ಎಚ್ಚರಿಕೆ ವಹಿಸದಿದ್ದರೆ ನಿಮಗೂ ಕಿವುಡುತನ ಬಂದೀತು ಎಚ್ಚರ!

| Updated By: ಸುಷ್ಮಾ ಚಕ್ರೆ

Updated on: Mar 06, 2024 | 6:56 PM

ನಾವೆಲ್ಲರೂ ಮುಖದ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡುತ್ತೇವೆ. ಆದರೆ, ಪಂಚೇಂದ್ರಿಯಗಳಲ್ಲೊಂದಾದ ಕಿವಿಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಷ್ಟು ಕಾಳಜಿ ವಹಿಸುತ್ತೇವೆ? ಕೆಲವರಿಗೆ ಹುಟ್ಟಿದಾಗಿನಿಂದಲೇ ಶ್ರವಣ ದೋಷವಿದ್ದರೆ ಇನ್ನು ಕೆಲವರಿಗೆ ಕ್ರಮೇಣ ಅವರ ಜೀವನಶೈಲಿ, ಸುತ್ತಲಿನ ಪರಿಸರದ ಪ್ರಭಾವದಿಂದ ಶ್ರವಣ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಪರಿಹಾರವೇನು? ಎಂಬ ಮಾಹಿತಿ ಇಲ್ಲಿದೆ.

ಎಚ್ಚರಿಕೆ ವಹಿಸದಿದ್ದರೆ ನಿಮಗೂ ಕಿವುಡುತನ ಬಂದೀತು ಎಚ್ಚರ!
ಸಾಂದರ್ಭಿಕ ಚಿತ್ರ
Image Credit source: iStock
Follow us on

ಅನೇಕರಲ್ಲಿ ಶ್ರವಣ ದೋಷದ ಸಮಸ್ಯೆಯನ್ನು ಕಾಣುತ್ತಿದ್ದೇವೆ. ಈ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿ ಗುರುತಿಸುವುದು ಅಗತ್ಯ. ಏಕೆಂದರೆ ಇದು ಮಾತು ಮತ್ತು ಭಾಷೆ ಬೆಳವಣಿಗೆಯನ್ನು ಅವಲಂಬಿಸಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಕಿವಿಯ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ತೆಗೆದುಕೊಳ್ಳಬೇಕು, ಯಾವ ರೀತಿ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ.

ವಿವಿಧ ಕಾರಣಗಳಿಂದ ಶ್ರವಣ ದೋಷ ಕಾಣಿಸಿಕೊಳ್ಳುತ್ತದೆ. ಅವುಗಳಲ್ಲಿ ಕೆಲವು ಘಟನೆಗಳು ಜೆನೆಟಿಕ್ಸ್‌ನಿಂದ, ಕೆಲವು ಸಂದರ್ಭಗಳಲ್ಲಿ ಸೋಂಕು, ಗಾಯ, ಅಧಿಕ ರಕ್ತದೊತ್ತಡ, ಮಧುಮೇಹದಂತಹ ಸಮಸ್ಯೆಗಳು, ಒಟೊಟಾಕ್ಸಿಕ್‌ಔಷಧಿಗಳ ನಿರಂತರ ಬಳಕೆ ಮತ್ತು ಭಾರೀ ಪ್ರಮಾಣದ ಶಬ್ದವನ್ನು ಆಲಿಸುವುದರಿಂದಲೂ ಶ್ರವಣ ದೋಷ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ಬೆಂಗಳೂರಿನ ಕಿಂಡರ್‌ ಆಸ್ಪತ್ರೆಯ ಇಎನ್‌ಟಿ ತಜ್ಞರಾದ ಡಾ. ಸುನಿತಾ ಮಾಧವನ್‌.

ಮಹಿಳೆಗೆ ಪ್ರಸವಪೂರ್ವದಲ್ಲಿ ವಿವಿಧ ರೀತಿಯ ರಕ್ತ ಪರೀಕ್ಷೆಗಳನ್ನು ಮಾಡಿಸುವುದು ಅಗತ್ಯ. ಈ ಮೂಲಕ ಆರಂಭಿಕ ಹಂತದಲ್ಲೇ ಸಮಸ್ಯೆ ಕಂಡುಬಂದಲ್ಲಿ ಸಾಧ್ಯವಾದರೆ ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬಹುದು ಎಂಬುದು ವೈದ್ಯರ ಸಲಹೆ.

