ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಪಡೆಯುವ ಸರಿಯಾದ ಮಾರ್ಗ ಯಾವುದು? 90% ಜನರಿಗೆ ಇದು ಗೊತ್ತೇ ಇಲ್ಲ
ನಮ್ಮ ದೇಹಕ್ಕೆ ವಿಟಮಿನ್ ಡಿ ಅತ್ಯಗತ್ಯ. ಇದು ಮೂಳೆಗಳನ್ನು ಬಲಪಡಿಸುತ್ತದೆ, ಆರೋಗ್ಯಕರ ಸ್ನಾಯುಗಳನ್ನು ಕಾಪಾಡಿಕೊಳ್ಳುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸೂರ್ಯನ ಬೆಳಕು ವಿಟಮಿನ್ ಡಿ ಯ ಉತ್ತಮ ಮೂಲವಾಗಿದ್ದು, ಹೆಚ್ಚಿನವರು ಈ ವಿಟಮಿನ್ ಪಡೆಯಲು ಸೂರ್ಯನಡಿ ನಿಲ್ಲುತ್ತಾರೆ. ಆದರೆ ಬಹುತೇಕರಿಗೆ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಪಡೆಯುವ ಸರಿಯಾದ ಮಾರ್ಗದ ಬಗ್ಗೆ ಗೊತ್ತೇ ಇಲ್ಲ.

ವಿಟಮಿನ್ ಡಿ (vitamin D) ನಮ್ಮ ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದಂತಹ ಪ್ರಮುಖ ಪೋಷಕಾಂಶವಾಗಿದ್ದು, ಇದು ಮೂಳೆಗಳನ್ನು ಬಲಪಡಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸ್ನಾಯುಗಳನ್ನು ಆರೋಗ್ಯವನ್ನು ವೃದ್ಧಿಸಲು ಮಾತ್ರವಲ್ಲದೆ ಇದು ಕ್ಯಾಲ್ಸಿಯಂ ಮತ್ತು ರಂಜಕದಂತಹ ಅಂಶಗಳನ್ನು ಹೀರಿಕೊಳ್ಳಲು ನಮ್ಮ ದೇಹಕ್ಕೆ ಸಹಾಯ ಮಾಡುತ್ತದೆ. ಸೂರ್ಯನ ಬೆಳಕು ವಿಟಮಿನ್ ಡಿ ಯ ನೈಸರ್ಗಿಕ ಮೂಲವಾಗಿದ್ದು, ಇದರ ಪ್ರಯೋಜನವನ್ನು ಪಡೆಯಲು ಬಹುತೇಕರು ಬೆಳಗ್ಗಿನ ಸಮಯದಲ್ಲಿ ಸೂರ್ಯನ ಬೆಳಕಿಗೆ ಮೈಯನ್ನು ಒಡ್ಡಿಕೊಳ್ಳುತ್ತಾರೆ. ಆದರೆ 90% ಜನರಿಗೆ ಸೂರ್ಯನಿಂದ ವಿಟಮಿನ್ ಡಿ ಪಡೆಯುವ ಸರಿಯಾದ ವಿಧಾನ ಯಾವುದೆಂದು ಗೊತ್ತಿಲ್ಲವಂತೆ. ಹಾಗಿದ್ರೆ ವಿಟಮಿನ್ ಡಿ ಪಡೆಯುವ ಸರಿಯಾದ ಮಾರ್ಗ ಯಾವುದೆಂದು ನೋಡೋಣ ಬನ್ನಿ.
ಸೂರ್ಯನಿಂದ ವಿಟಮಿನ್ ಡಿ ಪಡೆಯುವ ಸರಿಯಾದ ಮಾರ್ಗ ಯಾವುದು?
ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಪಡೆಯಲು ಪ್ರತಿದಿನ 15 ರಿಂದ 30 ನಿಮಿಷಗಳ ಕಾಲ ಸೂರ್ಯನ ಕಿರಣಗಳಿಗೆ ಮೈಯನ್ನು ಒಡ್ಡಿಕೊಂಡರೆ ಸಾಕು. ಈ ಸಮಯದಲ್ಲಿ ಮುಖ, ಕೈ ಮತ್ತು ಪಾದಗಳು ಬಿಸಿಲಿಗೆ ಒಡ್ಡಿಕೊಳ್ಳಬೇಕು. ಬಟ್ಟೆಯಿಂದ ಸಂಪೂರ್ಣ ದೇಹವನ್ನು ಮುಚ್ಚಿಕೊಳ್ಳುವುದರಿಂದ ವಿಟಮಿನ್ ಡಿ ಉತ್ಪಾದನೆಯಾಗುವುದಿಲ್ಲ. ವಿಟಮಿನ್ ಡಿ ಪಡೆಯಲು ಉತ್ತಮ ಸಮಯವೆಂದರೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ. ಈ ಸಮಯದಲ್ಲಿ, ಸೂರ್ಯನ UVB ಕಿರಣಗಳು ಚರ್ಮವನ್ನು ತಗುಲಿ ವಿಟಮಿನ್ ಡಿ ಉತ್ಪಾದಿಸಲು ಸಹಾಯ ಮಾಡುತ್ತದೆ.
