New Year 2022: ಹೊಸ ವರ್ಷ, ಹೊಸ ಅಭ್ಯಾಸ; 365 ದಿನಗಳ ಹೊಸ ಪುಸ್ತಕದ ಸಂತಸದ ದಿನಗಳಿಗೆ ಈ ಅಂಶಗಳನ್ನು ಸೇರಿಸಿಕೊಳ್ಳಿ

| Updated By: Pavitra Bhat Jigalemane

Updated on: Jan 01, 2022 | 11:13 AM

ಬೇರೆಯವರು ನಿಮ್ಮನ್ನು ನಿಂದಿಸುತ್ತಿದ್ದಾರೆ ಎಂದರೆ ಅದಕ್ಕೆ ಕೊರಗದಿರಿ. ಅವರ ಯೋಚನಾಲಹರಿ ಅಷ್ಟೇ ಕೆಳಮಟ್ಟದಲ್ಲಿದೆ ಎಂದುಕೊಳ್ಳಿ. ನಿಮ್ಮ ಮಾನಸಿಕ ಸ್ಥಿತಿಯನ್ನು ಗಟ್ಟಿಮಾಡಿಕೊಳ್ಳಿ. ಪರರ ನಿಂದನೆಗೆ ನೊಂದುಕೊಳ್ಳುವ ನಿಮ್ಮೊಳಗಿನ ಜೀವಕ್ಕೆ ತಿಳಿ ಹೇಳಿ. 

New Year 2022: ಹೊಸ ವರ್ಷ, ಹೊಸ ಅಭ್ಯಾಸ; 365 ದಿನಗಳ ಹೊಸ ಪುಸ್ತಕದ ಸಂತಸದ ದಿನಗಳಿಗೆ ಈ ಅಂಶಗಳನ್ನು ಸೇರಿಸಿಕೊಳ್ಳಿ
ಪ್ರಾತಿನಿಧಿಕ ಚಿತ್ರ
Follow us on

ಜೀವನದಲ್ಲಿ ಎಲ್ಲವೂ ಬದಲಾಗುತ್ತವೆ. ವರ್ಷದಿಂದ ವರ್ಷಕ್ಕೆ ಕ್ಯಾಲೆಂಡರ್​ ಬದಲಾದ ಹಾಗೆ. ಹೊಸತನಕ್ಕೆ ಒಗ್ಗಿಕೊಳ್ಳುವ ಮನಸ್ಥಿತಿ ಇರಬೇಕಷ್ಟೆ. ನಾವು ತೆಗೆದುಕೊಳ್ಳುವ ಸಣ್ಣ ನಿರ್ಧಾರ, ಸಣ್ಣ ನಡೆ ಬಹುದೊಡ್ಡ ಸಂಭ್ರಮವನ್ನೇ ನೀಡಬಹುದು ಹೀಗಾಗಿ ಹೊಸ ವರ್ಷದ ಆರಂಭದ ದಿನವಾದ ಇಂದು ಒಂದಷ್ಟು ನಿರ್ಣಯಗಳನ್ನು ತೆಗೆದುಕೊಳ್ಳಿ. 365 ದಿನಗಳಿರುವ ಖಾಲಿ ಪುಸ್ತಕ ನಿಮ್ಮ ಕೈಯಲ್ಲಿದೆ. ಹೊಸ ಕನಸುಗಳನ್ನು ಅದಕ್ಕೆ ಸೇರಿಸಿಕೊಳ್ಳಿ. ಕಳೆದ ದಿನಗಳಲ್ಲಿ ಬದುಕು ತದುಕಿ ಕಲಿಸಿದ ಪಾಠಗಳು ಈ ವರ್ಷ ದಾರಿದೀಪವಾಗಲಿ. ಅದೇ ಪಾಠಗಳನ್ನು ಆದರ್ಶವಾಗಿಟ್ಟುಕೊಂಡು ಒಂದಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಿ. ದೃಢ ನಿರ್ಧಾರ, ಇಚ್ಛಾ ಶಕ್ತಿ, ಚಿಕ್ಕ ವಿಷಯಗಳನ್ನೂ ಆನಂದಿಸುವ ಮನಸ್ಥಿತಿಯಿದ್ದರೆ ಪ್ರತೀ ಹೊಸ ವರ್ಷ ಹರುಷವನ್ನೇ ತರಲಿದೆ. ಹೊಸ ವರ್ಷದ ಮೊದಲ ದಿನ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಲು ಸಂತಸವಾಗಿರಲು ಈ  ಸೂತ್ರಗಳನ್ನು ಅಳವಡಿಸಿಕೊಳ್ಳಿ.

