
ಪ್ರವಾಸ (Trips) ಹೋಗುವುದೆಂದರೆ ಹೆಚ್ಚಿನವರಿಗೆ ಬಲು ಇಷ್ಟ. ಸುಂದರ ತಾಣಗಳಲ್ಲಿ ಕಳೆಯುವ ಈ ಖುಷಿಯ ಕ್ಷಣ ಒಂದು ಅದ್ಭುತ ನೆನಪಾಗಿ, ಸದಾ ಹಚ್ಚ ಹಸುರಾಗಿ ಇರುತ್ತದೆ. ಹಲವರು ಬೀಚ್, ಫಾರಿನ್ ಟ್ರಿಪ್‌ಗಳಿಗೆ ಹೋಗಲು ಜಾಸ್ತಿ ಇಷ್ಟಪಡುತ್ತಾರೆ. ಆದ್ರೆ ಈ ಬಾರಿ ನೀವು ನಮ್ಮ ಕರ್ನಾಟಕದಲ್ಲಿರುವ ಈ ಸ್ಪೆಷಲ್ ತಾಣಕ್ಕೆ ಭೇಟಿ ನೀಡುವ ಮೂಲಕ ಹೊಸದೊಂದು ಅನುಭವವನ್ನು ಪಡೆಯಿರಿ. ಹಕ್ಕಿಗಳ ತವರೂರಾದ ಕೊಕ್ಕರೆ ಬೆಳ್ಳೂರಿಗೆ (Kokkare Bellur) ನೀವು ಪ್ರವಾಸ ಹೋಗುವ ಮೂಲಕ, ಇಲ್ಲಿ ಬಗೆಬಗೆಯ ಕೊಕ್ಕರೆ ಸೇರಿದಂತೆ ವಿವಿಧ ಬಗೆಯ ವಲಸೆ ಹಕ್ಕಿಗಳನ್ನು ಕಣ್ತುಂಬಿಕೊಳ್ಳುವ ಮೂಲಕ ಪ್ರವಾಸವನ್ನು ಇನ್ನಷ್ಟು ವಿಶೇಷವಾಗಿಸಬಹುದು.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಈ ಕೊಕ್ಕರೆ ಬೆಳ್ಳೂರು ತಾಣವಿದ್ದು, ಬೆಳ್ಳಗಿನ ಕೊಕ್ಕರೆಗಳ ನೆಲೆವೀಡಾಗಿರುವ ಈ ಗ್ರಾಮ ಕೊಕ್ಕರೆಗಳ ಕಾರಣದಿಂದ ಕೊಕ್ಕರೆ ಬೆಳ್ಳೂರು ಅಂತಾನೇ ಪ್ರಸಿದ್ಧಿ ಪಡೆದಿದೆ. ಬೆಳ್ಳೂರು ಇಡೀ ಊರಿಗೆ ಊರೇ ಪಕ್ಷಿಧಾಮವಾಗಿದ್ದು, ಪಕ್ಷಿಗಳೊಂದಿಗೆ ಇಲ್ಲಿನ ಜನರು ಬದುಕು ಕಟ್ಟಿಕೊಂಡಿರುವುದು ಈ ಪಕ್ಷಿಧಾಮದ ವಿಶೇಷವಾಗಿದೆ. ಈ ಸುಂದರ ಹಳ್ಳಿ ವಲಸೆ ಹಕ್ಕಿಗಳು ಮತ್ತು ಸಾಂಪ್ರದಾಯಿಕ ಹಳ್ಳಿ ಜೀವನದ ಆಕರ್ಷಕ ಮಿಶ್ರಣವಾಗಿದೆ.
ಕೊಕ್ಕರೆ ಬೆಳ್ಳೂರು ಕೊಕ್ಕರೆ ಸೇರಿದಂತೆ ಅಪಾರ ಸಂಖ್ಯೆ ಅಪರೂಪದ ವಲಸೆ ಹಕ್ಕಿಗಳನ್ನು ಹೊಂದಿರುವ ವಿಶಿಷ್ಟ ತಾಣವಾಗಿದೆ. ಪ್ರತಿವರ್ಷ, ವಿಶೇಷವಾಗಿ ಡಿಸೆಂಬರ್‌ನಿಂದ ಜೂನ್‌ವರೆಗೆ ಬಿಳಿ ಬಣ್ಣದ ಕೊಕ್ಕರೆ ಸೇರಿದಂತೆ ವಿವಿಧ ಬಣ್ಣದ ಕೊಕ್ಕರೆಗಳು ಹಾಗೂ ಪೆಲಿಕನ್, ಪಾರ್ಕ್ ಪೇಂಟರ್, ನೈಟ್ ಎರಾನ್, ವೈಟ್ ಹೇಬಿಸ್ ನಂತಹ ಪಕ್ಷಿಗಳು ವಂಶಾಭಿವೃದ್ಧಿಗಾಗಿ ಇಲ್ಲಿಗೆ ವಲಸೆ ಬರುತ್ತವೆ. ಈ ಹಳ್ಳಿಯ ಮರಗಳಲ್ಲಿ ಗೂಡುಕಟ್ಟಿ ಸಂತಾನೋತ್ಪತ್ತಿ ನಡೆಸುತ್ತದೆ. ಜೊತೆಗೆ ಹಳ್ಳಿಯ ಜನರು ಕೂಡಾ ಪಕ್ಷಿಗಳಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಅವುಗಳೊಂದಿಗೆ ಸಾಮಾರಸ್ಯದಿಂದ ಬದುಕು ನಡೆದುತ್ತಿದ್ದಾರೆ. ಈ ಸುಂದರ ತಾಣಕ್ಕೆ ಭೇಟಿ ನೀಡುವ ಮೂಲಕ ನೀವು ಹಕ್ಕಿಗಳ ಜೊತೆಗೆ ಹಳ್ಳಿಯ ಸೊಬಗನ್ನು ಕೂಡ ಕಣ್ತುಂಬಿಕೊಳ್ಳಬಹುದು. ಇಂತಹ ವಿಶೇಷ ಸ್ಥಳಕ್ಕೆ ಭೇಟಿ ನೀಡುವ ಮೂಲಕ ವಿವಿಧ ಬಗೆಯ ಹಕ್ಕಿಗಳ ಜೊತೆಗೆ ಕೊಕ್ಕರೆ ಬೆಳ್ಳೂರಿನ ಪ್ರಶಾಂತ ಸೌಂದರ್ಯದ ಸುಂದರ ಅನುಭವವನ್ನು ಪಡೆಯಿಯಿರಿ.
