ಮಕ್ಕಳಿಗೆ ಮಾತ್ರವಲ್ಲ ಹಿರಿಯರ ಬಾಯಲ್ಲೂ ನೀರು ಬರಿಸುತ್ತದೆ ಈ ಲೌಕಿ ಚಿಲ್ಲಾ! ಮಾಡುವ ವಿಧಾನ ಇಲ್ಲಿದೆ
ಲೌಕಿ ಚಿಲ್ಲಾ ರೆಸಿಪಿ: ನೀವು ವಾರಾಂತ್ಯದಲ್ಲಿ ಏನನ್ನಾದರೂ ವಿಭಿನ್ನವಾಗಿ ಆಹಾರ ಸವಿಯಲು ಬಯಸಿದರೆ, ನೀವು ಲೌಕಿ ಚಿಲ್ಲಾವನ್ನು ಮಾಡಬಹುದು. ಮಕ್ಕಳಿಗೆ ಮಾತ್ರವಲ್ಲದೆ, ಹಿರಿಯರೂ ಬಾಯಿ ಚಪ್ಪರಿಸಿ ತಿನ್ನುವ ಈ ಲೌಕಿ ಚಿಲ್ಲಾ ಆರೋಗ್ಯಕಕ್ಕೂ ಉತ್ತಮವಾಗಿದೆ. ಈ ತಿಂಡಿ ಮಾಡುವ ವಿಧಾನ ಇಲ್ಲಿದೆ.
ಲೌಕಿ ಚಿಲ್ಲಾ ತಿಂಡಿ ಮಾಡಿದರೆ ನಿಮ್ಮ ಮನೆಯಲ್ಲಿನ ಮಕ್ಕಳು ಮಾತ್ರವಲ್ಲ ಹಿರಿಯರು ಕೂಡ ಬಾಯಿಚಪ್ಪರಿಸಿ ತಿನ್ನುತ್ತಾರೆ. ಅಷ್ಟೊಂದು ಟೇಸ್ಟಿಯಾಗಿರುತ್ತದೆ. ಬೇಸಿಗೆಯಲ್ಲಿ ಹೆಚ್ಚಾಗಿ ಮಾಡುವ ಈ ಲೌಕಿ ಚಿಲ್ಲಾವನ್ನು ಸೋರೆಕಾಯಿಯಿಂದ (Bottle Gourd) ಮಾಡಲಾಗುತ್ತದೆ. ಹೀಗಾಗಿ ಇದು ಆರೋಗ್ಯಕ್ಕೂ ಒಳ್ಳೆಯದು. ವಾರಂತ್ಯದ ಮೂಡ್ನಲ್ಲಿರುವ ನೀವು ಏನನ್ನಾದರೂ ಮಾಡಿ ತಿನ್ನಲು ಬಯಸಿದ್ದರೆ ಲೌಕಿ ಚಿಲ್ಲಾ ಟ್ರೈ ಮಾಡಬಹುದು. ಇದನ್ನು ಮಾಡುವ ವಿಧಾನವೂ ಸರಳವಾಗಿದೆ.
ಲೌಕಿ ಚಿಲ್ಲಾ ಮಾಡಲು ಯಾವೆಲ್ಲ ಬೇಕಾಗುವ ಸಾಮಾಗ್ರಿಗಳು ಬೇಕು ಎಂಬುದನ್ನು ನೋಡೋಣ. ಉದ್ದ ಸೋರೆಕಾಯಿಯ ಪೇಸ್ಟ್, ಇದು ಒಂದು ಬೌಲ್ನಷ್ಟಿರಲಿ. ಅಕ್ಕಿ ಹಿಟ್ಟು 2 ಕಪ್, ರವೆ 1 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಹಸಿರು ಮೆಣಸಿನಕಾಯಿ ಪೇಸ್ಟ್, ಬೆಳ್ಳುಳ್ಳಿ, ಶುಂಠಿ ಮತ್ತು ಕೊತ್ತಂಬರಿ ಪೇಸ್ಟ್ 1 ಚಮಚ, ಸ್ವಲ್ಪ ಎಣ್ಣೆ, ಪನೀರ್, ಕೊತ್ತಂಬರಿ ಸೊಪ್ಪು, ಟೊಮೆಟೊ ಸಾಸ್, ಮೊಸರು ಅರ್ಧ ಕಪ್, ಜೀರಿಗೆ ಪುಡಿ ಅರ್ಧ ಚಮಚ.
