ಫಾಸ್ಟ್ ಫ್ಯಾಷನ್ ಇಷ್ಟವೇ? ಬಟ್ಟೆಗಳು ಹೆಚ್ಚು ದಿನ ಬಾಳಿಕೆ ಬರಲು ಈ ಸರಳ ವಿಧಾನ ಅನುಸರಿಸಿ
ಫಾಸ್ಟ್ ಫ್ಯಾಷನ್‌ನಿಂದಾಗಿ ಹೊಸ ಬಟ್ಟೆಗಳನ್ನು ಪದೇಪದೇ ಖರೀದಿಸುವ ಅಭ್ಯಾಸ ಹೆಚ್ಚಾಗಿದೆ. ಆದರೆ ಸರಿಯಾದ ರೀತಿಯಲ್ಲಿ ತೊಳೆಯುವುದು, ಒಣಗಿಸುವುದು, ಸಂಗ್ರಹಿಸುವುದು ಮತ್ತು ಸಣ್ಣ ಹಾನಿಗಳನ್ನು ಸರಿಪಡಿಸುವ ಮೂಲಕ ಬಟ್ಟೆಗಳನ್ನು ಹೆಚ್ಚು ಕಾಲ ಬಳಸಬಹುದು. ಒಂದೇ ಬಟ್ಟೆಯನ್ನು ವಿಭಿನ್ನ ರೀತಿಯಲ್ಲಿ ಸ್ಟೈಲ್ ಮಾಡುವ ಮೂಲಕ ಹೊಸ ಖರೀದಿಯ ಅಗತ್ಯವನ್ನೂ ಕಡಿಮೆ ಮಾಡಬಹುದು.

ಮುಖ್ಯಾಂಶಗಳು
- ನಿಮ್ಮ ಬಟ್ಟೆಗಳು ಹೆಚ್ಚು ದಿನ ಬಾಳಿಕೆ ಬರಬೇಕೇ? ಈ ಟಿಪ್ಸ್ ಅನುಸರಿಸಿ!
- ಫಾಸ್ಟ್ ಫ್ಯಾಷನ್ ಬಟ್ಟೆಗಳನ್ನು ಬೇಗ ಹಾಳಾಗದಂತೆ ನೋಡಿಕೊಳ್ಳುವುದು ಹೇಗೆ?
- ಬಟ್ಟೆ ತೊಳೆಯುವಾಗ ಮಾಡುವ ಈ ತಪ್ಪುಗಳು ಅವುಗಳ ಬಾಳಿಕೆ ಕಡಿಮೆ ಮಾಡಬಹುದು!
ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಸಾಕಷ್ಟು ವೇಗವಾಗಿ ಬದಲಾಗುತ್ತಿದೆ. ಹೊಸ ಹೊಸ ವಿನ್ಯಾಸದ ಬಟ್ಟೆಗಳು ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ಆದರೆ ಫ್ಯಾಷನ್ ಟ್ರೆಂಡ್ (Trend) ಬದಲಾದ ತಕ್ಷಣ ಹಳೆಯ ಬಟ್ಟೆಗಳನ್ನು ಬಿಸಾಡುವ ಅಗತ್ಯವಿಲ್ಲ. ಸರಿಯಾದ ಆರೈಕೆ ಮತ್ತು ಬಳಸುವ ವಿಧಾನದಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ಬಟ್ಟೆಗಳನ್ನು ಹೆಚ್ಚು ಕಾಲ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು.
ನಾವು ಖರೀದಿಸುವ ಪ್ರತಿಯೊಂದು ಬಟ್ಟೆಯೂ ಒಂದೆರಡು ಬಾರಿ ಧರಿಸಿ ಬಿಸಾಡುವ ವಸ್ತುವಾಗಬಾರದು. ಬಟ್ಟೆಯನ್ನು ಸರಿಯಾಗಿ ಬಳಸುವುದು, ಅದರ ಗುಣಮಟ್ಟ ಕಾಪಾಡುವುದು ಮತ್ತು ಹಲವು ಸಂದರ್ಭಗಳಿಗೆ ಹೊಂದಿಕೊಳ್ಳುವಂತೆ ಧರಿಸುವುದು ಪರಿಸರದ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಹಣದ ಉಳಿತಾಯಕ್ಕೂ ಸಹಾಯ ಮಾಡುತ್ತದೆ. ಜೂಲಿಯೆಟ್ ಅಪ್ಯಾರಲ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕ್ರುತಿಕ್ ತ್ರೆವಾಡಿಯಾ ಅವರು ಬಟ್ಟೆಗಳ ಬಾಳಿಕೆ ಹೆಚ್ಚಿಸಲು ಕೆಲವು ಸರಳ ಸಲಹೆಗಳನ್ನು ನೀಡಿದ್ದಾರೆ.
