
ಈ ಪ್ರಪಂಚವು ಸಾಕಷ್ಟು ವೈವಿಧ್ಯತೆಯಿಂದ ಕೂಡಿದೆ. ಇಲ್ಲಿ ಅನೇಕ ಧರ್ಮಗಳು, ಭಾಷೆಗಳು, ಸಂಸ್ಕೃತಿಗಳ ಜನರು ವಾಸಿಸುತ್ತಿದ್ದಾರೆ. ಈ ವೈವಿಧ್ಯತೆಯಿಂದಾಗಿ ಜನರಲ್ಲಿ ಸಹಜವಾಗಿ ಭೇದಭಾವಗಳ ಭಾವನೆ ಮೂಡತ್ತದೆ. ಈ ಕಾರಣದಿಂದಾಗಿ ಸಮಾಜ ಮತ್ತು ದೇಶ ದೇಶಗಳ ನಡುವೆ ಯುದ್ಧ, ಹಿಂಸಾಚಾರ, ಭಯೋತ್ಪಾದನೆ ಮತ್ತು ಇತರ ಸಾಕಷ್ಟು ಸಮಸ್ಯೆಗಳು ಉದ್ಭವಿಸುತ್ತದೆ. ಇದು ಇಡೀ ಮಾನವ ಜನಾಂಗಕ್ಕೆ ಹಾನಿಯುಂಟುಮಾಡುತ್ತದೆ. ಅದೇ ದೇಶ ದೇಶಗಳು ಒಗ್ಗಟ್ಟಿನಿಂದ (Solidarity) ಇದ್ದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ʼವಸುದೈವ ಕುಟುಂಬಕಂʼ ಅಂದರೆ ಇಡೀ ಜಗತ್ತು ಒಂದೇ ಕುಟುಂಬ ಎಂಬ ಪರಿಕಲ್ಪನೆಯಂತೆ ಅಂತರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವ, ನಾಗರಿಕರಲ್ಲಿ ಏಕತೆ ಮತ್ತು ಸಹೋದರತ್ವ ಭಾವನೆಯನ್ನು ಮೂಡಿಸುವ ಮತ್ತು ಜಗತ್ತಿನಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಉತ್ತೇಜಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನವನ್ನು ಆಚರಿಸಲಾಗುತ್ತದೆ.
ವಿಶ್ವದಲ್ಲಿ ಪರಸ್ಪರ ಸಹಕಾರ ಮತ್ತು ಸಾಮರಸ್ಯವನ್ನು ಉತ್ತೇಜಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನವನ್ನು ಆಚರಿಸಲು ಮೊದಲು ಪ್ರಸ್ತಾಪಿಸಿತು. ಇದರ ನಂತರ 22 ಡಿಸೆಂಬರ್ 2005 ರಂದು 60/209 ನಿರ್ಣಯದ ಅಡಿಯಲ್ಲಿ ಡಿಸೆಂಬರ್ 20 ರಂದು ಅಂತರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್ 20 ರಂದು ಜಾಗತಿಕ ಮಟ್ಟದಲ್ಲಿ ಮಾನವ ಒಗ್ಗಟ್ಟಿನ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು?
ಒಟ್ಟಿನಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಆಚರಿಸಲು ಮತ್ತು ಒಗ್ಗಟ್ಟಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 20 ರಂದು ಜಾಗತಿಕವಾಗಿ ಮಾನವ ಒಗ್ಗಟ್ಟಿನ ದಿನವನ್ನು ಆಚರಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:38 am, Sat, 20 December 25