ಇತರರ ನಿಂದನೆಗೆ ಕುಗ್ಗದಿರಿ
ಬೇರೆಯವರು ನಿಮ್ಮನ್ನು ನಿಂದಿಸುತ್ತಿದ್ದಾರೆ ಎಂದರೆ ಅದಕ್ಕೆ ಕೊರಗದಿರಿ. ಅವರ ಯೋಚನಾಲಹರಿ ಅಷ್ಟೇ ಕೆಳಮಟ್ಟದಲ್ಲಿದೆ ಎಂದುಕೊಳ್ಳಿ. ನಿಮ್ಮ ಮಾನಸಿಕ ಸ್ಥಿತಿಯನ್ನು ಗಟ್ಟಿಮಾಡಿಕೊಳ್ಳಿ. ಪರರ ನಿಂದನೆಗೆ ನೊಂದುಕೊಳ್ಳುವ ನಿಮ್ಮೊಳಗಿನ ಜೀವಕ್ಕೆ ತಿಳಿ ಹೇಳಿ.

ಕೆಲಸಗಳ ಮುಂದೂಡಿಕೆ ಬೇಡ
ನಾಳೆ ಮಾಡಿದರಾಯಿತು ಎನ್ನುವ ಮನಸ್ಥಿತಿಯಿಂದ ಹೊರಬನ್ನಿ. ಅಂದಿನ ಕೆಲಸಗಳನ್ನು ಆದಷ್ಟು ಅಂದೇ ಮುಗಿಸಿ. ನೆನಪಗಳು ಜೀವನದ ಭಾಗವಾಗಲು ಬಿಡಬೇಡಿ. ನಿಮ್ಮ ಕೆಲಸಕ್ಕೆ, ನೀವು ಹೇಳಬೇಕಾದ ಮಾತಿಗೆ ಬದ್ಧರಾಗಿರಿ. ಮುಂದೂಡಿಕೆಯಾದಷ್ಟು ಕೆಲಸಗಳು ಮತ್ತಷ್ಟು ಜಟಿಲವಾಗಬಹುದು. ಮಾತುಗಳನ್ನಾದರೂ ಅಷ್ಟೇ ಹೇಳಬೇಕೆಂದ ಜಾಗದಲ್ಲಿ ಹೇಳಿಬೇಡಿ. ಇದರಿಂದ ನಿಮ್ಮ ಮನಸ್ಸಿಗೂ ನೆಮ್ಮದಿ.

ನೋ ಎನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ
ನೀವು ಇಷ್ಟಪಡುವ ಜನ ಅಥವಾ ನಿಮಗಿರುವ ಜವಾಬ್ದಾರಿಗಳಿಂದ ಕೆಲವೊಮ್ಮೆ ನಿಮ್ಮ ಮನಸ್ಸಿಗೆ ಹಿಡಿಸದ ಕೆಲಸಗಳನ್ನು ಒಪ್ಪಕೊಳ್ಳುವ ಸಂದರ್ಭ ಎದುರಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಇಲ್ಲವೆನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿರ್ದಾಕ್ಷಿಣ್ಯವಾಗಿ ಮಾತುಗಳನ್ನು  ಬದಲಿಸುವ ಬದಲು ನಾಜೂಕಿನಿಂದ ಎದುರಿಗೆ ಇರುವವರಿಗೆ ತಿಳಿಹೇಳುವುದನ್ನು ರೂಢಿಸಿಕೊಳ್ಳಿ. ಇದು ನಿಮ್ಮ ನೆಮ್ಮದಿಗೆ ಕಾರಣವಾಗುತ್ತದೆ. ಒಲ್ಲದ ಮನಸ್ಸಿನಿಂದ ಮಾಡಿದ ಕೆಲಸ ಎಂದಿಗೂ ಪೂರ್ಣವಲ್ಲ. ಹೊಸ ವರ್ಷದ ಆರಂಭದಲ್ಲೇ ನೀವು ಇಂತಹ ಚಿಕ್ಕ ನಿರ್ಣಯಗಳು ನಿಮ್ಮೊಳಗೆ ಬಲವಾಗಿ ಬೇರೂರುವಂತೆ ಮಾಡಿಕೊಳ್ಳಿ.

