ಗುರು, ಶಿಷ್ಯರ ಸಂಬಂಧ ಎರಡು ಕಣ್ಣುಗಳಿದ್ದ ಹಾಗೆ. ಒಂದು ಕಣ್ಣಿಗೆ ಊನವಾದರೂ ಆ ಸಂಬಂಧಕ್ಕೆ ಪೆಟ್ಟು ಬೀಳುತ್ತದೆ. ಇಬ್ಬರಲ್ಲೂ ಅನ್ಯೋನ್ಯ ಸಂಬಂಧ ಇದ್ದಾಗ ಅವರ ಬಾಂಧವ್ಯಕ್ಕೆ ಧಕ್ಕೆಯಾಗುವುದಿಲ್ಲ. ಜೀವನದಲ್ಲಿ ಒಬ್ಬ ವ್ಯಕ್ತಿ ಶಿಷ್ಯನೂ ಆಗಬಲ್ಲ, ಗುರುವೂ ಆಗಬಲ್ಲ. ಹಾಗಾಗಿ ಇದು ಜಗತ್ತಿನ ಅತೀ ಶ್ರೇಷ್ಠ ಸಂಬಂಧಗಳಲ್ಲಿ ಒಂದು. ಜೀವನದಲ್ಲಿ ಒಳ್ಳೆಯ ಮನುಷ್ಯನಾಗಲು ಒಬ್ಬ ಗುರು ತುಂಬಾ ಮುಖ್ಯನಾಗುತ್ತಾನೆ. ಅವನ ಭೋದನೆಗಳು ವ್ಯಕ್ತಿಯ ಬದುಕನ್ನೇ ಬದಲಿಸುತ್ತದೆ, ಸನ್ಮಾರ್ಗದಲ್ಲಿ ನಡೆಸುತ್ತದೆ. ಹಾಗಾದರೆ ಗುರು, ಶಿಷ್ಯರ ಬಾಂಧವ್ಯ ಎಂಥದ್ದು? ಗುರು ಎಂದರೆ ಯಾರು? ತಿಳಿದುಕೊಳ್ಳಿ.
ಬಸವಣ್ಣನವರು ಹೇಳುವ ಪ್ರಕಾರ ಕುಂಬಾರ ತಯಾರು ಮಾಡುವ ಮಡಕೆಗೆ ಮೂಲ ವಸ್ತು ಮಣ್ಣು. ಆಭರಣ ಮಾಡಲು ಬೇಕಾದ ಮೂಲ ವಸ್ತು ಚಿನ್ನ. ಅದರಂತೆ ಶಿಷ್ಯನಿಗೆ ಗುರುವಿನ ಮಾರ್ಗದರ್ಶನ ಬೇಕಾಗುತ್ತದೆ. ಗುರುವಾದವನು ಲೌಕಿಕ ವಿಷಯಗಳಿಗೆ ಅಂಟಿಕೊಳ್ಳದೆ ಅಹಂಕಾರ ತ್ಯಜಿಸಬೇಕು. ಶಿಷ್ಯನ ಅಜ್ಞಾನ ನಿವಾರಿಸಿ ಅವನಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಬೇಕು, ಇಲ್ಲವಾದರೆ ಆತ ಗುರುವಾಗುವುದಿಲ್ಲ. ಅಜ್ಞಾನಾಂಧಕಾರ ದೂರ ಮಾಡಿಕೊಳ್ಳದಿದ್ದರೆ ಶಿಷ್ಯ ಶಿಷ್ಯನಾಗುವುದಿಲ್ಲ.
