Indian Armed Forces Flag Day 2025: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಆಚರಿಸುವುದೇಕೆ ಗೊತ್ತಾ?
ಭಾರತೀಯ ಸಶಸ್ತ್ರ ಪಡೆಗಳ ವೀರ ಯೋಧರ ಶೌರ್ಯ, ತ್ಯಾಗ ಮತ್ತು ಸಮರ್ಪಣೆಯನ್ನು ಗೌರವಿಸಲು ಹಾಗೂ ವೀರ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 07 ರಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಾಗುತ್ತದೆ. ಮತ್ತು ಈ ದಿನದಂದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದಂತಹ ನಿವೃತ್ತ ಸೈನಿಕರ, ಹುತಾತ್ಮ ಯೋಧರ ಮತ್ತು ಸೇನಾ ಸಿಬ್ಬಂದಿಯ ಕುಟುಂಬಗಳ ಕಲ್ಯಾಣಕ್ಕಾಗಿ ಸಾರ್ವಜನಿಕರಿಗೆ ಧ್ವಜಗಳನ್ನು ವಿತರಿಸುವ ಮೂಲಕ ದೇಣಿಗೆಯನ್ನು ಸಂಗ್ರಹಿಸಲಾಗುತ್ತದೆ.

ನಾವು ದೇಶದೊಳಗೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ದೇಶ ಕಾಯುವ ಯೋಧರು. ದೇಶ ರಕ್ಷಣೆಗಾಗಿ ಅದೆಷ್ಟೋ ಸೈನಿಕರು ತ್ಯಾಗ, ಬಲಿದಾನವನ್ನು ಮಾಡಿದ್ದಾರೆ. ಭಾರತೀಯ ಭೂಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯ (Indian Armed Forces) ಸೈನಿಕರ ಈ ಶೌರ್ಯ, ತ್ಯಾಗ ಮತ್ತು ಸಮರ್ಪಣೆಯನ್ನು ಗೌರವಿಸಲು ಹಾಗೂ ವೀರ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದಂತಹ ನಿವೃತ್ತ ಸೈನಿಕರು, ಹುತಾತ್ಮ ಯೋಧರು ಹಾಗೂ ಅವರ ಕುಟುಂಬಗಳ ಕಲ್ಯಾಣಕ್ಕಾಗಿ ನಿಧಿ ಸಂಗ್ರಹಿಸುವ ಉದ್ದೇಶದಿಂದ ಡಿಸೆಂಬರ್ 07 ರಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಾಗುತ್ತದೆ.
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಇತಿಹಾಸವೇನು?
ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಪ್ರತಿ ವರ್ಷ ಡಿಸೆಂಬರ್ 7 ರಂದು ಆಚರಿಸಲಾಗುತ್ತದೆ. 1949 ರಲ್ಲಿ ಕೇಂದ್ರ ಸಚಿವ ಸಂಪುಟದ ರಕ್ಷಣಾ ಸಚಿವರ ಸಮಿತಿಯು ಭಾರತೀಯ ಸೇನೆಯ ಸೈನಿಕರಿಗಾಗಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಭಾರತೀಯ ಯೋಧರು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕಾಗಿ ಧ್ವಜ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಪ್ರತಿವರ್ಷ ಈ ವಿಶೇಷ ದಿನದಂದು ಸಾರ್ವಜನಿಕರಿಗೆ ಧ್ವಜಗಳನ್ನು ಹಂಚುವ ಮೂಲಕ ಸೈನಿಕರ ಕಲ್ಯಾಣಕ್ಕಾಗಿ ದೇಣಿಗೆಯನ್ನು ಸಂಗ್ರಹಿಸಲಾಗುತ್ತದೆ.
ಇದನ್ನೂ ಓದಿ: ಡಿಸೆಂಬರ್ 4 ರಂದೇ ಏಕೆ ಭಾರತೀಯ ನೌಕಾಪಡೆ ದಿನವನ್ನು ಆಚರಿಸಲಾಗುವುದು ಗೊತ್ತಾ?
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಮಹತ್ವವೇನು?
- ಭಾರತೀಯ ಭೂ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ ಯೋಧರ ಶೌರ್ಯ, ತ್ಯಾಗ ಮತ್ತು ಸಮರ್ಪಣೆಯನ್ನು ಗೌರವಿಸಲು ಮತ್ತು ಯೋಧರು ಹಾಗೂ ಅವರ ಕುಟುಂಬದ ಕಲ್ಯಾಣಕ್ಕಾಗಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಲು ಈ ದಿನವನ್ನು ಆಚರಿಸಲಾಗುತ್ತದೆ.
- ಯುದ್ಧದ ಸಮಯದಲ್ಲಿ ಮಡಿದ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು, ಸೇನಾ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕಾಗಿ ಸಹಕಾರ ನೀಡಲು ಮತ್ತು ನಿವೃತ್ತ ಯೋಧರ ಕಲ್ಯಾಣ ಹೀಗೆ ಈ ಮೂರು ಮುಖ್ಯ ಉದ್ದೇಶಗಳಿಗಾಗಿ ದೇಣಿಗೆಯನ್ನು ಸಂಗ್ರಹಿಸಲಾಗುತ್ತದೆ.
- ಮತ್ತು ಸಶಸ್ತ್ರ ಪಡೆಗಳ ಧ್ವಜ ದಿನದಂದು ಕೆಂಪು, ಕಡು ನೀಲಿ ಮತ್ತು ತಿಳಿ ನೀಲಿ ಬಣ್ಣದ ಸೇನಾ ಧ್ವಜವನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಸೈನಿಕರು ಮತ್ತು ಅವರ ಕುಟುಂಬದ ಕಲ್ಯಾಣಕ್ಕಾಗಿ ದೇಣಿಗೆಯನ್ನು ಸಂಗ್ರಹಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