ಇಷ್ಟು ಸಾಮಾಗ್ರಿಗಳನ್ನು ರೆಡಿ ಮಾಡಿದ ನಂತರ ಮಾಡುವ ವಿಧಾನವನ್ನು ತಿಳಿಯೋಣ. ಒಂದು ಬಟ್ಟಲಿನಲ್ಲಿ ಸೋರೆಕಾಯಿ ಪೇಸ್ಟ್ ಹಾಕಿ ಅದಕ್ಕೆ ಅಕ್ಕಿ ಹಿಟ್ಟು, ರವೆ, ಮೊಸರು, ಜೀರಿಗೆ ಪುಡಿ, ಹಸಿರು ಮೆಣಸಿನಕಾಯಿ ಪೇಸ್ಟ್, ಶುಂಠಿ ಪೇಸ್ಟ್, ಸ್ವಲ್ಪ ನೀರು ಸೇರಿಸಿ. ನಂತರ ಚೆನ್ನಾಗಿ ಮಿಶ್ರಣ ಮಾಡಿ 30 ನಿಮಿಷಗಳ ಕಾಲ ಹಾಗೇ ಇಡಿ.
ಇದನ್ನೂ ಓದಿ: Spinach Pakoda: ಸಂಜೆ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕಾ? ಹಾಗಾದರೆ ಪಾಲಕ್ ಪಕೋಡ ಉತ್ತಮ
ಈಗ ಗ್ಯಾಸ್ ಉರಿಸಿ ತವಾ ಇಡಿ. ಇದು ಕಾದ ನಂತರ ಹಿಟ್ಟನ್ನು ದೋಸೆಯಾಕಾರದಲ್ಲಿ ಹೊಯ್ಯಬೇಕು. ನಂತರ ಅದಕ್ಕೆ ತುರಿದ ಪನೀರ್, ಕೊತ್ತಂಬರಿ ಸೊಪ್ಪು ಹಾಕಿ. ಅದಕ್ಕೆ ಸ್ವಲ್ಪ ಎಣ್ಣೆಯೂ ಹಾಕಿ. ದೋಸೆ ಕಾಯುತ್ತಿದ್ದಂತೆ ಮಗುಚಿ ಹಾಕಿ ಕೊಂಚ ಬೇಯಿಸಿ ತೆಗೆದರೆ ಬಿಸಿಬಿಸಿ ಲೌಕಿ ಚಿಲ್ಲಾ ಸವಿಯಲು ಸಿದ್ಧವಾಗಲಿದೆ. ಇದನ್ನು ಟೊಮೆಟೊ ಸಾಸ್ ಅಥವಾ ಹಸಿರು ಚಟ್ನಿಯೊಂದಿಗೆ ಸವಿಯಬಹುದು.
ಈ ವಿಡಿಯೋವನ್ನು ಗಮನಿಸಿದರೆ ಲೌಕಿ ಚಿಲ್ಲಾ ಮಾಡುವ ವಿಧಾನ ಇನ್ನಷ್ಟು ಸುಲಭವಾಗಿ ತಿಳಿಯಬಹುದು
View this post on Instagram
ಸೋರೆಕಾಯಿ ಪ್ರಯೋಜನಗಳು
ಸೋರೆಕಾಯಿ ತಂಪಾಗಿಸುವ ಗುಣ ಹೊಂದಿದೆ. ಬಿಸಿಲ ಬೇಗೆಯಲ್ಲಿ ಇದನ್ನು ತಿಂದರೆ ದೇಹಕ್ಕೆ ತಂಪು. ಸೋರೆಕಾಯಿ ಸೇವನೆಯಿಂದ ದೇಹದಲ್ಲಿ ನೀರಿನ ಕೊರತೆ ಆಗುವುದಿಲ್ಲ. ಇದು ವಿಟಮಿನ್ ಸಿ, ಕಬ್ಬಿಣ, ಪ್ರೋಟೀನ್ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಸೋರೆಕಾಯಿಯನ್ನು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು. ಸೋರೆಕಾಯಿಯಲ್ಲಿ ನಾರಿನಂಶವಿದೆ. ದೇಹದ ತೂಕ ಇಳಿಕೆಗೆ ಸಹಕಾರಿಯೂ ಹೌದು.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