International Migrants Day 2024: ಅಂತಾರಾಷ್ಟ್ರೀಯ ವಲಸಿಗರ ದಿನವನ್ನು ಆಚರಿಸುವುದು ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 17, 2024 | 5:04 PM

ಪ್ರಸ್ತುತ 281 ದಶಲಕ್ಷ ಜನರು ಸ್ವಂತದ್ದಲ್ಲದ ದೇಶದಲ್ಲಿ ನೆಲೆಸಿದ್ದು, ಹೀಗಾಗಿ ಜಗತ್ತಿನ ಹಲವು ದೇಶಗಳು ವಲಸಿಗರ ಸಮಸ್ಯೆಯನ್ನು ಎದುರಿಸುತ್ತಿದೆ. ಜಗತ್ತಿನಾದ್ಯಂತ ಇರುವ ವಲಸಿಗರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯ ಕುರಿತು ಗಮನ ಸೆಳೆಯುವ ಉದ್ದೇಶದಿಂದ ಡಿಸೆಂಬರ್ 18 ರಂದು ಅಂತಾರಾಷ್ಟ್ರೀಯ ವಲಸಿಗರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹಾಗಾದ್ರೆ ಈ ದಿನದ ಆಚರಣೆಯೂ ಹುಟ್ಟಿಕೊಂಡದ್ದು ಹೇಗೆ? ಈ ದಿನದ ಮಹತ್ವವೇನು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

International Migrants Day 2024: ಅಂತಾರಾಷ್ಟ್ರೀಯ ವಲಸಿಗರ ದಿನವನ್ನು ಆಚರಿಸುವುದು ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಕುಟುಂಬವನ್ನು ಕಟ್ಟಿಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ಜನರು ವಲಸೆ ಹೋಗುತ್ತಿದ್ದರು. ಆದರೆ ಇದೀಗ ಜಾಗತೀಕರಣ, ನಗರೀಕರಣ, ಕೈಗಾರೀಕರಣ, ಉದಾರೀಕರಣದ ಪ್ರಭಾವದಿಂದಾಗಿ ವಲಸೆ ಹೋಗುವವರ ಸಂಖ್ಯೆಯೂ ಏರಿಕೆಯಾಗಿದೆ ಶಿಕ್ಷಣ, ಕೆಲಸ, ಆಂತರಿಕ ಬಿಕ್ಕಟ್ಟು, ಹವಾಮಾನ ವೈಪರೀತ್ಯ ಮುಂತಾದ ಕಾರಣಗಳಿಗಾಗಿ ಊರು ಹಾಗೂ ದೇಶ ತೊರೆಯುತ್ತಿದ್ದಾರೆ. ಈ ವಲಸಿಗರಿಗಾಗಿಯೇ ಒಂದು ದಿನವು ಅಸ್ತಿತ್ವದಲ್ಲಿದ್ದು, ಅದುವೇ ಅಂತಾರಾಷ್ಟ್ರೀಯ ವಲಸಿಗರ ದಿನ. ಜಗತ್ತಿನಾದ್ಯಂತ ಇರುವ ವಲಸಿಗರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಕುರಿತು ಗಮನ ಸೆಳೆಯುವ ಉದ್ದೇಶದಿಂದ ಡಿಸೆಂಬರ್ 18 ರಂದು ಅಂತಾರಾಷ್ಟ್ರೀಯ ವಲಸಿಗರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ವಲಸಿಗರ ದಿನದ ಇತಿಹಾಸ

1990ರಲ್ಲಿ ಇದೇ ದಿನದಂದು ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರ ಹಕ್ಕುಗಳ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಸಮಾವೇಶ ನಡೆಸಿತ್ತು. ತದನಂತರದಲ್ಲಿ ಡಿಸೆಂಬರ್‌ 4, 2000ರಂದು ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿಯೂ ಡಿಸೆಂಬರ್‌ 18ರಂದು ಅಂತಾರಾಷ್ಟ್ರೀಯ ವಲಸಿಗರ ದಿನ ಆಚರಿಸಲು ನಿರ್ಧಾರವನ್ನು ಕೈಗೊಂಡಿತ್ತು. ಪ್ರಪಂಚದಾದಂತ್ಯ ಹೆಚ್ಚುತ್ತಿರುವ ವಲಸಿಗರನ್ನು ಗಮನದಲ್ಲಿಟ್ಟುಕೊಂಡು ಈ ದಿನವನ್ನು ಆಚರಿಸಲು ಮುಂದಾಯಿತು. 2000 ರಿಂದ ಡಿಸೆಂಬರ್‌ 18 ರಂದು ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ವಲಸಿಗರ ದಿನವಾಗಿ ಆಚರಿಸುತ್ತ ಬರಲಾಗಿದೆ.

