ಹಿಂದೂ ಧರ್ಮದಲ್ಲಿ ತುಳಸಿಯನ್ನು ಲಕ್ಷ್ಮಿ ದೇವಿಗೆ ಹೋಲಿಸುವ ಮೂಲಕ ವಿಶೇಷ ಸ್ಥಾನವನ್ನು ನೀಡಲಾಗಿದೆ. ಆಯುರ್ವೇದದಲ್ಲಿ ವಿಶೇಷ ಔಷಧೀಯ ಮೂಲಿಕೆಯಾಗಿ ಬಳಸುವ ಈ ತುಳಸಿಯಲ್ಲಿ ಅಂಟಿ ಆಕ್ಸಿಡೆಂಟ್ಸ್ ಅಂಶಗಳು ಹೇರಳವಾಗಿದೆ. ಹೀಗಾಗಿ ತುಳಸಿಯು ನಾನಾ ರೋಗಗಳನ್ನು ಶಮನ ಮಾಡುವ ಗುಣವನ್ನು ಹೊಂದಿದೆ. ನಮ್ಮ ಹಿರಿಯರು ಈ ತುಳಸಿ ಸಸ್ಯವನ್ನು ಬಳಸಿ ಹಲವಾರು ಮನೆ ಮದ್ದನ್ನು ತಯಾರಿಸಿ ಆರೋಗ್ಯ ಸಮಸ್ಯೆಗಳಿಗೆ ಔಷಧಿಯಾಗಿ ಇವತ್ತಿಗೂ ಬಳಸುತ್ತಿದ್ದಾರೆ.
ತುಳಸಿ ಎಲೆಯ ಮನೆಮದ್ದುಗಳು ಇಲ್ಲಿವೆ:
* ತುಳಸಿ ಎಲೆಯನ್ನು ಜಜ್ಜಿ ಒಂದು ಲೋಟ ನೀರಿನಲ್ಲಿ ಹಾಕಿ ಮೂರು ನಾಲ್ಕು ಘಂಟೆಗಳ ಬಳಿಕ ಕುಡಿದರೆ ಅಜೀರ್ಣ ಸಮಸ್ಯೆಯೂ ನಿವಾರಣೆಯಾಗುವುದು.
* ಅಸ್ತಮಾ ಅಥವಾ ಉಬ್ಬಸ ಸಮಸ್ಯೆಯಿರುವವರು ತುಳಸಿ ಎಲೆಗಳನ್ನು ಜಜ್ಜಿ ಒಂದು ಲೀಟರ್ ನೀರಿನಲ್ಲಿ ಚೆನ್ನಾಗಿ ಕುದಿಸಿ, ಈ ನೀರು ಕುಡಿಯುವುದು ಉತ್ತಮ.
* ಇಸುಬು ಅಥವಾ ಹುಳು ಕಡ್ಡಿಯ ಸಮಸ್ಯೆ ಇದ್ದವರು ತುಳಸಿ ಎಲೆಗೆ ಉಪ್ಪು ಬೆರೆಸಿ ಅದನ್ನು ಚೆನ್ನಾಗಿ ಅರೆದು, ಈ ಮಿಶ್ರಣವನ್ನು ಇಸುಬು ಇರುವ ಜಾಗಕ್ಕೆ ಲೇಪಿಸಿದರೆ ಚರ್ಮದ ಸಮಸ್ಯೆಯು ಕಡಿಮೆಯಾಗುವುದು.
* ತುಳಸಿ ಎಲೆಗಳನ್ನು ಬೆಳಿಗ್ಗೆ ಮತ್ತು ರಾತ್ರಿ ಆಹಾರ ಸೇವಿಸುವ ನಂತರ ಅಗಿದು ತಿಂದರೆ ಬಾಯಿಯಿಂದ ಹೊರ ಬರುವ ದುರ್ನಾತವು ಇಲ್ಲದಂತಾಗುತ್ತದೆ.
