ದಿನ ಬೆಳಗಾದರೆ ಟಿವಿ, ನ್ಯೂಸ್ ಪೇಪರ್, ಡಿಜಿಟಲ್ ಮಾಧ್ಯಮಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತಾದ ಒಂದಲ್ಲ ಒಂದು ಸುದ್ದಿಗಳನ್ನು ಕೇಳುತ್ತಿರುತ್ತೇವೆ. ವರದಕ್ಷಿಣಿ, ಅತ್ಯಾಚಾರ, ಕೊಲೆ ಹೀಗೆ ನಾನಾ ಕಾರಣಕ್ಕಾಗಿ ಮಹಿಳೆಯರ ಮೇಲಿನ ದೌರ್ಜನ್ಯ ನಡೆಯುತ್ತಲೇ ಇದೆ. ಕಾನೂನು ಸುವ್ಯವಸ್ಥೆಯಿದ್ದರೂ ಕೂಡ ಈ ದೌರ್ಜನ್ಯಗಳು ನಿಲ್ಲುತ್ತಿಲ್ಲ. ಹೀಗಾಗಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ನಿಲ್ಲಿಸುವುದು, ಸಮಾಜದಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಕಡಿವಾಣ ಹಾಕುವುದು ಹಾಗೂ ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಅಂತಾರಾಷ್ಟ್ರೀಯ ಮಹಿಳಾ ಶೋಷಣೆ ನಿವಾರಣಾ ದಿನವನ್ನು ಆಚರಿಸಲಾಗುತ್ತದೆ.
1981 ರಲ್ಲಿ ಲ್ಯಾಟಿನ್ ಅಮೇರಿಕಾ ಮತ್ತು ಕೆರೆಬಿಯನ್ ಸ್ತ್ರೀವಾದಿ ಕಾರ್ಯಕರ್ತರು ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಬೇಕು ಹಾಗೂ ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸಬೇಕು ಎಂಬ ಕಾರಣಕ್ಕೆ ನವೆಂಬರ್ 25 ರಂದು ಅಂತಾರಾಷ್ಟ್ರೀಯ ಮಹಿಳಾ ಶೋಷಣೆ ನಿವಾರಣಾ ದಿನವನ್ನು ಆಚರಿಸಬೇಕೆಂದು ನಿರ್ಧರಿಸಿದರು. ಈ ಮಹಿಳಾ ಶೋಷಣೆ ನಿವಾರಣಾ ದಿನವನ್ನು ಈ ನಿರ್ಧಿಷ್ಟ ದಿನದಂದು ಆಚರಿಸಲು ಕಾರಣವೇನೆಂದರೆ, 1960 ರಲ್ಲಿ ನಡೆದ ಆ ಘಟನೆ ಎನ್ನಬಹುದು.
1960, ನವೆಂಬರ್ 25 ರಲ್ಲಿ ಮೂವರು ಸಹೋದರಿಯರಾದ ಪ್ಯಾಟ್ರಿಯಾ ಮರ್ಸಿಡಿಸ್ ಮೆರಾಬೆಲ್, ಮರಿಯಾ ಅರ್ಜೆಂಟೀನಾ ಮಿನಾರ್ವಾ ಮೆರಾಬೆಲ್ ಮತ್ತು ಆಂಟೋನಿಯಾ ಮಾರಿಯಾ ತೆರೇಸಾ ಮೆರಾಬೆಲ್ ಅವರನ್ನು ಡೊಮಿನಿಕನ್ ರಿಪಬ್ಲಿಕ್ ಆಡಳಿತಗಾರ ರಾಫೆಲ್ ಟ್ರುಜೆಲ್ಲೊನ ಆದೇಶದ ಮೇರೆಗೆ ಕ್ರೂರವಾಗಿ ಸಾಯಿಸಲಾಯಿತು. ಆ ಮೂವರು ಸಹೋದರಿಯರು ಈತನ ಸರ್ವಾಧಿಕಾರವನ್ನು ವಿರೋಧಿಸಿದ್ದ ಕಾರಣಕ್ಕೆ ಅವರನ್ನು ಕೊಲ್ಲಲಾಯಿತು. ಹಾಗಾಗಿ ಈ ಮೂವರು ದಿಟ್ಟ ಮಹಿಳೆಯರನ್ನು ಸ್ಮರಿಸುವ ಸಲುವಾಗಿ ನವೆಂಬರ್ 25 ರಂದು ಈ ವಿಶೇಷ ದಿನವನ್ನು ಆಚರಿಸುವುದೆಂದು ನಿರ್ಧರಿಸಲಾಯಿತು. ಆ ಬಳಿಕ ಮಹಿಳೆಯರ ಮೇಲಿ ದೌರ್ಜನ್ಯದ ಪ್ರಮಾಣ ತೀವ್ರವಾಗಿ ಹೆಚ್ಚಾದ ಕಾರಣ 1999 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪ್ರತಿ ವರ್ಷ ನವೆಂಬರ್ 25 ರಂದು ಅಂತಾರಾಷ್ಟ್ರೀಯ ಮಹಿಳಾ ಶೋಷಣೆ ನಿವಾರಣಾ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಿತು. ಆ ಬಳಿಕ ಈ ದಿನದ ಆಚರಣೆಯೂ ಚಾಲ್ತಿಯಲ್ಲಿದೆ.
ಇದನ್ನೂ ಓದಿ: ಬೇಕರಿ ಶೈಲಿಯಲ್ಲಿ ಮನೆಯಲ್ಲೇ ಮಾಡಿ ಗೋಡಂಬಿ ಬರ್ಫಿ , ಇಲ್ಲಿದೆ ರೆಸಿಪಿ
ಮಹಿಳೆಯರ ಮೇಲಾಗುವ ದೈಹಿಕ ಮತ್ತು ಮಾನಸಿಕ ಹಿಂಸಾಚಾರಗಳನ್ನು ತಡೆಗಟ್ಟಲು ಮತ್ತು ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಯುವುದು ಈ ದಿನದ ಮೂಲ ಉದ್ದೇಶವಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಮುಕ್ತವಾಗಿ ಬದುಕಲು ಅವಕಾಶ ಕಲ್ಪಿಸುವುದು. ಲಿಂಗ ಅಸಮಾನತೆ ಹಾಗೂ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ದಿನವು ಮಹತ್ವದ್ದಾಗಿದೆ. ಈ ವಿಶೇಷ ದಿನದಂದು ವಿವಿಧ ಸಂಘ ಸಂಸ್ಥೆಗಳು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ದ ಅರಿವು ಮೂಡಿಸಲು ನಾನಾ ರೀತಿಯ ಕಾರ್ಯಕ್ರಮಗಳು ಹಾಗೂ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