ಪಕ್ಷಿ ವೀಕ್ಷಣೆ: ಪಕ್ಷಿ ವೀಕ್ಷಣೆಯೇ ಇಲ್ಲಿನ ಪ್ರಮುಖ ಆಕರ್ಷಣೆ. ಹೌದು ಈ ತಾಣ ಬಣ್ಣದ ಕೊಕ್ಕರೆಗಳು ಮತ್ತು ಪೆಲಿಕನ್ ಹಕ್ಕಿಗಳಿಗೆ ಹೆಸರುವಾಸಿಯಾಗಿದೆ. ಪ್ರವಾಸಿಗರು ಇಲ್ಲಿ ಪಕ್ಷಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನದಲ್ಲಿ ಗೂಡುಕಟ್ಟುವುದು ಮತ್ತು ಸಂವಹನ ನಡೆಸುವ ಸೊಬಗನ್ನು ವೀಕ್ಷಿಸಬಹುದು.
ಪ್ರಕೃತಿಯ ಮಡಿಲಲ್ಲಿ ನಡಿಗೆ: ಹಕ್ಕಿಗಳನ್ನು ನೋಡುವುದರ ಜೊತೆಗೆ ಇಲ್ಲಿ ನೀವು ಪ್ರಶಾಂತವಾದ ಭೂದೃಶ್ಯಗಳನ್ನು ಆನಂದಿಸಬಹುದು. ಈ ಹಳ್ಳಿಯ ಸುತ್ತಮುತ್ತ ಪ್ರಶಾಂತವಾದ ಹಚ್ಚ ಹಸಿರಿನ ತಾಣಗಳಿದ್ದು, ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.
ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನಕ್ಕೆ ಅವಿವಾಹಿತ ಜೋಡಿ ಏಕೆ ಭೇಟಿ ನೀಡಬಾರದು?
ಕೊಕ್ಕರೆ ಬೆಳ್ಳೂರಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಡಿಸೆಂಬರ್‌ನಿಂದ ಜೂನ್‌ವರೆಗೆ. ಈ ಸಮಯದಲ್ಲಿ ಹವಾಮಾನವು ಆಹ್ಲಾದಕರ ಮತ್ತು ಪಕ್ಷಿ ವೀಕ್ಷಣೆಗೆ ಅನುಕೂಲಕರವಾಗಿರುತ್ತದೆ. ಈ ತಿಂಗಳುಗಳಲ್ಲಿ, ನೀವು ಬಣ್ಣದ ಕೊಕ್ಕರೆಗಳು ಗೂಡುಕಟ್ಟುವ ವೀಕ್ಷಿಸಬಹುದು ಮತ್ತು ಈ ಪ್ರದೇಶಕ್ಕೆ ಭೇಟಿ ನೀಡುವ ವಿವಿಧ ವಲಸೆ ಹಕ್ಕಿಗಳನ್ನು ನೋಡಬಹುದು.
ಮಂಡ್ಯದಿಂದ 35 ಕಿ.ಮೀ, ಬೆಂಗಳೂರಿನಿಂದ 88 ಕಿ.ಮೀ ದೂರ ಮತ್ತು ಮೈಸೂರಿನಿಂದ 76 ಕಿ.ಮೀ ದೂರದಲ್ಲಿ ಈ ತಾಣವಿದ್ದು, ಇದು ನಮ್ಮ ರಾಜ್ಯದ ಪ್ರಮುಖ ಪಕ್ಷಿಧಾಮಗಳಲ್ಲಿ ಒಂದಾಗಿದೆ. ಇಲ್ಲಿಗೆ ಬಸ್ಸಿನ ವ್ಯವಸ್ಥೆ ಕೂಡಾ ಇದೆ. ಜೊತೆಗೆ ಇಲ್ಲಿ ತಂಗುವವರಿಗೆ ಹೋಟೆಲ್ ರೆಸಾರ್ಟ್ ವ್ಯವಸ್ಥೆಗಳೂ ಇವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