Jagannath Rath Yatra 2025: ಪುರಿ ಜಗನ್ನಾಥ ದೇವಸ್ಥಾನಕ್ಕೆ ಅವಿವಾಹಿತ ಜೋಡಿ ಏಕೆ ಭೇಟಿ ನೀಡಬಾರದು?
ಈ ವರ್ಷ ಜೂನ್ 26 ರಿಂದ ಪುರಿಯಲ್ಲಿ ಜಗನ್ನಾಥ ರಥಯಾತ್ರೆ ಆರಂಭವಾಗಲಿದೆ. ಈ 10 ದಿನಗಳ ಯಾತ್ರೆಯು ಅಪಾರ ಧಾರ್ಮಿಕ ಮಹತ್ವವನ್ನು ಹೊಂದಿದೆ. ಆದರೆ, ಅವಿವಾಹಿತ ಜೋಡಿಗಳಿಗೆ ದೇವಾಲಯ ಪ್ರವೇಶ ನಿಷೇಧವಿದೆ ಎಂಬುದು ನಿಗೂಢ ಸಂಗತಿ. ಈ ನಿಷೇಧದ ಹಿಂದಿನ ಪೌರಾಣಿಕ ಕಥೆ ಮತ್ತು ರಥಯಾತ್ರೆಯ ವಿವರಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಜೂನ್ 26 ರಿಂದ ಜಗನ್ನಾಥ ರಥಯಾತ್ರೆ ಆರಂಭವಾಗಲಿದೆ. ಈ ಯಾತ್ರೆಗೆ ಪುರಿಯಲ್ಲಿ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. 10 ದಿನಗಳ ಕಾಲ ನಡೆಯಲಿರುವ ಜಗನ್ನಾಥ ದೇವರ ರಥಯಾತ್ರೆಯಲ್ಲಿ ಭಾಗವಹಿಸಲು ಭಕ್ತರು ದೇಶದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಬರುತ್ತಾರೆ. ಜಗನ್ನಾಥ ರಥಯಾತ್ರೆಯಲ್ಲಿ ಭಾಗವಹಿಸುವುದರಿಂದ 100 ಯಾಗಗಳನ್ನು ಮಾಡಿದಷ್ಟು ಫಲಿತಾಂಶ ಸಿಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಜಗನ್ನಾಥ ಯಾತ್ರೆಯು ಆಷಾಢ ಮಾಸದ ಶುಕ್ಲ ಪಕ್ಷದ ಎರಡನೇ ದಿನಾಂಕದಂದು ಪ್ರಾರಂಭವಾಗುತ್ತದೆ. ಅದರಂತೆ, ಈ ವರ್ಷ ಜೂನ್ 26, 2025 ರಂದು ಮಧ್ಯಾಹ್ನ 1.25 ರಿಂದ ಪ್ರಾರಂಭವಾಗುತ್ತದೆ. ಈ ರಥಯಾತ್ರೆಯ ಸಮಯದಲ್ಲಿ, ಜಗನ್ನಾಥ ದೇವರು ತಮ್ಮ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರ ಅವರೊಂದಿಗೆ ರಥದಲ್ಲಿ ಪ್ರಯಾಣಿಸಿ ತಮ್ಮ ಚಿಕ್ಕಮ್ಮನ ಮನೆಯಾದ ಗುಂಡಿಚಾ ಮಂದಿರವನ್ನು ತಲುಪುತ್ತಾರೆ. 11 ನೇ ದಿನ, ಜಗನ್ನಾಥ ದೇವರು ತಮ್ಮ ಅಣ್ಣ ಮತ್ತು ಸಹೋದರಿಯೊಂದಿಗೆ ತಮ್ಮ ದೇವಸ್ಥಾನಕ್ಕೆ ಹಿಂತಿರುಗುತ್ತಾರೆ. ಅಂದರೆ ಜಗನ್ನಾಥ ಯಾತ್ರೆಯು ಜುಲೈ 5 ರಂದು ಮುಕ್ತಾಯವಾಗಲಿದೆ.
