಿತ್ತು. ಜನರು ಎತ್ತಿನ ಗಾಡಿಗಳು, ನಡೆದುಕೊಂಡೇ ಪ್ರಯಾಣಿಸುತ್ತಿದ್ದರು. ಹೀಗೆ ಸುಸ್ತಾಗಿ ಬಂದ ಅತಿಥಿ, ನೆಂಟರ ಬಾಯಾರಿಕೆ ಮತ್ತು ಆಯಾಸವನ್ನು ನೀಗಿಸಲು ಅವರು ಬಂದ ತಕ್ಷಣ ಮೊದಲು ನೀರನ್ನೇ ಕೊಡುತ್ತಿದ್ದರು. ಈ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ. ಹೀಗೆ ಮನೆಗೆ ಬಂದ ತಕ್ಷಣ ನೀರು ಕುಡಿಯುವುದರಿಂದ ಸುಸ್ತು ಮತ್ತು ಹೊರಗಿನ ಶಾಖದಿಂದ ಪರಿಹಾರ ಸಿಗುತ್ತದೆ.
ಸಕಾರಾತ್ಮಕ ಶಕ್ತಿ: ನೀರು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ನಂಬಿಕೆಯಿದೆ. ಇದಕ್ಕಾಗಿಯೂ ಅತಿಥಿಗಳಿಗೆ ಮೊದಲು ನೀರನ್ನೇ ಕೊಡಲಾಗುತ್ತದೆ.
ಶುಭದ ಸಂಕೇತ: ನೀರನ್ನು ಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಅತಿಥಿಗಳಿಗೆ ಮೊದಲು ನೀರನ್ನು ನೀಡುವುದರಿಂದ ಇದರಿಂದ ಶುಭವಾಗುತ್ತದೆ, ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ ಎಂಬ ನಂಬಿಕೆಯಿದೆ.
ಇದನ್ನೂ ಓದಿ: ಬೆಳಿಗ್ಗೆ ನೀವು ಮಾಡುವ ಈ ತಪ್ಪುಗಳಿಂದ ಇಡೀ ದಿನವೇ ಹಾಳಾಗುತ್ತದೆ
ನಂಬಿಕೆ: ನಂಬಿಕೆಗಳ ಪ್ರಕಾರ, ಮನೆಗೆ ಬರುವ ಅತಿಥಿಯು ಎಲ್ಲಿಂದ ಬಂದಿದ್ದಾನೆ, ಆತ ನಕಾರಾತ್ಮಕ ಅಥವಾ ಸಕಾರಾತ್ಮಕ ಶಕ್ತಿಯನ್ನು ತಂದಿದ್ದಾನೆಯೇ? ಎಂಬುದು ಗೊತ್ತಿರುವುದಿಲ್ಲ. ಹೀಗಿರುವಾಗ ಆತನಿಗೆ ಮೊದಲು ನೀರನ್ನು ಕೊಡುವುದರಿಂದ, ನೀರು ಅತಿಥಿಯ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅತಿಥಿಗಳಿಗೆ ಮೊದಲು ನೀರು ನೀಡುವುದು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಸಭ್ಯ, ಸುಸಂಸ್ಕೃತ ಪದ್ಧತಿಯಾಗಿದ್ದು, ಹೀಗೆ ಅತಿಥಿಗಳಿಗೆ ನೀರನ್ನು ನೀಡುವ ಉದ್ದೇಶವು ಅವರ ಬಾಯಾರಿಕೆಯನ್ನು ನೀಗಿಸುವುದು ಮಾತ್ರವಲ್ಲ, ಆತಿಥ್ಯದ ಒಂದು ಭಾಗವೂ ಭಾಗವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:49 pm, Sun, 17 August 25