ಎಲ್ಲರೂ, ಎಲ್ಲವೂ ಬದಲಾಗುತ್ತದೆ, ಸ್ವೀಕರಿಸಿ
ಬದುಕು ನಿಂತ ನೀರಲ್ಲ. ಕಾಲ​ ಬದಲಾದಂತೆ ವ್ಯಕ್ತಿ, ಸನ್ನಿವೇಶ, ಮನಸ್ಥಿತಿ ಎಲ್ಲವೂ ಬದಲಾಗುತ್ತದೆ. ಅದನ್ನು ಒಪ್ಪಿಕೊಳ್ಳಲು ನಿಮ್ಮನ್ನು ನೀವು ತಯಾರಿಟ್ಟುಕೊಳ್ಳಿ.  ಇಂದಿನ ನಿಮ್ಮ ಜತೆಗಿದ್ದ ವ್ಯಕ್ತಿ, ಕುಟುಂಬದ ಜನ ಎಲ್ಲರೂ ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತಾರೆ. 2021 ರಲ್ಲಿ ಇದ್ದ ಹಾಗೇ ಎಲ್ಲವೂ ಇರಬೇಕೆಂದಿಲ್ಲ. ಹೀಗಾಗಿ ಅದನ್ನು ಸ್ವೀಕರಿಸಿ. ನೊಂದುಕೊಳ್ಳದಿರಿ. ಬದಲಾವಣೆಯ ಕಾರಣಗಳನ್ನು ಚರ್ಚಿಸಿ. ಹೊಂದಿಕೊಳ್ಳುವುದನ್ನು ಕಲಿತುಕೊಳ್ಳಿ. ಹಾಗೆಂದ ಮಾತ್ರಕ್ಕೆ ಒಲ್ಲದ ವಿಷಯಗಳಿಗೆ ರಾಜಿಯಾಗಬೇಡಿ. ವಿಷಯವನ್ನು ನೇರವಾಗಿ ಹೇಳಿ ಅರ್ಥೈಸಿ.

ಎಲ್ಲದಕ್ಕೂ ಸಮಜಾಯಿಷಿಗಳನ್ನು ನೀಡಬೇಡಿ
ನಿಮ್ಮ ತೀರ್ಮಾನಗಳಿಗೆ ನೀವು ಬದ್ಧರಾಗಿರಬೇಕಾದರೆ ಇನ್ನೊಬ್ಬರಿಗೆ ಸಮಜಾಯಿಷಿಗಳನ್ನು ನೀಡುವ ಅವಶ್ಯಕತೆಯಿಲ್ಲ. ನಿಮ್ಮ ಸಮಜಾಯಿಷಿಗಳು ಎದುರಿರುವವರಿಗೆ ಬಾಲಿಶ ಎನಿಸಬಹುದು ಅಥವಾ ನಾಟಕೀಯತೆ ಎನಿಸಬಹುದು. ಆದ್ದರಿಂದ ಇಂದಿನಿಂದಲೇ ನಿಮ್ಮ ಬದುಕಿಗೆ ಈ ಸೂತ್ರವನ್ನು ಅಳವಡಿಸಿಕೊಳ್ಳಿ. ಇದರಿಂದ ನೀವು ಮಾಡುವ ಕೆಲಸದ ಬಗ್ಗೆ ನಿಮಗೆ ಸಂಪೂರ್ಣ ಚಿತ್ರಣ ದೊರಕುತ್ತದೆ.