* ಕೀಲು ನೋವು ಸಮಸ್ಯೆಯಿದ್ದವರು ಇಪ್ಪತ್ತು ತುಳಸಿ ಎಲೆ, ಐದು ಕಾಳು ಮೆಣಸು ಎರಡನ್ನು ಸೇರಿಸಿ ಅರೆದು, ಅದಕ್ಕೆ ಒಂದು ಚಮಚ ತುಪ್ಪ ಸೇರಿಸಿ ಬೆಳೆಗ್ಗೆ ರಾತ್ರಿ ಸೇವಿಸಿದರೆ ಪರಿಣಾಮಕಾರಿ.
* 10 ಗ್ರಾಂ ತುಳಸಿ ಬೀಜದ ಪುಡಿಗೆ ಒಂದು ಚಮಚ ಬೆಣ್ಣೆ ಮತ್ತು ಸ್ವಲ್ಪ ಬೆಲ್ಲ ಸೇರಿಸಿ ದಿನಕ್ಕೆರಡು ಸಲ ತಿನ್ನುವುದರಿಂದ ಮೂಲವ್ಯಾಧಿ ಸಮಸ್ಯೆಯೂ ಶಮನವಾಗುತ್ತದೆ.
ಇದನ್ನೂ ಓದಿ: ಅಲೋವೆರಾ ಜ್ಯೂಸ್ ಕುಡಿಯುವ ಅಭ್ಯಾಸ ಬೆಳೆಸಿಕೊಂಡರೆ ಈ ರೋಗಗಳು ಮಾಯ
* ಜ್ವರ ಇದ್ದವರು ಒಂದು ಹಿಡಿಯಷ್ಟು ತುಳಸಿ ಎಲೆಯನ್ನು ಜಜ್ಜಿ ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಅದಕ್ಕೆಬೆಲ್ಲವನ್ನು ಸೇರಿಸಬೇಕು. ಇದನ್ನು ದಿನಕ್ಕೆ ಮೂರು ಬಾರಿ ನಾಲ್ಕು ಚಮಚದಂತೆ ಸೇವಿಸುವುದರಿಂದ ಜ್ವರವೂ ಕಡಿಮೆಯಾಗುತ್ತದೆ.
* ಗಂಟಲು ನೋವು ಬಾಧಿಸುತ್ತಿದ್ದರೆ, ತುಳಸಿ ಎಲೆ, ದೊಡ್ಡ ಪತ್ರೆ ಎಲೆಗಳನ್ನು ಅರೆದು, ಅರ್ಧ ಲೀಟರ್ ನೀರಿನಲ್ಲಿ ಕುದಿಸಬೇಕು. ಕುದಿಸಿದ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ದಿನಕ್ಕೆ ಮೂರು ಸಲ ಊಟಕ್ಕೂ ಮುನ್ನ ಕುಡಿಯುವುದರಿಂದ ಪರಿಣಾಮಕಾರಿಯಾಗಿದೆ.
* ಹೊಟ್ಟೆ ನೋವಿನಿಂದ ಬಳಲುತ್ತಿರುವವರು ತುಳಸಿ ರಸಕ್ಕೆ ಹಸಿಶುಂಠಿ ರಸ ಬೆರೆಸಿ ಬಿಸಿ ಮಾಡಿ, ದಿನಕ್ಕೆ ಎರಡು ಬಾರಿಯಂತೆ ನಾಲ್ಕು ಚಮಚದಷ್ಟು ಸೇವಿಸಿದರೆ ಉತ್ತಮ ಫಲಿತಾಂಶವು ಸಿಗುತ್ತದೆ.
* ತುಳಸಿ ಎಲೆ ಮತ್ತು ಬ್ರಾಹ್ಮೀ ಎಲೆಯನ್ನು ಅರೆದು ಇಸುಬು (ಹುಳುಕಡ್ಡಿ) ಇರುವ ಜಾಗಕ್ಕೆ ಲೇಪಿಸುವುದರಿಂದ ಗುಣಮುಖವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