ಸೂರ್ಯನ ಬೆಳಕು ನಮ್ಮ ಚರ್ಮಕ್ಕೆ ನೇರವಾಗಿ ತಾಗಿದಾಗ ನಮಗೆ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಸಿಗುತ್ತದೆ. ಗಾಜಿನ ಹಿಂದೆ, ನೆರಳಿನಲ್ಲಿ ಕುಳಿತುಕೊಳ್ಳುವುದರಿಂದ ಅಥವಾ ಸನ್‌ಸ್ಕ್ರೀನ್ ಹಚ್ಚಿ ಸೂರ್ಯನ ಬೆಳಕಿಗೆ ಮೈ ಒಡ್ಡುವುದರಿಂದ ವಿಟಮಿನ್ ಡಿ ಉತ್ಪಾದನೆ ನಿಲ್ಲುತ್ತದೆ. ಅಲ್ಲದೆ UVB ಕಿರಣಗಳು ಗಾಜಿನ ಮೂಲಕ ಭೇದಿಸುವುದಿಲ್ಲ. ಆದ್ದರಿಂದ, ನಿಮಗೆ ವಿಟಮಿನ್ ಡಿ ಅಗತ್ಯವಿದ್ದರೆ, ನೀವು ಸ್ವಲ್ಪ ಸಮಯದವರೆಗೆ ಸೂರ್ಯನ ಬೆಳಕಿಗೆ ನೇರವಾಗಿ ದೇಹವನ್ನು ಒಡ್ಡಿಕೊಳ್ಳಬೇಕು.
ಯಾವ ಸಮಯದಲ್ಲಿ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಬಿಡುಗಡೆಯಾಗುತ್ತದೆ?
ಹೆಚ್ಚಿನವರು ಬೆಳಿಗ್ಗೆ 7 ರಿಂದ 8 ಗಂಟೆಯ ಸಮಯದಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಉತ್ತಮ ಎಂದು ಭಾವಿಸುತ್ತಾರೆ. ಆದರೆ ಈ ಸಮಯದಲ್ಲಿ ಸೂರ್ಯನ ಬೆಳಕು ತುಂಬಾ ದುರ್ಬಲವಾಗಿರುತ್ತದೆ, ಇದರ ಪರಿಣಾಮವಾಗಿ ದೇಹದಲ್ಲಿ ವಿಟಮಿನ್ ಡಿ ಉತ್ಪಾದನೆಯೇ ಇರುವುದಿಲ್ಲ. ವಾಸ್ತವವಾಗಿ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ರಚನೆಯ ಪ್ರಕ್ರಿಯೆಯು ಬೆಳಿಗ್ಗೆ 10 ಗಂಟೆಯ ನಂತರ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 2 ಗಂಟೆಯವರೆಗೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಮುಖ್ಯ. ತಪ್ಪಾದ ವಿಧಾನವು ಚರ್ಮಕ್ಕೆ ಹಾನಿ ಮಾಡಬಹುದು.
ಇದನ್ನೂ ಓದಿ: ದಿನಕ್ಕೆ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಮಾಡಿದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಗೊತ್ತಾ?
ಸೂರ್ಯನಿಂದ ವಿಟಮಿನ್ ಡಿ ಪಡೆಯುವಾಗ ಈ ತಪ್ಪುಗಳನ್ನು ಮಾಡಬಾರದು:
- ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವುದು.
- ಸಂಪೂರ್ಣ ದೇಹಕ್ಕೆ ಸನ್ ಸ್ಕ್ರೀನ್ ಹಚ್ಚುವುದು.
- ಕೈ ಕಾಲು ಮುಚ್ಚುವಂತಹ ಸಂಪೂರ್ಣ ಬಟ್ಟೆ ಧರಿಸುವುದು
ಈ ಎಲ್ಲಾ ತಪ್ಪುಗಳು ವಿಟಮಿನ್ ಡಿ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಗಂಟೆಗಟ್ಟಲೆ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳುವುದರಿಂದ ಚರ್ಮದ ಕಪ್ಪಾಗುವಿಕೆ, ಸುಕ್ಕುಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




