ಪ್ರಾಚೀನಕಾಲದಿಂದ ಕಂದ ಮೂಲ ಅಂದರೆ ಗೆಡ್ಡೆ-ಗೆಣಸುಗಳು ಮನುಷ್ಯರ ಆಹಾರ ಪದ್ಧತಿಯಾಗಿ ಮಹತ್ವದ ಸ್ಥಾನ ಪಡೆದಿವೆ. ವನವಾಸಕ್ಕೆ ಹೋದಾಗ ರಾಮ, ಸೀತೆ, ಲಕ್ಷ್ಮಣರು ಬನದ ಕಂದ ಮೂಲಗಳನ್ನು ತಿಂದು ಜೀವಿಸಿದ್ದರು. ಹೀಗಾಗಿ ಕಂದ ಮೂಲ ಬಹಳ ಪುರಾತನ ಆಹಾರ. ಮನುಷ್ಯ (Human) ತನ್ನ ಬೇಟೆ ಪದ್ಧತಿ ಮುಗಿದ ಮೇಲೆ ಮೊದಲು ತನ್ನ ಆಹಾರಕ್ಕಾಗಿ ಮೊರೆ ಹೋಗಿದ್ದು ಈ ಗೆಡ್ಡೆ-ಗೆಣಸುಗಳತ್ತ. ಗೆಡ್ಡೆ- ಗೆಣಸುಗಳ ವೈಶಿಷ್ಟ್ಯ ಎಂದರೆ ಇದಕ್ಕೆ ಯಾವುದೇ ರೀತಿಯ ರಾಸಾಯನಿಕಗಳ ಅವಶ್ಯಕತೆ ಇಲ್ಲ. ಇದು ನೈಸರ್ಗಿಕವಾಗಿ ಬೆಳೆಯುವಂತದ್ದು. ಆದರೆ ಈ ಬಗ್ಗೆ ಮಾಹಿತಿಯ ಕೊರತೆ ಇದೆ. ಬರಿ ಗೆಡ್ಡೆ-ಗೆಣಸುಗಳಲ್ಲ. ನಮ್ಮ ಸುತ್ತಮುತ್ತ ಇರುವ ಅದೆಷ್ಟೋ ಗಿಡ, ಹೂವು, ಬೀಜ, ತರಕಾರಿ ಇವುಗಳ ಆರೋಗ್ಯ(Health) ಗುಣಗಳ ಬಗ್ಗೆ ನಮ್ಮಲ್ಲಿ ಮಾಹಿತಿಯ ಕೊರತೆ ಇದೆ. ಇದನ್ನು ಅರಿತ ಸಾವಯಾವ ಕೃಷಿಕರ ಬಳಗದ ನಿರ್ದೇಶಕ ಜಿ. ಕೃಷ್ಣ ಪ್ರಸಾದ್ ಮೂರು ವರ್ಷಗಳ ಹಿಂದೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಅದರಂತೆ ಕ್ಯಾಲೆಂಡರ್ (Calendar) ಮೂಲಕ ಮನೆ ಮನೆಗೆ ಮರೆತು ಹೋದ ಆಹಾರಗಳ ಬಗ್ಗೆ ಮಾಹಿತಿ ನೀಡಲು ಮುಂದಾಗಿದ್ದಾರೆ.
