
ಕೊರಿಯನ್ ಮಹಿಳೆಯರಂತೆ ಸುಂದರ, ಕಾಂತಿಯುತ ತ್ವಚೆ (glowing skin) ನಮ್ಮದಾಗಬೇಕೆಂಬ ಬಯಕೆ ಪ್ರತಿಯೊಬ್ಬ ಮಹಿಳೆಯರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ದುಬಾರಿ ಕ್ರೀಮ್ ಬಳಕೆ ಮಾಡುತ್ತಾರೆ. ತ್ವಚೆಯ ಹೊಳಪು ಹೆಚ್ಚಾಗಬೇಕೆಂದು ಫೇಶಿಯಲ್ ಸೇರಿದಂತೆ ಇತ್ಯಾದಿ ಪ್ರಯೋಗಗಳನ್ನು ಮಾಡುತ್ತಾರೆ. ಇದರಿಂದ ತ್ವಚೆಯ ಸೌಂದರ್ಯ ಹೆಚ್ಚಾಗುವ ಬದಲು ಮೊಡವೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುವುದೇ ಹೆಚ್ಚು. ಇದರ ಬದಲು ಹೆಚ್ಚು ಹಣ ಖರ್ಚು ಮಾಡದೆ ಈ ಕೆಲವೊಂದಷ್ಟು ಸಲಹೆಗಳನ್ನು ಪಾಲಿಸುವ ಮೂಲಕ ನೈಸರ್ಗಿಕ ರೀತಿಯಲ್ಲಿ ಕೊರಿಯನ್ ಮಹಿಳೆಯರಂತೆ ಕಾಂತಿಯುತ ತ್ವಚೆಯನ್ನು ನೀವು ಕೂಡ ಪಡೆಯಬಹುದು. ಅದಕ್ಕಾಗಿ ಏನು ಮಾಡಬೇಕು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.
ಟೋನರ್: ಟೋನರ್ ತ್ವಚೆಗೆ ತೇವಾಂಶವನ್ನು ನೀಡುತ್ತದೆ. ಜೊತೆಗೆ ಇದು ತ್ವಚೆಯನ್ನು ಮೃದುವಾಗಿಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ದುಬಾರಿ ಟೋನರ್‌ಗಳನ್ನು ಬಳಸಬೇಕಿಲ್ಲ, ರೋಸ್ ವಾಟರ್ ಕೂಡ ಉತ್ತಮವಾಗಿ ಕೆಲಸ ಮಾಡುತ್ತದೆ. ರೋಸ್ ವಾಟರನ್ನು ಹತ್ತಿಯ ಉಂಡೆಯಿಂದ ಮುಖಕ್ಕೆ ಹಚ್ಚಿ ಇಲ್ಲದಿದ್ದರೆ ಸ್ಪ್ರೇ ಕೂಡ ಮಾಡಬಹುದು.
ಸೀರಮ್ ಹಚ್ಚಿ: ಕೊರಿಯನ್ ಸ್ಕಿನ್‌ಕೇರ್‌ನಲ್ಲಿ ಸೀರಮ್‌ಗಳನ್ನು ಅತ್ಯಗತ್ಯವೆಂದು ಪರಿಗಣಿಸಲಾಗುತ್ತದೆ. ಈ ಸೀರಮ್ ತ್ವಚೆಗೆ ಅಗತ್ಯವಿರುವ ಹವಾರು ವಿಟಮಿನ್‌ಗಳು ಮತ್ತು ಆಂಟಿ ಆಕ್ಸಿಡೆಂಟ್‌ಗಳನ್ನು ಒಳಗೊಂಡಿರುತ್ತವೆ. ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಸಹಕಾರಿ. ಇದಕ್ಕಾಗಿ ಅಲೋವೆರಾ ಜೆಲ್ ಮತ್ತು ವಿಟಮಿನ್ ಇ ಕ್ಯಾಪ್ಸುಲ್‌ಗಳನ್ನು ಬೆರೆಸಿ ನೀವು ಮನೆಯಲ್ಲಿಯೇ ನೈಸರ್ಗಿಕ ಸೀರಮ್ ತಯಾರಿಸಬಹುದು. ಮಲಗುವ ಮುನ್ನ ಅದನ್ನು ನಿಮ್ಮ ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ.
