
ದೀರ್ಘಾಯುಷ್ಯವನ್ನು (longevity) ಹೊಂದಲು, ಯಂಗ್ ಮತ್ತು ಆರೋಗ್ಯವಂತರಾಗಿರಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರೂ ಸಹ ಯಾವುದೇ ಆರೋಗ್ಯ ಸಮಸ್ಯೆಯಿಲ್ಲದೆ ನೂರ್ಕಾಲ ಬದುಕಬೇಕು ಎಂದು ಬಯಸುತ್ತಾರೆ. ಆದರೆ ಇಂದಿನ ಈ ಕಾಲದಲ್ಲಿ ಅನಾರೋಗ್ಯಕರ ಆಹಾರ ಪದ್ಧತಿ, ಕಳಪೆ ಜೀವನಶೈಲಿ ಇವೆಲ್ಲದರ ಕಾರಣದಿಂದಾಗಿ 30-40 ವರ್ಷಕ್ಕೆ ಆರೋಗ್ಯ ಕೈಕೊಡುತ್ತಿದೆ ಜೊತೆಗೆ ಆದರ್ಶ ಜೀವಿತಾವಧಿಯೂ ಕಡಿಮೆಯಾಗುತ್ತಿದೆ. ಹಾಗಾದರೆ, ದೀರ್ಘಾಯುಷ್ಯವನ್ನು ಪಡೆಯಲು, ಆರೋಗ್ಯವಂತರಾಗಿ ನೂರ್ಕಾಲ ಬಾಳಲು ಏನು ಮಾಡಬೇಕು? ಈ ಕೆಲವೊಂದು ಅಭ್ಯಾಸಗಳನ್ನು ಪ್ರತಿನಿತ್ಯ ಪಾಲಿಸುವ ಮೂಲಕ ಆರೋಗ್ಯ ಸಮಸ್ಯೆಗಳು ನಿಮ್ಮ ಬಳಿ ಸುಳಿಯದಂತೆ ನೋಡಿಕೊಳ್ಳಬಹುದು, ಆರೋಗ್ಯವಂತರಾಗಿ ದೀರ್ಘಕಾಲ ಜೀವನ ನಡೆಸಬಹುದು. ದೀರ್ಘಾಯುಷ್ಯಕ್ಕೆ ಸಹಕಾರಿಯಾದ ಆ ಅಭ್ಯಾಸಗಳು ಯಾವುದೆಂದು ನೋಡೋಣ ಬನ್ನಿ.
ಆರೋಗ್ಯಕರ ಆಹಾರ ಕ್ರಮ ಅನುಸರಿಸಿ: ಆರೋಗ್ಯಕರ ಜೀವನಕ್ಕೆ ಸಮತೋಲಿತ ಆಹಾರ ಸೇವನೆ ಅತ್ಯಗತ್ಯ. ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಪ್ರೋಟೀನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಆಹಾರಗಳು ಇರಬೇಕು. ಜಂಕ್ ಫುಡ್ ಮತ್ತು ಎಣ್ಣೆ ಮತ್ತು ಸಕ್ಕರೆ ಅಧಿಕವಾಗಿರುವ ಆಹಾರಗಳನ್ನು ತಪ್ಪಿಸಿ.
ನಿಯಮಿತವಾಗಿ ವ್ಯಾಯಾಮ ಮಾಡಿ: ದೈಹಿಕ ಚಟುವಟಿಕೆಯು ನಿಮ್ಮ ಆರೋಗ್ಯಕ್ಕೆ ಅತ್ಯಗತ್ಯ. ನಿಯಮಿತ ವ್ಯಾಯಾಮವು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ನಿಮ್ಮ ಹೃದಯ ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ನಡೆಯುವುದು, ಯೋಗ ಮಾಡುವುದು ಅಥವಾ ಇತರ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸಬಹುದು.
ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ದೈಹಿಕ ಆರೋಗ್ಯದಷ್ಟೇ ನಿಮ್ಮ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳುವುದು ಮುಖ್ಯ. ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಧ್ಯಾನ ಮತ್ತು ಪ್ರಾಣಾಯಾಮವನ್ನು ಅಭ್ಯಾಸ ಮಾಡಿ. ಅಲ್ಲದೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದರಿಂದ ನೀವು ಸಂತೋಷ ಮತ್ತು ಆರೋಗ್ಯವಾಗಿರಬಹುದು.