ಗೆಡ್ಡೆಗೆಣಸು ಎಂದರೆ ನಮ್ಮ ಮುಂದೆ ಬರುವುದು ಕ್ಯಾರೆಟ್, ಬಿಟ್ರೂಟ್, ಮೂಲಂಗಿ. ಆದರೆ ಡೈಯಸ್ಕೋರಿ ಕುಟುಂಬದ ನೂರಾರು ತರಹದ ಬೇರು ಗಡ್ಡೆಗಳಿವೆ. ಇದು ಪೋಷಕಾಂಶದ ಖಜಾನೆ. ಇಗಿನ ಜಾಗತಿಕವಾಗಿ ವಾತಾವರಣ ಬದಲಾವಣೆಗಳಿಂದಾಗಿ ಉಂಟಾಗುವ ಆರೋಗ್ಯ ಸಮಸ್ಯೆಗೂ ಇದು ಪರಿಹಾರ. ಹೀಗಿರುವಾಗ ಪ್ರಾಚೀನ ಕಾಲದ ಗೆಡ್ಡೆ-ಗೆಣಸು, ಬೀಜಗಳು, ಸೊಪ್ಪು ಮತ್ತು ಹೂವುಗಳ ಬಗ್ಗೆ ಗ್ರಾಹಕರಿಗೆ ಹಾಗೂ ರೈತರಿಗೆ ಮಾಹಿತಿ ಕೊರತೆ ಇದೆ. ಹೀಗಾಗಿ ಅವರಿಗೆ ಅರಿವು ಮೂಡಿಸಲು ಮರೆತು ಹೋದ ಆಹಾರ ಎಂಬ ಹೆಸರಿನ ಅಡಿಯಲ್ಲಿ ಕ್ಯಾಲೆಂಡರ್ ತಂದಿದ್ದೇವೆ. ಕಳೆದ ಮೂರು ವರ್ಷಗಳಿಂದ ಕ್ಯಾಲೆಂಡರ್ ಜಾರಿಗೆ ತಂದ್ದಿದ್ದೇವೆ. 2020 ರಿಂದ ಇದು ಗ್ರಾಹಕರ ಮನೆಗಳಿಗೆ ತಲುಪುತ್ತಿದೆ. ಇದರಲ್ಲಿ ವಿಶೇಷವಾಗಿ ಬರಿ ಒಂದು ಆಹಾರಕ್ಕೆ ಬಳಕೆಯಾಗುವ ಪದಾರ್ಥದ ಬಗ್ಗೆ ವಿವರಣೆ ನೀಡಿಲ್ಲ. ಬದಲಾಗಿ ಇದರಿಂದ ಏನೆಲ್ಲ ಅಡುಗೆ ಮಾಡಬಹುದು ಎಂಬ ಕುರಿತು ಅಂದರೆ ಪಾಕವಿಧಾನದ ಬಗ್ಗೆಯೂ ಮಾಹಿತಿ ನೀಡಿದ್ದೇವೆ. ಇದು ಈ ಕ್ಯಾಲೆಂಡರ್ನ ಹೆಗ್ಗಳಿಕೆ ಎಂದು ಸಾವಯಾವ ಕೃಷಿಕರ ಬಳಗದ ನಿರ್ದೇಶಕ ಜಿ. ಕೃಷ್ಣ ಪ್ರಸಾದ್ ಟಿವಿ9 ಡಿಜಿಟಲ್ ಜತೆ ಮಾತನಾಡುತ್ತಾ ವಿವರಿಸಿದ್ದಾರೆ
ಮಣಿಪುರದ ತಾವರೆ ಹೂವಿನ ಪಾಕವಿಧಾನ, ತಮಿಳುನಾಡಿನ ಕೆಲವು ಆಹಾರ ಪದ್ಧತಿ, ರಾಜಸ್ತಾನದ ರೆಸಿಪಿ ಈ ಕ್ಯಾಲೆಂಡರ್ನಲ್ಲಿ ಇದೆ. ದೇಶದುದ್ದಕ್ಕೂ ಬಳಕೆಗೆ ಬರುವ ಆಹಾರ ಕ್ರಮದ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಕ್ಯಾಲೆಂಡರ್ ಜಾರಿಗೆ ತಂದಿದ್ದೇವೆ. ಕಳೆದ ವರ್ಷ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಕ್ಯಾಲೆಂಡರ್ ತಂದಿದ್ದೇವೆ. ಈ ವರ್ಷ ತಮಿಳು ಮತ್ತು ಇಂಗ್ಲಿಷ್ನಲ್ಲಿ ಕ್ಯಾಲೆಂಡರ್ ಅನ್ನು ತಂದಿದ್ದೇವೆ ಎಂದು ಸಾವಯಾವ ಕೃಷಿಕರ ಬಳಗದ ನಿರ್ದೇಶಕ ಜಿ. ಕೃಷ್ಣ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಆಹಾರವಾಗಬಲ್ಲ ಹೂವಿನ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯಿರಿ
ತಂಗಡಿ ಹೂವು (ಆವರಿಕೆ)
ಈ ಹೂವು ಸಾಕಷ್ಟು ಔಷಧಿಯ ಗುಣಗಳನ್ನು ಒಳಗೊಂಡಿದೆ. ಹೃದಯಸ್ತಂಭನ ತಡೆಯುವ ಸಾಮರ್ಥ್ಯ ಇದಕ್ಕಿದೆ ಎಂದು ಹೇಳಲಾಗುತ್ತಿದ್ದು, ಹಿಂದೆಲ್ಲ ಮಹಿಳೆಯರು ತಮ್ಮ ತಲೆಕೂದಲಲ್ಲಿ ಈ ಹೂವುಗಳನ್ನು ಮುಡಿದುಕೊಳ್ಳುತ್ತಿದ್ದರಂತೆ. ಚರ್ಮರೋಗ ನಿವಾರಿಸುವ ಗುಣದ ಜತೆಗೆ ಸಾಕಷ್ಟು ಆ್ಯಂಟಿಆಕ್ಸಿಡೆಂಡ್ಗಳೂ ಇದರಲ್ಲಿವೆ. ಮಧುಮೇಹ ನಿಯಂತ್ರಿಸುವ ತಂಗಡಿ, ಮಲಬದ್ಧತೆಯನ್ನು ನಿವಾರಿಸುತ್ತದೆ.
ಕುಂಬಳ ಹೂವು
ವಿಟಮಿನ್ ಬಿ9 ನಿಂದ ಸಮೃದ್ಧವಾಗಿರುವ ಕುಂಬಳ ಹೂವುಗಳು ಶೀತವನ್ನು ದೂರಮಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಈ ಹೂವುಗಳನ್ನು ಹಸಿಹಸಿಯಾಗಿಯೇ ತಿನ್ನಬಹುದು ಅಥವಾ ಗರಿಯಾದ ಪಕೋಡಾ ಮಾಡಿ ಸವಿಯಬಹುದು. ಸಂಜೆ ಹೊತ್ತು ಅರಳಿದ ಕಿತ್ತಳೆ ಅಥವಾ ಹಳದಿ ವರ್ಣದ ಹೂವುಗಳನ್ನು ಕಿತ್ತು ತಂದು, ಮಸಾಲೆ ಹಿಟ್ಟಿನಲ್ಲಿ ಅದ್ದಿ ಹೊಂಬಣ್ಣಕ್ಕೆ ತಿರುಗುವತನಕ ಎಣ್ಣೆಯಲ್ಲಿ ಕರಿಯಿರಿ. ಸಂಜೆಯ ಚಹಾದ ಜತೆ ಇದು ರುಚಿಕರ ತಿನಿಸು.
ಅಗಸೆ ಹೂವು
ಅಗಸ್ತ್ಯ ಋಷಿಯ ನೆನಪಿನಲ್ಲಿ ಈ ಸೊಬಗಿನ ಹೂವನ್ನು ಅಗಸೆ ಹೂವು ಎನ್ನಲಾಗುತ್ತದೆ. ಶರೀರದ ಒಳಗಿನ ಹಲವು ಬಗೆಯ ಕಾಯಿಲೆಗಳಿಗೆ ಇದು ಔಷಧಿ. ಸೆಸ್ಬೇನಿಯಾ ಗ್ರಾಂಡಿಫ್ಲೋರಾ ಎಂಬ ಸಸ್ಯಶಾಸ್ತ್ರೀಯ ಹೆಸರಿನ ಅಗಸೆ, ಚರ್ಮರೋಗ ನಿವಾರಕವೂ ಹೌದು. ಈ ಹೂವುಗಳಲ್ಲಿ ನಾಲ್ಕು ವರ್ಣಗಳಿವೆ. ಸೀತಾ-ಬಿಳಿ, ಪೀತ- ಹಳದಿ, ನೀಲ-ನೀಲಿ ಹಾಗೂ ಲೋಹಿತ-ಕೆಂಪು. ತಂಪುಕಾರಕ ಸ್ವಭಾವದ ಈ ಹೂವುಗಳಿಂದ ಉಪ್ಪಿನಕಾಯಿ, ಪಲ್ಯಗಳನ್ನು ಮಾಡಬಹುದು.