ಇದನ್ನೂ ಓದಿ: Child Health: ಮಕ್ಕಳಲ್ಲಿ ಬೊಜ್ಜು ಹೆಚ್ಚುತ್ತಿರುವುದಕ್ಕೆ ಪೋಷಕರೇ ಕಾರಣ!

ಕಿವಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಹೇಗೆ?:

– ಶೀತ, ಕೆಮ್ಮಿನಿಂದ ಕಿವಿ ನೋವು ಕಂಡುಬಂದಲ್ಲಿ ಅದನ್ನು ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯಬೇಕು.

– ಜೀವನಶೈಲಿ ನಿರ್ವಹಣೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಥೈರಾಯ್ಡ್‌ಸಮಸ್ಯೆಗಳನ್ನು ನಿಯಂತ್ರಿಸುವ ಮೂಲಕವು ಶ್ರವಣ ದೋಷ ಉಂಟಾಗುವುದನ್ನು ನಿಯಂತ್ರಿಸಲು ಸಹಾಯವಾಗುತ್ತದೆ.

– ಕಿವಿಯ ಸ್ವಚ್ಛತೆಗಾಗಿ ಕಿವಿಯಲ್ಲಿ ಪಿನ್‌, ಬಡ್ಸ್‌ ಮತ್ತು ಇತರೆ ವಸ್ತುಗಳನ್ನು ಹಾಕುವುದು ಸರಿಯಲ್ಲ. ಇದರಿಂದಾಗಿಯೂ ಕಿವಿಯಲ್ಲಿ ಸೋಂಕು ಅಥವಾ ಕಿವಿಯೊಳಗಿನ ಪದರಕ್ಕೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ.

– ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬಂದಲ್ಲಿ ಮನೆಮದ್ದುಗಳ ಮೊರೆ ಹೋಗುವುದಲ್ಲ ಸರಿಯಲ್ಲ. ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು.

– ಭಾರೀ ಪ್ರಮಾಣದ ಶಬ್ದ ಆಲಿಸುವುದು, ಹೆಡ್‌ಫೋನ್‌ ಬಳಸುವುದನ್ನು ತಪ್ಪಿಸುವ ಮೂಲಕವೂ ಶ್ರವಣ ದೋಷ ಉಂಟಾಗುವುದನ್ನು ತಡೆಗಟ್ಟಬಹುದು.

ಇದನ್ನೂ ಓದಿ: ದಿನವೂ ಕಿವಿಯನ್ನು ಸ್ವಚ್ಛಗೊಳಿಸಬೇಕಾ?; ತಜ್ಞರ ಸಲಹೆ ಇಲ್ಲಿದೆ

ಶ್ರವಣ ದೋಷ ತಡೆಗಟ್ಟುವುದು ಹೇಗೆ?:

ದಡಾರ, ಮಂಪ್ಸ್, ರುಬೆಲ್ಲಾ ಮತ್ತು ನ್ಯುಮೋಕೊಕಲ್ ರೋಗಗಳ ಲಸಿಕೆಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಏಕೆಂದರೆ ಈ ಸೋಂಕಿನ ಸಮಸ್ಯೆಗಳು ಕೂಡ ಶ್ರವಣ ದೋಷಕ್ಕೆ ಕಾರಣವಾಗಬಹುದು. ಅವಗಳನ್ನು ತಡೆಗಟ್ಟಲು ಲಸಿಕೆ ಮುಖ್ಯ ಪಾತ್ರ ವಹಿಸುತ್ತದೆ. ನವಜಾತ ಶಿಶುಗಳ ಕಿವಿ ಪರಿಶೀಲನೆ ಅತ್ಯಗತ್ಯ. ಏಕೆಂದರೆ ಕುಟುಂಬದಲ್ಲಿ ಯಾರಿಗಾದರೂ ಶ್ರವಣದೋಷ ಸಮಸ್ಯೆ ಇದ್ದಲ್ಲಿ ಅದು ಅನುವಂಶಿಕವಾಗಿ ಕಂಡುಬರುವ ಸಾಧ್ಯತೆ ಇರುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:51 pm, Wed, 6 March 24