ಅಂತಾರಾಷ್ಟ್ರೀಯ ವಲಸಿಗರ ದಿನದ ಮಹತ್ವ ಹಾಗೂ ಆಚರಣೆ

ವಲಸಿಗರ ಸುರಕ್ಷತೆ, ವಲಸಿಗರ ಹಕ್ಕುಗಳ ಬಗ್ಗೆ ತಿಳಿಸಲು, ಅವರ ಕೊಡುಗೆಗಳು ಮತ್ತು ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಭವಿಷ್ಯದ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಈ ದಿನವು ಹೊಂದಿದೆ. ಅಂತಾರಾಷ್ಟ್ರೀಯ ವಲಸಿಗರ ದಿನದ ಪ್ರಯುಕ್ತ ಜಾಗತಿಕ ಮಟ್ಟದಲ್ಲಿ ವಿವಿಧ ಸಂಘ ಸಂಸ್ಥೆಗಳು ವಿವಿಧ ರೀತಿಯ ಕಾರ್ಯಕ್ರಮಗಳು, ಸೆಮಿನಾರ್, ಅಭಿಯಾನಗಳನ್ನು ಹಮ್ಮಿಕೊಳ್ಳುತ್ತವೆ.

ಜಾಗತಿಕ ಮಟ್ಟದಲ್ಲಿ ವಲಸೆ ಹೋಗುವವರ ಪೈಕಿ ಭಾರತಕ್ಕೆ ಎಷ್ಟನೇ ಸ್ಥಾನ?

ಜಾಗತಿಕ ಮಟ್ಟದಲ್ಲಿ ವಲಸೆ ಹೋಗುತ್ತಿರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎಂದು ಅಂತಾರಾಷ್ಟ್ರೀಯ ವಲಸೆ ಸಂಸ್ಥೆಯೂ ನೀಡಿದ 2024 ರ ವರದಿಯಲ್ಲಿ ಬಹಿರಂಗವಾಗಿದೆ. 2024 ರ ವಿಶ್ವ ವಲಸೆ ವರದಿಯಲ್ಲಿ ವಲಸೆ ಹೋಗುವುದರ ಹಿಂದಿನ ಕಾರಣಗಳನ್ನು ತಿಳಿಸಲಾಗಿದ್ದು, ಹವಾಮಾನ ಬದಲಾವಣೆ, ರಾಜಕೀಯ ಅಧಿಕಾರ, ಆಹಾರ ಉತ್ಪಾದನೆಯ ಜಾಗತೀಕರಣ ಮತ್ತು ಇತರ ಸಾಮಾಜಿಕ ಅಂಶಗಳು ಸೇರಿವೆ.

ಇದನ್ನೂ ಓದಿ: ನಿಮ್ಮ ಮುಖದಲ್ಲಿ ಸದಾ ನಗುವಿದೆಯೇ?ನಿಮ್ಮ ನಗುವಿನಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ

ಅದಲ್ಲದೇ, ಯುರೋಪ್ ಮತ್ತು ಏಷ್ಯಾ ಖಂಡಗಳಿಂದ ವಲಸೆ ಹೋಗುವವರ ಪ್ರಮಾಣ ಹೆಚ್ಚಾಗಿದ್ದು, 8.7 ಕೋಟಿ ಮತ್ತು 8.6 ಕೋಟಿ ಜನರು ಇಲ್ಲಿಂದಲೇ ವಲಸೆ ಹೋಗುತ್ತಿದ್ದಾರೆ. ವಿಶ್ವದಾದಂತ್ಯ ಶೇ 61ರಷ್ಟು ಜನರು ಯುರೋಪ್ ಮತ್ತು ಏಷ್ಯಾ ಖಂಡಗಳಿಗೆ ಸೇರಿದವರಾಗಿದ್ದಾರೆ. 460 ಕೋಟಿ ಜನಸಂಖ್ಯೆ ಇರುವ ಏಷ್ಯಾದಲ್ಲಿ ಶೇ 40ರಷ್ಟು ಮಂದಿ ಅಂತಾರಾಷ್ಟ್ರೀಯ ವಲಸಿಗರಾಗಿದ್ದು, ಇದರಲ್ಲಿ ಆರು ದೇಶಗಳ ಜನರು ಶೇ 20ರಷ್ಟು ನೆಲೆಸಿದ್ದಾರೆ. ಈ ಪೈಕಿ ಭಾರತ ಕೂಡ ಅಗ್ರಸ್ಥಾನದಲ್ಲಿದ್ದು , ಭಾರತದಿಂದ ವಲಸೆ ಹೋಗುವವರು ಜಗತ್ತಿನಲ್ಲಿಯೇ ಅತಿ ಹೆಚ್ಚು ಎನ್ನಲಾಗಿದೆ. ಅದರೊಂದಿಗೆ ಭಾರತಕ್ಕೆ ಹೊರದೇಶಗಳಿಂದ 48.78 ಲಕ್ಷ ವಲಸಿಗರು ಬಂದಿದ್ದು, ಈ ವಲಸಿಗರಿಂದ ಭಾರತಕ್ಕೆ ಅತಿ ಹೆಚ್ಚು ಹಣ ಹರಿದುಬರುತ್ತಿದೆ ಎಂದು ಅಂಕಿಅಂಶದಿಂದ ತಿಳಿದು ಬಂದಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