ಸಾಂದರ್ಭಿಕ ಚಿತ್ರ
ಇತ್ತೀಚೆಗಿನ ದಿನಗಳಲ್ಲಿ ಎಲ್ಲಾ ಆಹಾರ ಪದಾರ್ಥಗಳಲ್ಲಿ ಕಲಬೆರಕೆಯನ್ನು ಕಾಣಬಹುದಾಗಿದೆ. ಮಾರುಕಟ್ಟೆಯಲ್ಲಿ ನಕಲಿ ಉಪ್ಪನ್ನು ಕೂಡ ಮಾರಾಟ ಮಾಡಲಾಗುತ್ತಿದೆ. ನಿಮಗೆ ಗೊತ್ತಿಲ್ಲದೇನೇ ಸೇವಿಸುವ ಈ ನಕಲಿ ಉಪ್ಪು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ನೀವು ಅಡುಗೆಗೆ ಬಳಸುವ ಈ ಉಪ್ಪು ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂದು ಮನೆಯಲ್ಲೇ ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು. ಉಪ್ಪಿನ ಶುದ್ಧತೆಯನ್ನು ಕಂಡು ಹಿಡಿಯಲು ಈ ಕೆಲವು ವಿಧಾನಗಳನ್ನು ಅನುಸರಿಸಿ.
- ಮೊದಲಿಗೆ ಆಲೂಗಡ್ಡೆಯನ್ನು ಎರಡು ಭಾಗಗಳನ್ನಾಗಿ ಮಾಡಿಕೊಳ್ಳಿ. ಆಲೂಗಡ್ಡೆಯ ಒಂದು ಬದಿಯಲ್ಲಿ ಉಪ್ಪನ್ನು ಹಚ್ಚಿ ಕನಿಷ್ಠ 3 ರಿಂದ 4 ನಿಮಿಷಗಳ ಕಾಲ ಬಿಡಿ. ಆ ಬಳಿಕ ಇದಕ್ಕೆ ಎರಡು ಹನಿ ನಿಂಬೆ ರಸವನ್ನು ಸೇರಿಸಿ, ಕೆಲವು ನಿಮಿಷಗಳ ನಂತರ ಉಪ್ಪಿನ ಬಣ್ಣವು ನೀಲಿ ಬಣ್ಣಕ್ಕೆ ತಿರುಗಿದರೆ, ಉಪ್ಪು ಕಲಬೆರಕೆಯಾಗಿದೆ ಎನ್ನುವುದು ಖಚಿತವಾಗುತ್ತದೆ.
- ಒಂದು ಲೋಟ ನೀರಿಗೆ ಒಂದು ಚಮಚ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಶುದ್ಧ ಉಪ್ಪಾಗಿದ್ದರೆ ಸಂಪೂರ್ಣವಾಗಿ ಕರಗುತ್ತದೆ. ಉಪ್ಪು ಕರಗದೆ ಉಳಿದಿದ್ದರೆ, ಅದು ನಕಲಿ ಎಂದರ್ಥ.
- ಒಂದು ಬಟ್ಟಲಿಗೆ ಸ್ವಲ್ಪ ಉಪ್ಪು ಹಾಕಿ ಒಲೆಯ ಮೇಲೆ ಇರಿಸಿ. ಈ ವೇಳೆಯಲ್ಲಿ ಶುದ್ಧ ಉಪ್ಪು ಕರಗಿ ಬಿಳಿ ಹೊಗೆಯನ್ನು ಬಿಡುಗಡೆ ಮಾಡುತ್ತದೆ. ಉಪ್ಪನ್ನು ಕಲಬೆರಕೆಯುಕ್ತವಾಗಿದ್ದರೆ ಕಪ್ಪು ಹೊಗೆಯೊಂದಿಗೆ ಕೆಟ್ಟ ವಾಸನೆಯೂ ಬರುತ್ತದೆ.
- ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಅದಕ್ಕೆ 1-2 ಚಮಚ ಉಪ್ಪನ್ನು ಸೇರಿಸಿ. ಆ ಬಳಿಕ ಹತ್ತಿ ಉಂಡೆಯನ್ನು ತೆಗೆದುಕೊಂಡು ಅದನ್ನು ಉಪ್ಪುನೀರಿನ ಮಿಶ್ರಣದಲ್ಲಿ ಅದ್ದಿಕೊಳ್ಳಿ. ಈ ಹತ್ತಿಯನ್ನು 5 ನಿಮಿಷಗಳ ಕಾಲ ನೀರಿನಲ್ಲಿ ಇರಿಸಿ. ಉಪ್ಪು ಕಲಬೆರಕೆಯಾಗಿದ್ದರೆ ಹತ್ತಿ ಉಂಡೆಯ ಬಣ್ಣವೇ ಬದಲಾಗುತ್ತದೆ. ಈ ವಿಧಾನದಿಂದ ಸುಲಭವಾಗಿ ನಕಲಿ ಉಪ್ಪನ್ನು ಪತ್ತೆಹಚ್ಚಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