ನಕಾರಾತ್ಮಕ ವ್ಯಕ್ತಿತ್ವದಿಂದ ದೂರವಿರಿ
ಕೆಲವೊಮ್ಮೆ ಹಿತಶತ್ರುಗಳು ನಮ್ಮ ನಡುವೆಯೇ ಇರುತ್ತಾರೆ. ಎದುರಿನಿಂದ ನಕ್ಕು ಹಿಂದಿನಿಂದ ನಿಮ್ಮ ವಿರುದ್ಧವೇ ಪಿತೂರಿ ನಡೆಸುತ್ತಾರೆ. ಅಂತಹ ವ್ಯಕ್ತಿಗಳ ಬಗ್ಗೆ ಸಣ್ಣ ಸುಳಿವು ದೊರೆತರೂ ದೂರ ಸರಿದುಬಿಡಿ. ಇನ್ನೂ ಕೆಲವರು ನಿಮ್ಮ ನಿರ್ಧಾರವನ್ನು ಹುರಿದುಂಬಿಸುವ ಬದಲು ನಕಾರಾತ್ಮಕವಾಗಿ ಮಾತನಾಡಿ ನೀವು ಹಿಂದೇಟು ಹಾಕುವಂತೆ ಮಾಡುತ್ತಾರೆ. ಹೀಗಾಗಿ ನಿಮ್ಮ ನಿರ್ಧಾರಗಳನ್ನು ಸರಿಯಾದ ವ್ಯಕ್ತಿಗಳೊಂದಿಗೆ ಮಾತ್ರ ಚರ್ಚಿಸಿ.

ಮುಂದಿನ ನಡೆಗಳ ಬಗ್ಗೆ  ಚರ್ಚೆ ಬೇಡ
ನಿಮ್ಮ ಮುಂದಿನ ಯೋಜನೆ, ಯೋಚನೆಗಳನ್ನು ಎಲ್ಲರೊಂದಿಗೆ ಚರ್ಚಿಸಬೇಡಿ. ಅಸೂಯೆ ಪಡುವವರು ನಿಮ್ಮ ಕೆಲಸಗಳಿಗೆ ಅಡ್ಡಗಾಲಿಡಬಹುದು. ನೆನಪಿಡಿ ನಿಮ್ಮ ಮಾತಿಗಿಂತ ನಿಮ್ಮ ಕೆಲಸ ಹೆಚ್ಚು ಮಾತನಾಡಬೇಕು. ಅದಕ್ಕೆ ಹೇಳುವುದು  Never say your Next move to anyone.

ನೆನಪಿಡಿ ನಿಮ್ಮ ಖುಷಿಗೆ ನೀವೇ ಕಾರಣ. ಒಂದು ಪುಟ್ಟ ಬದಲಾವಣೆ ನಿಮ್ಮ ಜೀವನದ ಪಲ್ಲಟಕ್ಕೆ ಕಾರಣವಾಗಬಹುದು. ಅಂತಹ ಉತ್ತಮ ನಿರ್ಧಾರಗಳನ್ನು ಇಂದೇ ಕೈಗೊಳ್ಳಿ. ಪೂರ್ಣ ವರ್ಷ ನಿಮ್ಮ ಕೈಯಲ್ಲಿದೆ. ಹೊಸ ವರ್ಷ, ಹೊಸ ಕನಸು, ಹೊಸ ಭರವಸೆಯೊಂದಿಗೆ ಬದುಕು ಸಾಗಲಿ. ಪ್ರತಿದಿನವನ್ನು ಹೊಸ ದಿನದಂತೆ ಆರಂಭಿಸಿ. 2021 ಒಂದಷ್ಟು ಕಹಿ, ಸಿಹಿ ಅನುಭವ, ನೆನಪುಗಳನ್ನು ನೀಡಿ ಹೋಗಿದೆ. ಹೊಸ ವರ್ಷ ಹೊಸತನದಿಂದ ಕೂಡಿರಲಿ.

Published On - 10:59 am, Sat, 1 January 22