
ನಾವು ದೇಶದೊಳಗೆ ಸುರಕ್ಷಿತವಾಗಿ, ಭಯಮುಕ್ತವಾಗಿ ವಾಸಿಸುತ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ವೀರ ಯೋಧರು (Soldiers). ಎಂತಹ ಅಪಾಯ ಎದುರಾದರೂ ಸಹ, ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ಹೆಮ್ಮೆಯ ಸೈನಿಕರು ತಮ್ಮ ಕರ್ತವ್ಯದಿಂದ ಹಿಂದೆ ಸರಿಯುವುದಿಲ್ಲ. ಒಟ್ಟಾರೆಯಾಗಿ ಯೋಧರು ಮತ್ತು ಭಾರತೀಯ ಸೇನೆಯನ್ನು ದೇಶದ ಭದ್ರತೆಯ ಬೆನ್ನೆಲುಬು ಅಂತಾನೇ ಹೇಳಬಹುದು. ಭಾರತೀಯ ಸೇನೆಯ ಈ ಅದಮ್ಯ ಧೈರ್ಯ, ತ್ಯಾಗ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸಲು ಹಾಗೂ ಹುತಾತ್ಮ ಯೋಧರನ್ನು ಸ್ಮರಿಸಲು ಪ್ರತಿವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ಬ್ರಿಟೀಷ್ ಆಳ್ವಿಕೆಯ ಕಾಲದಲ್ಲಿ 1895 ಏಪ್ರಿಲ್ 01 ರಂದು ಭಾರತೀಯ ಸೇನೆಯನ್ನು ಸ್ಥಾಪಿಸಲಾಯಿತು. ಆ ಸಮಯದಲ್ಲಿ ಈ ಸೇನೆಯನ್ನು ಬ್ರಿಟೀಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು. ಆ ಸಮಯದಲ್ಲಿ ಸೇನಾ ಕಮಾಂಡರ್ಗಳು ಬ್ರಿಟೀಷರೇ ಆಗಿದ್ದರು. ಬಳಿಕ ಭಾರತ ಸ್ವಾತಂತ್ರ್ಯ ಪಡೆದ ಎರಡು ವರ್ಷಗಳ ನಂತರ ಜನವರಿ 15, 1949 ರಲ್ಲಿ ಬ್ರಿಟೀಷ್ ಕಮಾಂಡರ್ ಇನ್ ಚೀಫ್, ಜನರಲ್ ಫ್ರಾನ್ಸಿಸ್ ಬುಚರ್ ಅವರು ಕೆ.ಎಂ ಕಾರ್ಯಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ಲೆಫ್ಟಿನೆಂಟ್ ಜನರಲ್ ಕೆ.ಎಂ ಕಾರ್ಯಪ್ಪ ಸ್ವತಂತ್ರ ಭಾರತದ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡರು. ಈ ವಿಶೇಷ ದಿನದ ನೆನಪಿಗಾಗಿ ಹಾಗೂ ಭಾರತೀಯ ಸೇನೆಯ ಸೈನಿಕರ ಗೌರವಾರ್ಥವಾಗಿ ಪ್ರತಿವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯಂದೇ ಯುವ ದಿನವನ್ನು ಆಚರಿಸುವುದೇಕೆ ಗೊತ್ತಾ?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:14 am, Thu, 15 January 26