ಡಿಜಿಟಲ್ ಯುಗದಲ್ಲಿರುವ ನಾವಿಂದು ಕೈಯಲ್ಲಿರುವ ಮೊಬೈಲ್, ಕಂಪ್ಯೂಟರ್ ಗಳಿಂದ ಸುದ್ದಿಯನ್ನು ಓದಬಹುದು. ಆದರೆ ಕೆಲವರು ದಿನ ಪತ್ರಿಕೆಗಳನ್ನು ಓದಿದರೇನೇ ಅವರ ದಿನ ಪೂರ್ಣವಾಗುವುದು. ಅಂತಹವರಿಗೆ ಮೊಬೈಲ್ ಅಥವಾ ಟಿವಿಯಲ್ಲಿ ಸುದ್ದಿಯನ್ನು ನೋಡುವುದು ರುಚಿಸುವುದಿಲ್ಲ. ಆಧುನಿಕ ಕಾಲ ಘಟ್ಟದಲ್ಲಿದ್ದರೂ ಮಾಹಿತಿಗಾಗಿ ಹೆಚ್ಚಿನವರು ದಿನ ಪತ್ರಿಕೆಗಳನ್ನೇ ಅವಲಂಬಿಸಿರುತ್ತಾರೆ. ಈ ಕಾರಣದಿಂದಲೇ ಈ ಸುದ್ದಿ ಪತ್ರಿಕೆಗಳು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿವೆ. ಆದರೆ ಒಂದು ಕಾಲದಲ್ಲಿ ಈಗಿನಷ್ಟು ಪ್ರತಿಕೋದ್ಯಮವು ಬೆಳೆದಿರಲಿಲ್ಲ. ಕೆಲವೇ ಕೆಲವು ಪತ್ರಿಕೆಗಳಿದ್ದ ಸಮಯದಲ್ಲಿ ಪುಟಗಳು ಹೆಚ್ಚಿರಲಿಲ್ಲ. ಈ ಪತ್ರಿಕೆಗಳ ಮೂಲಕವೇ ಜನರು ದೇಶದ ಹಾಗುಹೋಗುಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದರು. ಭಾರತೀಯ ವೃತ್ತಪತ್ರಿಕೆ ದಿನವು, ಬ್ರಿಟಿಷರ ಆಡಳಿತವನ್ನು ಟೀಕಿಸಿ ಸುದ್ದಿಯನ್ನು ಬಿತ್ತರಿಸಿದ್ದ ಜೇಮ್ಸ್ ಆಗಸ್ಟಸ್ ಹಿಕ್ಕಿಯ ಪತ್ರಿಕೆಯಾದ ಆರಂಭವಾದ ದಿನವಾಗಿದ್ದು, ಆ ಪತ್ರಿಕೆಯನ್ನು ನೆನಪಿಸುವುದಾಗಿದೆ.
1780 ಜನವರಿ 29ರಂದು ಭಾರತದ ಮೊದಲ ವೃತ್ತಪತ್ರಿಕೆ ‘ದಿ ಬೆಂಗಾಲ್ ಗೆಜೆಟ್’ ಪ್ರಕಟಗೊಂಡಿತ್ತು. ಭಾರತದ ಮೊದಲ ಸುದ್ದಿಪತ್ರಿಕೆಯಾದ ಬೆಂಗಾಲ್ ಗೆಜೆಟ್ ಪತ್ರಿಕೆಯನ್ನು ಜೇಮ್ಸ್ ಆಗಸ್ಟಸ್ ಹಿಕ್ಕಿ ಆರಂಭಿಸಿದನು. ಈ ಸುದ್ದಿ ಪತ್ರಿಕೆಯನ್ನು ಹಿಕ್ಕಿ ಗೆಜೆಟ್ ಅಥವಾ ದಿ ಕಲ್ಕತ್ತಾ ಜನರಲ್ ಅಡ್ವರ್ಟೈಸರ್ ಎಂದೂ ಕರೆಯಲಾಗುತ್ತದೆ. ಮೊದಲ ಪತ್ರಿಕೆ ಆರಂಭಿಸಿದ ಹಿಕ್ಕಿಯನ್ನೇ ಭಾರತೀಯ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಯಲಾಗಿದೆ. ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿಯ ಸಮನ್ಸ್ ಪ್ರಕಾರ, ಮೊದಲ ಪತ್ರಿಕೆ ಆರಂಭವಾದ ದಿನವನ್ನು ಪ್ರತಿ ವರ್ಷ ಜನವರಿ 29 ರಂದು ಆಚರಿಸಲಾಗುತ್ತದೆ.
ಇದನ್ನೂ ಓದಿ: ತುಳಸಿ ಎಲೆಯ ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ, ಇಲ್ಲಿದೆ ನೋಡಿ
ಜನವರಿ 29 ರಂದು ಆಚರಿಸಲಾಗುವ ಭಾರತೀಯ ವೃತ್ತಪತ್ರಿಕೆ ದಿನವು ಮುದ್ರಣ ಮಾಧ್ಯಮ ಕ್ಷೇತ್ರವನ್ನು ಗೌರವಿಸುವ ದಿನವಾಗಿದೆ. ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉತ್ತೇಜಿಸುವಲ್ಲಿ ಪತ್ರಕರ್ತರ ಕೊಡುಗೆಗಳನ್ನು ಗುರುತಿಸುವ ದಿನ ಇದಾಗಿದೆ. ಈ ಪತ್ರಿಕೆಗಳು ದೇಶ, ವಿದೇಶದಲ್ಲಿ ನಡೆಯುವ ಸುದ್ದಿಗಳನ್ನು ತಿಳಿಸುವ ಮೂಲಕ ಯುವ ಪೀಳಿಗೆಯನ್ನು ಸಕಾರಾತ್ಮಕ ಸಾಮಾಜಿಕ ಬದಲಾವಣೆಗಳನ್ನು ಮಾಡಲು ಪ್ರೇರೇಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಾಂಪ್ರದಾಯಿಕ ಮಾಧ್ಯಮವಾದ ಈ ಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಿದವರಿಗೆ, ಮತ್ತೆ ಪತ್ರಿಕೆಗಳನ್ನು ಓದಲು ಹುರಿದುಂಬಿಸುವ ಉದ್ದೇಶವನ್ನು ಈ ದಿನವು ಹೊಂದಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