ಸಾಕಷ್ಟು ನಿದ್ರೆ ಪಡೆಯಿರಿ: ಉತ್ತಮ ಮತ್ತು ಸಾಕಷ್ಟು ನಿದ್ರೆ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ ಮತ್ತು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ವಯಸ್ಕರು ಪ್ರತಿದಿನ 7-8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ನಿದ್ರೆಯ ಕೊರತೆಯು ಹೃದಯ ಕಾಯಿಲೆ, ಬೊಜ್ಜು ಮತ್ತು ಖಿನ್ನತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು, ಇದು ನಿಮ್ಮ ಜೀವಿತಾವಧಿಯ ಮೇಲೆ ಪರಿಣಾಮ ಬೀರುತ್ತದೆ.
ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ: ಧೂಮಪಾನ ಮತ್ತು ಅತಿಯಾದ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಈ ಅಭ್ಯಾಸಗಳು ಹೃದಯ ಕಾಯಿಲೆ, ಕ್ಯಾನ್ಸರ್ ಮತ್ತು ಯಕೃತ್ತಿನ ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಬಯಸಿದರೆ, ಅವುಗಳಿಂದ ಸಾಧ್ಯವಾದಷ್ಟು ದೂರವಿರಿ.
ನಿಯಮಿತ ವೈದ್ಯಕೀಯ ತಪಾಸಣೆ: ನಿಮ್ಮ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಮತ್ತು ಯಾವುದೇ ಕಾಯಿಲೆಗಳಿಗೆ ಸಕಾಲಿಕ ಚಿಕಿತ್ಸೆ ಪಡೆಯಲು ವೈದ್ಯರೊಂದಿಗೆ ನಿಯಮಿತ ಸಮಾಲೋಚನೆಗಳು ಮತ್ತು ತಪಾಸಣೆಗಳು ಅತ್ಯಗತ್ಯ. ಇದು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ಸಮಾಜದೊಂದಿಗೆ ಸಂಪರ್ಕದಲ್ಲಿರಿ: ಸಾಮಾಜಿಕ ಸಂಬಂಧಗಳು, ಸಂಪರ್ಕಗಳು ನಿಮ್ಮ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಸಾಮಾಜಿಕ ಜೀವನದಲ್ಲಿ ಸಕ್ರಿಯರಾಗಿರುವುದು ನಿಮ್ಮನ್ನು ಸಂತೋಷ ಮತ್ತು ಮಾನಸಿಕವಾಗಿ ಸಮತೋಲನದಲ್ಲಿರಿಸುತ್ತದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದು ನಿಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ, ಇದು ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಪಡೆಯುವ ಸರಿಯಾದ ಮಾರ್ಗ ಯಾವುದು? 90% ಜನರಿಗೆ ಇದು ಗೊತ್ತೇ ಇಲ್ಲ
ಸಕಾರಾತ್ಮಕವಾಗಿ ಯೋಚಿಸಿ: ಸಕಾರಾತ್ಮಕವಾಗಿ ಯೋಚಿಸುವುದರಿಂದ ನೀವು ಹೆಚ್ಚು ಕಾಲ ಬದುಕಲು ಸಹಾಯವಾಗುತ್ತದೆ. ಹಲವಾರು ಅಧ್ಯಯನಗಳು ಸಕಾರಾತ್ಮಕವಾಗಿರುವುದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿವೆ. ನೀವು ಜೀವನದ ಬಗ್ಗೆ ಹೆಚ್ಚು ಸಕಾರಾತ್ಮಕ ಮತ್ತು ಆಶಾವಾದಿಗಳಾಗಿದ್ದಷ್ಟೂ, ನೀವು ಕಡಿಮೆ ಅನಾರೋಗ್ಯವನ್ನು ಅನುಭವಿಸುತ್ತೀರಿ ಮತ್ತು ಹೆಚ್ಚು ಕಾಲ ಆರೋಗ್ಯವಂತರಾಗಿ ಬದುಕುತ್ತೀರಿ.
ದೀರ್ಘಾಯುಷ್ಯ ಸಾಧಿಸಲು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು, ಸರಿಯಾಗಿ ಸಮತೋಲಿತ ಆಹಾರವನ್ನು ಸೇವನೆ ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ, ಆರೋಗ್ಯಕರ ಆಹಾರ ಮತ್ತು ಸಕಾರಾತ್ಮಕ ಮನಸ್ಥಿತಿಯು ದೀರ್ಘಾಯುಷ್ಯವನ್ನು ಪಡೆಯಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