ತೊಳೆಯುವಾಗ ಸೂಚನೆ ಪಾಲಿಸಿ
ಪ್ರತಿಯೊಂದು ಬಟ್ಟೆಗೂ ಅದರದ್ದೇ ಆದ ತೊಳೆಯುವ ವಿಧಾನವಿರುತ್ತದೆ. ಬಟ್ಟೆಯ ಮೇಲಿರುವ ತೊಳೆಯುವ ಸೂಚನೆಗಳನ್ನು ಗಮನಿಸಿ ಅದೇ ರೀತಿಯಲ್ಲಿ ತೊಳೆಯುವುದು ಮುಖ್ಯ. ಅಗತ್ಯವಿಲ್ಲದಿದ್ದರೆ ಪದೇಪದೇ ಬಟ್ಟೆ ತೊಳೆಯುವುದನ್ನು ತಪ್ಪಿಸಬೇಕು. ಸೂಕ್ತ ತಾಪಮಾನದ ನೀರನ್ನು ಬಳಸುವುದು ಮತ್ತು ಒಣಗಿಸುವಾಗ ಹೆಚ್ಚಿನ ಶಾಖಕ್ಕೆ ಒಡ್ಡದಿರುವುದು ಬಟ್ಟೆಯ ಗುಣಮಟ್ಟ ಕಾಪಾಡಲು ಸಹಾಯ ಮಾಡುತ್ತದೆ.
ಒಳ ಉಡುಪು, ಲಿಂಗರಿ, ವ್ಯಾಯಾಮದ ಬಟ್ಟೆಗಳು ಮತ್ತು ಮನೆಯಲ್ಲಿರುವಾಗ ಧರಿಸುವ ಬಟ್ಟೆಗಳಿಗೆ ಇದು ಇನ್ನಷ್ಟು ಮುಖ್ಯ. ಏಕೆಂದರೆ ಇವುಗಳಲ್ಲಿರುವ ಸ್ಥಿತಿಸ್ಥಾಪಕ ಗುಣ, ಬಟ್ಟೆಯ ಕಾರ್ಯಕ್ಷಮತೆ ಮತ್ತು ದೇಹಕ್ಕೆ ಹೊಂದಿಕೊಳ್ಳುವಿಕೆ ದೀರ್ಘಕಾಲ ಉಳಿಯಬೇಕಾಗುತ್ತದೆ.
ಒಂದೇ ಬಟ್ಟೆಯಿಂದ ವಿಭಿನ್ನ ಲುಕ್
ಬಟ್ಟೆಯ ಬಾಳಿಕೆ ಹೆಚ್ಚಿಸಲು ಅದನ್ನು ಹೇಗೆ ಧರಿಸುತ್ತೇವೆ ಎಂಬುದೂ ಮುಖ್ಯ. ಸರಳ ವಿನ್ಯಾಸದ ಒಂದು ಉತ್ತಮ ಬಟ್ಟೆಯನ್ನು ಬೇರೆ ಬೇರೆ ಬಟ್ಟೆಗಳೊಂದಿಗೆ ಹೊಂದಿಸಬಹುದು. ಮೇಲಂಗಿ, ವಿವಿಧ ವಿನ್ಯಾಸದ ಬಟ್ಟೆಗಳು ಅಥವಾ ಆಕ್ಸೆಸರೀಸ್‌ಗಳನ್ನು ಬಳಸಿಕೊಂಡು ಒಂದೇ ಬಟ್ಟೆಯಿಂದ ಹಲವು ರೀತಿಯ ಲುಕ್ ಪಡೆಯಬಹುದು. ಹೀಗೆ ಮಾಡುವುದರಿಂದ ಪ್ರತಿಯೊಂದು ಹೊಸ ಸಂದರ್ಭಕ್ಕೂ ಹೊಸ ಬಟ್ಟೆ ಖರೀದಿಸುವ ಅಗತ್ಯ ಕಡಿಮೆಯಾಗುತ್ತದೆ. ಅದೇ ಬಟ್ಟೆಯನ್ನು ವಿಭಿನ್ನ ರೀತಿಯಲ್ಲಿ ಧರಿಸುವುದರಿಂದ ಅದರ ಬಳಕೆಯೂ ಹೆಚ್ಚಾಗುತ್ತದೆ.
ಹೊಟ್ಟೆ ತುಂಬ ಊಟ ಮಾಡಿದರೂ ಮತ್ತೆ ಹಸಿವಾಗುತ್ತಿದೆಯೇ? ಇದಕ್ಕೆ ಈ ಕಾರಣಗಳಿರಬಹುದು!
ಬಟ್ಟೆಯ ವಸ್ತು ತಿಳಿದುಕೊಳ್ಳಿ
ಎಲ್ಲಾ ಬಟ್ಟೆಗಳೂ ಒಂದೇ ರೀತಿಯ ವಸ್ತುಗಳಿಂದ ತಯಾರಾಗಿರುವುದಿಲ್ಲ. ಹೀಗಾಗಿ ಅವುಗಳ ಆರೈಕೆಯ ವಿಧಾನವೂ ಭಿನ್ನವಾಗಿರುತ್ತದೆ. ನೀವು ಖರೀದಿಸುವ ಬಟ್ಟೆ ಯಾವ ರೀತಿಯ ಬಟ್ಟೆಯಿಂದ ತಯಾರಾಗಿದೆ ಎಂಬುದನ್ನು ತಿಳಿದುಕೊಂಡು, ಅದಕ್ಕೆ ಸೂಕ್ತವಾದ ರೀತಿಯಲ್ಲಿ ತೊಳೆಯುವುದು ಮತ್ತು ಸಂಗ್ರಹಿಸುವುದು ಉತ್ತಮ.
ಬಟ್ಟೆಯ ಮೇಲೆ ಸೇರಿರುವ ಧೂಳು ಅಥವಾ ನೂಲಿನ ಸಣ್ಣ ತುಣುಕುಗಳನ್ನು ತೆಗೆದುಹಾಕಲು ಬ್ರಷ್, ಲಿಂಟ್ ರೋಲರ್ ಮತ್ತು ಸ್ವೆಟರ್ ಕಾಂಬ್‌ನಂತಹ ಉಪಕರಣಗಳನ್ನು ಬಳಸಬಹುದು. ಇದರಿಂದ ಹೆಚ್ಚು ಬಾರಿ ತೊಳೆಯುವ ಅಗತ್ಯವಿಲ್ಲದೇ ಬಟ್ಟೆಯನ್ನು ಸ್ವಚ್ಛವಾಗಿ ಹಾಗೂ ತಾಜಾವಾಗಿ ಇಟ್ಟುಕೊಳ್ಳಬಹುದು.
ಹರಿದರೆ ತಕ್ಷಣ ಬಿಸಾಡಬೇಡಿ
ಕೆಲವೇ ಬಾರಿ ಧರಿಸಿದ ನಂತರ ಬಟ್ಟೆಯಲ್ಲಿ ಸಣ್ಣ ಹರಿತ ಅಥವಾ ಹಾನಿ ಕಾಣಿಸಿಕೊಂಡರೆ ಅದನ್ನು ತಕ್ಷಣ ಬಿಸಾಡುವ ಅಗತ್ಯವಿಲ್ಲ. ಸಾಧ್ಯವಾದರೆ ಅದನ್ನು ಸರಿಪಡಿಸಿಕೊಂಡು ಮತ್ತೆ ಬಳಸಬಹುದು. ಹಳೆಯ ಬಟ್ಟೆಗಳನ್ನು ಬೇರೆ ಉದ್ದೇಶಕ್ಕೆ ಬಳಸುವುದು ಅಥವಾ ಹೊಸ ರೀತಿಯಲ್ಲಿ ರೂಪಿಸುವ ಅಭ್ಯಾಸವೂ ಹೆಚ್ಚುತ್ತಿದೆ.
ಒಂದೇ ಬಟ್ಟೆಯನ್ನು ಬೇರೆ ಬೇರೆ ಸಂದರ್ಭಗಳಲ್ಲಿ ವಿಭಿನ್ನ ರೀತಿಯಲ್ಲಿ ಧರಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಇದರಿಂದ ಬಟ್ಟೆಯ ಬಳಕೆ ಹೆಚ್ಚುವುದರ ಜೊತೆಗೆ ಅನಗತ್ಯ ಖರೀದಿ ಮತ್ತು ಬಟ್ಟೆ ತ್ಯಾಜ್ಯವೂ ಕಡಿಮೆಯಾಗಬಹುದು.
ಬಟ್ಟೆಗಳನ್ನು ಸರಿಯಾಗಿ ಸಂಗ್ರಹಿಸಿ
ಬಟ್ಟೆಯ ಬಾಳಿಕೆ ಹೆಚ್ಚಿಸಲು ಕೊನೆಯದಾಗಿ ಗಮನಿಸಬೇಕಾದದ್ದು ಅದರ ಸಂಗ್ರಹಣೆ. ಎಲ್ಲ ಬಟ್ಟೆಗಳನ್ನೂ ಒಂದೇ ರೀತಿಯಲ್ಲಿ ಮಡಚಿ ಅಥವಾ ತುಂಬಿಕೊಂಡು ಇಡುವುದು ಸರಿಯಾದ ವಿಧಾನವಲ್ಲ. ಕೆಲವು ಬಟ್ಟೆಗಳನ್ನು ನೇತುಹಾಕುವುದು ಸೂಕ್ತವಾಗಿದ್ದರೆ, ಇನ್ನೂ ಕೆಲವು ಬಟ್ಟೆಗಳನ್ನು ಮಡಚಿ ಇಡುವುದು ಉತ್ತಮ. ಬಟ್ಟೆಯನ್ನು ಖರೀದಿಸುವಾಗ ಅದರ ಆರೈಕೆ ಮತ್ತು ಸಂಗ್ರಹಣೆಗೆ ಸಂಬಂಧಿಸಿದ ಸೂಚನೆಗಳನ್ನು ಪರಿಶೀಲಿಸಿ, ಅದರಂತೆ ಸಂಗ್ರಹಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




