ಬಲು ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ಸುಳಿಯಲು ಈ ಸಿಂಪಲ್‌ ಟ್ರಿಕ್ಸ್‌ ಅನುಸರಿಸಿ

ಸ್ವಲ್ಪ ಘಾಟು ವಾಸನೆಯನ್ನು ಹೊಂದಿರುವ ಬೆಳ್ಳುಳ್ಳಿ ಖಾದ್ಯಗಳ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಹಲವಾರು ಬಗೆಯ ಔಷಧೀಯ ಗುಣಗಳನ್ನು ಸಹ ಹೊಂದಿದೆ. ಇದೇ ಕಾರಣಕ್ಕೆ ಹೆಚ್ಚಿನ ಅಡುಗೆಗಳಲ್ಲಿ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಆದ್ರೆ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆಯುವುದೆಂದರೆ ಹಲವರಿಗೆ ತಲೆನೋವಿನ ಕೆಲಸ. ಒಂದು ಸಣ್ಣ ಎಸಳಿನ ಸಿಪ್ಪೆಯನ್ನು ತೆಗೆಯಲು ಪರದಾಟವನ್ನೇ ನಡೆಸುತ್ತಾರೆ. ಹೀಗಿರುವಾಗ ಈ ಕೆಲವೊಂದು ಟ್ರಿಕ್ಸ್‌ಗಳನ್ನು ಪಾಲಿಸುವ ಮೂಲಕ ಬಲು ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ತೆಗೆಯಬಹುದು.

ಬಲು ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ಸುಳಿಯಲು ಈ ಸಿಂಪಲ್‌ ಟ್ರಿಕ್ಸ್‌ ಅನುಸರಿಸಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jan 01, 2026 | 5:10 PM

ಅಡುಗೆಯ ರುಚಿ ಮತ್ತು ಘಮ ಹೆಚ್ಚಿಸುವಲ್ಲಿ ಬೆಳ್ಳುಳ್ಳಿಯು (garlic) ಪ್ರಮುಖ ಪಾತ್ರ ವಹಿಸುತ್ತದೆ. ರುಚಿ ಹೆಚ್ಚಿಸುವುದಷ್ಟೇ ಅಲ್ಲ ಬೆಳ್ಳುಳ್ಳಿ ಹಲವಾರು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಹಾಗಾಗಿ ಹೆಚ್ಚಿನ ಅಡುಗೆಗಳಲ್ಲಿ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಅದರಲ್ಲೂ ಮಾಂಸಹಾರ ಭಕ್ಷ್ಯಗಳಿಗೆ ಬೆಳ್ಳುಳ್ಳಿ ಬೇಕೇ ಬೇಕು.  ಆದ್ರೆ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆಯುವುದು ಮಾತ್ರ ಹಲವರಿಗೆ ಸವಾಲಿನ ಕೆಲಸ. ಬೆಳ್ಳುಳ್ಳಿ ಎಸಳುಗಳು ತೀರಾ ಚಿಕ್ಕದಾಗಿರುವ ಹಾಗೂ ತೆಳುವಾಗಿರುವ ಕಾರಣ ಸಿಪ್ಪೆಯನ್ನು ತೆಗೆಯುವುದು ಸ್ವಲ್ಪ ಕಷ್ಟ. ನೀವು ಸಹ ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ಸಿಕ್ಕಾಪಟ್ಟೆ ಪರದಾಟ ನಡೆಸುತ್ತೀರಾ? ಹಾಗಿದ್ರೆ ಈ ಟ್ರಿಕ್ಸ್‌ ಪಾಲಿಸಿ ನೋಡಿ, ಬಲು ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ಸುಳಿಯಬಹುದು.

ಬೆಳ್ಳುಳ್ಳಿ ಸಿಪ್ಪೆ ತೆಗೆಯುವ ಸುಲಭ ಮತ್ತು ಸರಿಯಾದ ಮಾರ್ಗ:

ಚಾಕುವಿನಿಂದ ಲಘುವಾಗಿ ಒತ್ತುವುದು: ಬೆಳ್ಳುಳ್ಳಿ ಎಸಳನ್ನು ಕಟ್ಟಿಂಗ್‌ ಟ್ರೇ ಮೇಲೆ ಇರಿಸಿ. ಚಾಕುವಿನಿಂದ ನಿಧಾನವಾಗಿ ಒತ್ತಿರಿ. ಎಸಳು ಬಿರುಕು ಬಿಟ್ಟಂತೆ,  ಸುಲಭವಾಗಿ ಸಿಪ್ಪೆ ಸುಲಿಯುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆಯಲು ಈ ವಿಧಾನವು ಉತ್ತಮವಾಗಿದೆ.

