
ಮೋಹನ್‌ದಾಸ್ ಕರಮ್‌ಚಂದ ಗಾಂಧಿಯವರು (Gandhiji) ಸತ್ಯ ಮತ್ತು ಅಹಿಂಸಾ ತತ್ವಗಳ ಮೂಲಕವೇ ಜನಮನ ಗೆದ್ದವರು. ಭಾರತವನ್ನು ಬ್ರಿಟೀಷರ ಕಪಿ ಮುಷ್ಟಿಯಿಂದ ಬಿಡಿಸಲು ಸತ್ಯಾಗ್ರಹ ಮತ್ತು ಅಹಿಂಸಾ ಚಳುವಳಿಯನ್ನು ಮಾಡಿದವರು. ಅಹಿಂಸಾ ತತ್ವದ ಮೂಲಕವೇ ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದವರು. ಹೀಗೆ ಇವರು ತಮ್ಮ ಜೀವನದುದ್ದಕ್ಕೂ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಅನುಸರಿಸಿ ಮನುಕುಲಕ್ಕೆ ಮಾನವೀಯತೆ ಹಾಗೂ ಅಹಿಂಸೆಯ ಪಾಠವನ್ನು ಕಲಿಸಿದವರು. ನಾಡು ಕಂಡು ಈ ಶ್ರೇಷ್ಠ ವ್ಯಕ್ತಿಯ ಜನ್ಮ ಜಯಂತಿ ಇಂದು. ಗಾಂಧಿಯವರ ಜನ್ಮ ಜಯಂತಿಯಾದ ಅಕ್ಟೋಬರ್ 2 ರಂದು ಗಾಂಧೀಜಿಯವರ ಕೆಲಸ, ತತ್ವಗಳನ್ನು ಗೌರವಿಸುವ ಸಲುವಾಗಿ ಅಂತಾರಾಷ್ಟ್ರೀಯ ಅಹಿಂಸಾ (International Day of Non-Violence) ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ವಾಸ್ತವವಾಗಿ, ಅಹಿಂಸೆಯ ನೀತಿಯ ಮೂಲಕ ವಿಶ್ವಾದ್ಯಂತ ಶಾಂತಿಯ ಸಂದೇಶವನ್ನು ಪ್ರಚಾರ ಮಾಡುವಲ್ಲಿ ಮಹಾತ್ಮ ಗಾಂಧಿಯವರ ಕೊಡುಗೆಯನ್ನು ಗುರುತಿಸಲು, ಅವರ ಜನ್ಮ ಜಯಂತಿಯ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಸರ್ಕಾರವು 2007 ರಲ್ಲಿ, ಅಹಿಂಸಾ ದಿನವನ್ನು ಆಚರಿಸುವ ಬಗ್ಗೆ ಒಂದು ನಿರ್ಣಯವನ್ನು ಸಲ್ಲಿಸಿತು. ಈ ನಿರ್ಣಯಕ್ಕೆ ಅಗಾಧ ಬೆಂಬಲ ದೊರೆಯಿತು. ಸಾಮಾನ್ಯ ಸಭೆಯ 191 ಸದಸ್ಯ ರಾಷ್ಟ್ರಗಳಲ್ಲಿ 140 ಕ್ಕೂ ಹೆಚ್ಚು ರಾಷ್ಟ್ರಗಳು ಈ ನಿರ್ಣಯವನ್ನು ಒಪ್ಪಿಕೊಂಡವು. ನಂತರ ಜೂನ್ 15, 2007 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ನಿರ್ಣಯವನ್ನು ಅಂಗೀಕರಿಸಿತು. ಮತ್ತು ಅಕ್ಟೋಬರ್ 02 ರಂದು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಗಾಂಧಿ ಜಯಂತಿಯ ದಿನದಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಹಿಂಸಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಗಾಂಧೀಜಿಯವರ ತತ್ವಗಳು ಮತ್ತು ಜೀವನವನ್ನು ನೆನಪಿಸಿಕೊಳ್ಳುವ ಸದಾವಕಾಶವನ್ನು ಒದಗಿಸುತ್ತದೆ.
ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿ ಭಾಗವಹಿಸಿದರು. ಆದಾಗ್ಯೂ, ಸ್ವಾತಂತ್ರ್ಯ ಹೋರಾಟದ ಬಗೆಗಿನ ಅವರ ವಿಧಾನ, ದೃಷ್ಟಿಕೋನ ತುಂಬಾ ಭಿನ್ನವಾಗಿತ್ತು. ಯಾರಿಗೂ ಹಾನಿ ಮಾಡದೆ, ಹಿಂಸೆಯಿಲ್ಲದೆ ಬ್ರಿಟಿಷರನ್ನು ದೇಶದಿಂದ ಓಡಿಸುವುದರಲ್ಲಿ ಅವರು ನಂಬಿಕೆ ಇಟ್ಟಿದ್ದರು. ಹೀಗೆ ಗಾಂಧಿಯವರು ತಮ್ಮ ಅಹಿಂಸಾತ್ಮಕ ಚಳುವಳಿಯ ಮೂಲಕವೇ ಖ್ಯಾತಿಯನ್ನು ಗಳಿಸಿದವರು. ಅವರ ಈ ಅಹಿಂಸಾತ್ಮಕ ತತ್ವಗಳಿಗೆ ಗೌರವ ಸಲ್ಲಿಸುವ ಸಲುವಾಗಿ, ಹಾಗೂ ಪ್ರತಿಯೊಬ್ಬರೂ ಗಾಂಧಿಯವರ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರೇರೇಪಿಸುವ ಸಲುವಾಗಿ ಗಾಂಧಿ ಜಯಂತಿಯ ದಿನ ಅಹಿಂಸಾ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಕಾಫಿ ಪ್ರಿಯರಿಗೆ ಒಂದು ಕಪ್ ಬಿಸಿ ಬಿಸಿ ಕಾಫಿಯೇ ಜೀವಾಮೃತ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