ಶಂಖ ಪುಷ್ಪ
ಶಂಖ ಪುಷ್ಪ ಒಣಗಿಸಿದ ಅಥವಾ ಹಸಿ ಹೂವುಗಳನ್ನು ಬೆರೆಸಿದರೆ ನೀರು ಅತ್ಯಾಕರ್ಷಕ ನೀಲಿಬಣ್ಣ ಪಡೆಯುತ್ತದೆ. ಈ ಮಿಶ್ರಣವನ್ನು ಬಿಸಿ ಅಥವಾ ತಂಪು ಮಾಡಿ ಕುಡಿದರೆ ಹುಳಿತೇಗು ಅಥವಾ ಹೊಟ್ಟೆನೋವು ಪರಿಹಾರವಾಗುತ್ತದೆ. ಇದು ಚಹಾ ಅಥವಾ ಕಾಫಿಗೆ ಪರ್ಯಾಯವಾಗಿದೆ. ಇದರಲ್ಲಿನ ಆ್ಯಂಟಿಆಕ್ಸಿಡೆಂಡ್ಗಳು ಶರೀರಕ್ಕೆ ರೋಗನಿರೋಧಕ ಶಕ್ತಿ ಕೊಡುತ್ತವೆ. ಶಂಖ ಪುಷ್ಟದ ಎಸಳುಗಳನ್ನು ತಿಂಡಿ-ತಿನಿಸುಗಳಿಗೆ ನೀಲಿ ವರ್ಣ ಬರುವಂತೆ ಮಾಡಲು ಬಳಸುತ್ತಾರೆ.
ನುಗ್ಗೆ ಹೂವು
ನುಗ್ಗೆ ಈಗ ಜತ್ತಿನಾದ್ಯಂತ ಮನ್ನಣೆ ಪಡೆದಿರುವ ಸೂಪರ್ ಫುಡ್. ಇದರ ಹೂವು ಬಿಳಿ ಬಣ್ಣದಿಂದ ಕೂಡಿದ್ದು, ತರಕಾರಿಯಂತೆಯೇ ಇದನ್ನು ಪಲ್ಯ, ಸಂಬಾರು, ಚಟ್ನಿ, ವಡಾ ಮಾಡಲು ಬಳಸಬಹುದು. ಇಂದಿನ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನುಗ್ಗೆ ಹೂವು ಸಹಕಾರಿ. ಒಂದು ವೇಳೆ, ಹೂವುಗಳು ಹೆಚ್ಚಿದ್ದರೆ ಅವುಗಳನ್ನು ಒಣಗಿಸಿ ಕೂಡ ಬಳಸಬಹುದು.
ಇದನ್ನೂ ಓದಿ:
ಭಾಷಾ ಪ್ರೇಮಕ್ಕೆ ಮುನ್ನುಡಿ ಬರೆದ ಕನ್ನಡ ಕ್ಯಾಲೆಂಡರ್; ಇದು ಕನ್ನಡಿಗರ ಹೆಮ್ಮೆ!
Lake Conservation: ಜನರ ಪಾಲುದಾರಿಕೆಯಿಂದ ಕೆರೆ ಸಮೃದ್ಧಿ ಯೋಜನೆಯ ಆಶಯಕ್ಕೆ ಹೊಸ ವೇಗ ಬಂತು: ಮದನ್ ಗೋಪಾಲ್