ಇನ್ನು ಗುರು ಶಿಷ್ಯರ ಸಾಲಿನಲ್ಲಿ ರಾಮಕೃಷ್ಣ ಪರಮಹಂಸರು ಮತ್ತು ಅವರ ಶಿಷ್ಯ ಸ್ವಾಮಿ ವಿವೇಕಾನಂದರು ಮುಂಚೂಣಿಯಲ್ಲಿ ಕಾಣುತ್ತಾರೆ. ಶ್ರೀ ರಾಮಕೃಷ್ಣ ಪರಮಹಂಸರು ಗುರು ಎಂದರೆ ಯಾರು ಎಂಬುದರ ವಿವರಣೆಯನ್ನು ಜೊತೆಗೆ ಬದುಕಿನಲ್ಲಿ ಗುರುವಿನ ಅವಶ್ಯಕತೆ ಇದೆಯೇ? ಎಂಬ ಪ್ರಶ್ನೆಗೆ ತುಂಬಾ ಸುಂದರವಾಗಿ ಉತ್ತರ ನೀಡಿದ್ದರು. ಅದೇನೆಂದರೆ, ಬದುಕಿನಲ್ಲಿ ಗುರು ಅನೇಕರಿಗೆ ಬೇಕಾಗುತ್ತಾನೆ. ಆದರೆ ಆತನ ವಾಕ್ಯದಲ್ಲಿ ಶ್ರದ್ಧೆಯಿಡಬೇಕು. ಗುರುವನ್ನು ಸಾಕ್ಷಾತ್ ಭಗವಂತ ಎಂದು ನೋಡಿದಾಗ ಮಾತ್ರವೇ ಆಧ್ಯಾತ್ಮಿಕ ಉನ್ನತಿ ಸಾಧ್ಯವಾಗುತ್ತದೆ. ಅವರು ಹೇಳುವಂತೆ ಗುರು- ಶಿಷ್ಯರ ಸಂಬಂಧ ದೇವ ಮತ್ತು ಭಕ್ತನ ನಡುವಿನ ಸಂಬಂಧವಿದ್ದಂತೆ. ಗುರುವನ್ನು ಎಂದಿಗೂ ಮನುಷ್ಯ ಎಂದು ಭಾವಿಸಬಾರದು. ಗುರುವಿನ ಕೃಪೆಯಿಂದ ಇಷ್ಟ ದೇವನ ದರ್ಶನ ದೊರೆಯುತ್ತದೆ. ಬಳಿಕ ಗುರು ಇಷ್ಟ ದೇವನಲ್ಲಿ ಲೀನವಾಗಿಬಿಡುತ್ತಾನೆ ಎಂಬುದು ಅವರ ನುಡಿಗಳಾಗಿತ್ತು.
ಇದನ್ನೂ ಓದಿ: ಗುರು ಪೂರ್ಣಿಮಾದಂದು ನಿಮ್ಮ ಪ್ರೀತಿಯ ಗುರುಗಳಿಗೆ ಈ ರೀತಿ ಶುಭಾಶಯ ಕೋರಿ
ಗುರು, ಶಿಷ್ಯರ ಬಾಂಧವ್ಯ ಹೇಗಿರಬೇಕು ಎಂಬ ಪರಿಕಲ್ಪನೆಗೆ, ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಅವರ ಗುರುಗಳು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ ಮಾತನ್ನು ತುಂಬಾ ಸುಂದರವಾಗಿ ವರ್ಣಿಸುತ್ತಾರೆ. “ಗುರುವಿಗಂಜಿ ಶಿಷ್ಯ, ಶಿಷ್ಯರಿಗಂಜಿ ಗುರು ನಡೆಯಬೇಕು’. ಗುರುವಿನ ತಪ್ಪನ್ನು ಶಿಷ್ಯ ತೋರಿಸಿದರೆ ಅದಕ್ಕಾಗಿ ಗುರು ಆತನ ಮೇಲೆ ಮುನಿಸಿಕೊಳ್ಳಬೇಕಾಗಿಲ್ಲ. ಬದಲಾಗಿ ತಪ್ಪನ್ನು ತಿದ್ದಿಕೊಳ್ಳುವ ಮೂಲಕ ಆ ಶಿಷ್ಯನ ಬೆನ್ನು ತಟ್ಟಬೇಕು. ಅದರಂತೆ ಶಿಷ್ಯ ತಪ್ಪು ಮಾಡಿದಾಗ ಅದನ್ನು ತೋರಿಸಿ ತಿದ್ದುವ ಕೆಲಸವನ್ನು ಮಾಡಬೇಕು. ತಪ್ಪು ತೋರಿಸಿದನಲ್ಲ ಎಂದು ಗುರು ಶಿಷ್ಯನ ಮೇಲೆ, ಶಿಷ್ಯ ಗುರುವಿನ ಮೇಲೆ ಮುನಿಸಿಕೊಳ್ಳಬಾರದು ಇದು ನಿಜವಾದ ಗುರು, ಶಿಷ್ಯರ ಬಾಂಧವ್ಯ ಎಂದು ಅವರು ಹೇಳುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