ಜಗನ್ನಾಥ ರಥಯಾತ್ರೆ ಎಷ್ಟು ಪ್ರಸಿದ್ಧವೋ, ಈ ಜಗನ್ನಾಥ ದೇವಾಲಯವೂ ಅಷ್ಟೇ ನಿಗೂಢವಾಗಿದೆ. ಪುರಿ ದೇವಾಲಯಕ್ಕೆ ಸಂಬಂಧಿಸಿದಂತೆ ಹಲವು ಬಗೆಹರಿಯದ ರಹಸ್ಯಗಳಿವೆ. ಇಲ್ಲಿಯವರೆಗೆ ಯಾರಿಗೂ ಅವುಗಳನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಜಗನ್ನಾಥ ದೇವಾಲಯದ ರಹಸ್ಯಗಳಲ್ಲಿ ಒಂದು ಅವಿವಾಹಿತ ದಂಪತಿಗಳು ದೇವಾಲಯಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಈ ನಿಯಮಕ್ಕೆ ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಅವಿವಾಹಿತ ಜೋಡಿ ಪುರಿ ಜಗನ್ನಾಥ ದೇವಸ್ಥಾನಕ್ಕೆ ಏಕೆ ಭೇಟಿ ನೀಡಬಾರದು?
ಅವಿವಾಹಿತ ಜೋಡಿ ಗಳನ್ನು ಜಗನ್ನಾಥ ದೇವಾಲಯಕ್ಕೆ ಬಿಡಬಾರದು ಎಂಬ ನಿಯಮದ ಹಿಂದೆ ಒಂದು ಪೌರಾಣಿಕ ಕಥೆಯಿದೆ. ಇದು ರಾಧೆಯ ಶಾಪಕ್ಕೆ ಸಂಬಂಧಿಸಿದೆ. ಒಂದು ದಂತಕಥೆಯ ಪ್ರಕಾರ, ಒಮ್ಮೆ ರಾಧೆ ಪುರಿ ಜಗನ್ನಾಥ ದೇವಸ್ಥಾನಕ್ಕೆ ಬಂದು ಶ್ರೀಕೃಷ್ಣನನ್ನು ಜಗನ್ನಾಥನ ರೂಪವನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದಳು. ರಾಧೆ ಪುರಿ ದೇವಸ್ಥಾನವನ್ನು ಪ್ರವೇಶಿಸಿದ ತಕ್ಷಣ, ಜಗನ್ನಾಥ ದೇವಸ್ಥಾನದ ಅರ್ಚಕರು ರಾಧೆಯನ್ನು ಒಳಗೆ ಬರದಂತೆ ತಡೆದರು. ರಾಧೆ ಪುರಿ ದೇವಸ್ಥಾನಕ್ಕೆ ಏಕೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಅರ್ಚಕರನ್ನು ಕೇಳಿದಾಗ, ಅರ್ಚಕರು, “ರಾಧಾ, ನೀನು ಶ್ರೀಕೃಷ್ಣನ ಪ್ರೇಮಿ ಮಾತ್ರ, ವಿವಾಹಿತ ಮಹಿಳೆಯಲ್ಲ” ಎಂದು ಹೇಳಿದರು.
ಇದನ್ನೂ ಓದಿ: ಈ ಪುರಾತನ ದೇವಾಲಯದಲ್ಲಿದೆ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುವ ಶಿವಲಿಂಗ!
ಇದರಿಂದ ಕೋಪಗೊಂಡ ರಾಧೆ ಜಗನ್ನಾಥ ದೇವಸ್ಥಾನವನ್ನು ಶಪಿಸಿದರು. ಜಗನ್ನಾಥ ದೇವಸ್ಥಾನಕ್ಕೆ ಪ್ರವೇಶಿಸಲು ಪ್ರಯತ್ನಿಸುವ ಯಾವುದೇ ಅವಿವಾಹಿತ ದಂಪತಿಗಳು ಜೀವನದಲ್ಲಿ ತಮ್ಮ ಪ್ರೀತಿಯನ್ನು ಕಳೆದುಕೊಳ್ಳಲಿ, ಒಂದಾಗದಂತಾಗಲಿ ಎಂದು ರಾಧೆ ಶಪಿಸಿದಳು. ಅಂದಿನಿಂದ, ಅವಿವಾಹಿತ ಜೋಡಿಗಳು ಪುರಿ ಜಗನ್ನಾಥ ದೇವಸ್ಥಾನಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:11 am, Thu, 12 June 25