ಡಬ್ಬದಲ್ಲಿ ಅಲ್ಲಾಡಿಸುವುದು: ಬೆಳ್ಳುಳ್ಳಿ ಎಸಳುಗಳನ್ನು ಒಂದು ಡಬ್ಬದಲ್ಲಿ ಹಾಕಿ ಅದನ್ನು 20–30 ಸೆಕೆಂಡುಗಳ ಅಲ್ಲಾಡಿಸಿ. ಹೀಗೆ ಮಾಡುವುದರಿಂದ ಸಿಪ್ಪೆಗಳು ಸುಲಭವಾಗಿ ಬೇರ್ಪಡುತ್ತವೆ. ಈ ಮೂಲಕ ನೀವು ಯಾವುದೇ ಶ್ರಮವಿಲ್ಲದೆ ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ತೆಗೆಯಬಹುದು.

ಬಿಸಿನೀರಿನ ಬಳಕೆ: ಬೆಳ್ಳುಳ್ಳಿ ಎಸಳುಗಳನ್ನು ಬೆಚ್ಚಗಿನ ನೀರಿನಲ್ಲಿ 5–10 ನಿಮಿಷಗಳ ಕಾಲ ನೆನೆಸಿಡಿ. ಮತ್ತು ತಣ್ಣಗಾದ ನಂತರ ಯಾವುದೇ ಶ್ರಮವಿಲ್ಲದೆ ಬೆಳ್ಳುಳ್ಳಿಯ ಸಿಪ್ಪೆ ತೆಗೆಯಬಹುದು. ಈ ವಿಧಾನವು ಹೆಚ್ಚಿನ ಪ್ರಮಾಣದ ಬೆಳ್ಳುಳ್ಳಿಯ ಸಿಪ್ಪೆ ತೆಗೆಯಲು ವಿಶೇಷವಾಗಿ ಉಪಯುಕ್ತವಾಗಿದೆ.

ಮೈಕ್ರೋವೇವ್ ಟ್ರಿಕ್: ಬೆಳ್ಳುಳ್ಳಿ ಎಸಳುಗಳನ್ನು ಮೈಕ್ರೋವೇವ್‌ನಲ್ಲಿ 10–15 ಸೆಕೆಂಡುಗಳ ಕಾಲ ಬಿಸಿ ಮಾಡಿ. ಶಾಖವು ಸಿಪ್ಪೆಯನ್ನು ಸಡಿಲಗೊಳಿಸುತ್ತದೆ ಮತ್ತು ಅದು ಬೇಗನೆ  ಸುಲಿಯಲು ಅನುವು ಮಾಡಿಕೊಡುತ್ತದೆ. ಈ ಟ್ರಿಕ್ಸ್‌ ಹೆಚ್ಚಿನ ಪ್ರಮಾಣದ ಬೆಳ್ಳುಳ್ಳಿಯ ಸಿಪ್ಪೆ ತೆಗೆಯಲು ವಿಶೇಷವಾಗಿ ಉಪಯುಕ್ತವಾಗಿದೆ.

ಇದನ್ನೂ ಓದಿ: ಬರೀ ನೀರು ಮಾತ್ರವಲ್ಲ, ಕೋಳಿ ಮಾಂಸವನ್ನು ತೊಳೆಯಲು ಕ್ರಮವನ್ನು ಅನುಸರಿಸಲೇಬೇಕು

ಕೈಗಳಿಂದ ಬೆಳ್ಳುಳ್ಳಿಯ ವಾಸನೆಯನ್ನು ಹೋಗಲಾಡಿಸುವುದು ಹೇಗೆ?

ಬೆಳ್ಳುಳ್ಳಿ ಸಿಪ್ಪೆ ತೆಗೆದ ನಂತರ ಕೈಗಳಲ್ಲಿ ಅದರ ಕಟುವಾದ ವಾಸನೆ ಹಾಗೆಯೇ ಉಳಿದುಕೊಂಡು ಬಿಡುತ್ತದೆ. ಈ ವಾಸನೆಯನ್ನು ಹೋಗಲಾಡಿಸಲು ನಿಮ್ಮ ಕೈಗಳನ್ನು ಉಕ್ಕಿನ ಚಮಚದಿಂದ ಉಜ್ಜಿಕೊಳ್ಳಿ. ಇದಲ್ಲದೆ ನಿಂಬೆ ಅಥವಾ ಉಪ್ಪಿನಿಂದ ಕೈ ತೊಳೆಯುವುದರಿಂದಲೂ ಸಹ ವಾಸನೆಯನ್ನು ಹೋಗಲಾಡಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Thu, 1 January 26