ಮಾಯಿಶ್ಚರೈಸರ್ ಬಳಸಿ: ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಮಾಯಿಶ್ವರೈಸರ್ ಬಳಸುವುದು ಸಹ ಮುಖ್ಯ. ಇದು ಶುಷ್ಕತೆಯನ್ನು ನಿವಾರಿಸಿ ತ್ವಚೆಯನ್ನು ಮೃದುವಾಗಿಸುತ್ತದೆ. ವಿಶೇಷವಾಗಿ ಒಣ ಚರ್ಮಕ್ಕೆ ಕ್ರೀಮ್ ಅಥವಾ ತೆಂಗಿನ ಎಣ್ಣೆಯನ್ನು ಲಘುವಾಗಿ ಹಚ್ಚುವುದು ಸೂಕ್ತವಾಗಿದೆ. ಇದು ತ್ವಚೆಯ ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಫೇಸ್ ಪ್ಯಾಕ್: ವಾರಕ್ಕೆ ಒಂದು ಅಥವಾ ಎರಡು ಬಾರಿ ಮೊಸರು ಮತ್ತು ಜೇನುತುಪ್ಪದ ಫೇಸ್ ಪ್ಯಾಕ್ ಹಚ್ಚಿಕೊಳ್ಳಿ. ಮೊಸರು ಚರ್ಮವನ್ನು ತಂಪಾಗಿಸುತ್ತದೆ ಮತ್ತು ಜೇನುತುಪ್ಪವು ತ್ವಚೆಗೆ ನೈಸರ್ಗಿಕ ಹೊಳಪನ್ನು ತರುತ್ತದೆ. ಅಲ್ಲದೆ ಈ ಫೇಸ್‌ಪ್ಯಾಕ್ ಮೊಡವೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಮುಖಕ್ಕೆ ಹೊಳಪನ್ನು ತರುತ್ತದೆ.
ಇದನ್ನೂ ಓದಿ: ಜೀವನದಲ್ಲಿ ಸಂತೋಷ ಬೇಕೆಂದರೆ ನೀವು ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ
ಉತ್ತಮ ಆಹಾರ ಸೇವನೆ: ಕಾಂತಿಯುತ ತ್ವಚೆಗಾಗಿ ಬಾಹ್ಯ ಆರೈಕೆ ಮಾತ್ರವಲ್ಲ, ಒಳಗಿನಿಂದ ಪೋಷಣೆ ಮಾಡುವುದು ಕೂಡ ಅತ್ಯಗತ್ಯ. ಅದಕ್ಕಾಗಿ ದಿನಕ್ಕೆ ಎಂಟು ಗ್ಲಾಸ್ ನೀರು ಕುಡಿಯಿರಿ, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ, ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಸೇವಿಸುವುದನ್ನು ಮಿತಿಗೊಳಿಸಿ.
ನಿದ್ರೆ ಮತ್ತು ಒತ್ತಡ ರಹಿಸತ ಜೀವನ: ಕೊರಿಯನ್ ಮಹಿಳೆಯರ ಸುಂದರ ತ್ವಚೆಯ ಹಿಂದಿನ ಪ್ರಮುಖ ಕಾರಣವೆಂದರೆ ಸರಿಯಾದ ನಿದ್ರೆ ಮತ್ತು ಒತ್ತಡ ರಹಿತ ಜೀವನ. ಮನಸ್ಸು ಸಂತೋಷವಾಗಿದ್ದಾಗ ಅದರ ಪರಿಣಾಮಗಳು ನೇರವಾಗಿ ಮುಖದ ಮೇಲೆ ಪ್ರತಿಫಲಿಸುತ್ತದೆ. ಹಾಗಾಗಿ ತ್ವಚೆಯ ಕಾಂತಿಯನ್ನು ಕಾಪಾಡಿಕೊಳ್ಳಲು ಸರಿಯಾಗಿ ನಿದ್ರೆ ಮಾಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