Mother’s Day 2022: ಪ್ರೀತಿ, ಆರೈಕೆ, ಸಹನೆಯ “ಅಮ್ಮ” ನನ್ನ ಜಗತ್ತು..

| Updated By: ಅಕ್ಷಯ್​ ಪಲ್ಲಮಜಲು​​

Updated on: May 08, 2022 | 8:00 AM

Mother’s Day 2022: ನನ್ನ ತಾಯಿ ನಿಭಾಯಿಸಿರುವ ಪಾತ್ರ ಹಲವಾರು ತಂದೆಗೆ ಮಡದಿಯಾಗಿ, ಹಿರಿಯರಿಗೆ ಸೊಸೆಯಾಗಿ, ಹಸಿದು ಬಂದವರಿಗೆ ಅನ್ನ ನೀಡಿದ ಅನ್ನಪೂರ್ಣೇಶ್ವರಿ, ಅನಾಥ ಮಕ್ಕಳಿಗೆ ತಾಯಿಯಾಗಿ ಜಗಮಗಿಸಿದವಳು ನನ್ನಮ್ಮ.

Mother’s Day 2022: ಪ್ರೀತಿ, ಆರೈಕೆ, ಸಹನೆಯ ಅಮ್ಮ ನನ್ನ ಜಗತ್ತು..
ಸಾಂದರ್ಭಿಕ ಚಿತ್ರ
Follow us on

ಅಮ್ಮ ಎಂಬ ಎರಡಕ್ಷರದಿ ಅಡಗಿದೆ ಆಕೆಯ ಪ್ರೀತಿ, ಆರೈಕೆ, ಸಾಹಸ, ಅಮ್ಮ ಸಹನೆಯ ಮೂರ್ತಿ, ಮಮತೆ ಪ್ರೀತಿ ವಾತ್ಸಲ್ಯ ತೋರುವ ಕರುಣಾಮಯಿ, ಮಕ್ಕಳ ಜೀವನ ಬೆಳಗುವ ದಿವ್ಯ ಜ್ಯೋತಿ. ಆಕೆ ಕೇವಲ ತಾಯಿಯಾಗದೆ ಪಾಠ ಹೇಳಿದ ಮೊದಲ ಗುರು, ಚಂದ ಮಾಮನ ತೋರಿಸಿ ಕೈ ತುತ್ತು ನೀಡಿದಾಕೆ, ಕೈ ಹಿಡಿದು ಅಕ್ಷರ ತಿದ್ದಿದಾಕೆ, ನನ್ನೊಡನೆ ಆಟವಾಡಿದ ಗೆಳತಿ, ಎಡವಿ ಬಿದ್ದಾಗ ನನ್ನ ನೋವ ತನ್ನದಾಗಿಸಿಕೊಂಡವಳು, ನನ್ನ ಕಣ್ಣಲಿ ನೀರು ಬಂದರೆ ತಾಯಿ ಕಣ್ಣಲ್ಲಿ ರಕ್ತದ ಓಕುಳಿಯೇ ಹರಿಯುವುದು, ಪ್ರತಿ ಹೆಜ್ಜೆಯಲ್ಲೂ ನನ್ನ ಜೊತೆಗೆ ಇದ್ದವಳು ನನ್ನಮ್ಮ. ನನ್ನ ತಾಯಿ ನಿಭಾಯಿಸಿರುವ ಪಾತ್ರ ಹಲವಾರು ತಂದೆಗೆ ಮಡದಿಯಾಗಿ, ಹಿರಿಯರಿಗೆ ಸೊಸೆಯಾಗಿ, ಹಸಿದು ಬಂದವರಿಗೆ ಅನ್ನ ನೀಡಿದ ಅನ್ನಪೂರ್ಣೇಶ್ವರಿ, ಅನಾಥ ಮಕ್ಕಳಿಗೆ ತಾಯಿಯಾಗಿ ಜಗಮಗಿಸಿದವಳು ನನ್ನಮ್ಮ. ನನಗೆ ನನ್ನವ್ವ ನೇ ಸ್ಫೂರ್ತಿ ಎಷ್ಟೇ ಕಷ್ಟವಿದ್ದರು ಸದಾ ನಗುತ ನಗಿಸುವ ಸುಂದರಿ, ಪ್ರತಿ ಸಲಾ ಎಡವಿ ಬಿದ್ದಾಗ ಧೈರ್ಯ ತುಂಬಿ ನನ್ನ ಹೆಜ್ಜೆಯನ್ನು ಹಿಂಬಾಲಿಸಿ ಬಂದವಳು. ಶಾಲೆಯಲ್ಲಿ ಶಿಕ್ಷಕರು ಹೇಳಿದ ಪಾಠಕ್ಕೆ ಉದಾಹರಣೆಯೊಂದಿಗೆ ವಿವರಿಸಿ ಅರ್ಥೈಸಿದಾಕೆ, ಪ್ರಪಂಚದ ಅರಿವೇ ಇಲ್ಲದ ಬಾಲ್ಯದಲ್ಲಿ ಬುದ್ದಿ ಹೇಳಿ, ತಿದ್ದಿದಾಕೆ, ಸೋತು, ಸುಸ್ತಾಗಿ ಕೂತಾಗ ಶಕ್ತಿ ನೀಡಿ ಹುರಿದುಂಬಿಸಿದವಳು,
ಅರ್ಥವೇ ಆಗದ ಜೀವನದ ಚಹರಿಯನ್ನು ಅರ್ಥ ಮಾಡಿಸಿದವಳು. ಪುಟ್ಟ ಪ್ರಪಂಚದಲ್ಲಿ ಪಟ್ಟದರಸಿಯಾಗಿ ಮೇರೆದವಳು ನನ್ನಮ್ಮ.

ಅಮ್ಮನ ಕೈ ರುಚಿಯ ವಾಸನೆ ಇಂದಿಗೂ ಎಂದೆಂದಿಗೂ ಮಾಸದು ಅವಳ ಕೈ ಅಡುಗೆಗಾಗಿ ಹಠ ಮಾಡಿದ ಆ ಬಾಲ್ಯವು ಎಷ್ಟು ಚಂದ, ರುಚಿ ರುಚಿಯಾದ ಅಡುಗೆ ಮಾಡುವ ಆಕೆಯ ಸಹನೆಗೆ ನಮ್ಮ ಸಲಾಮ. ಮಗನಿಗಾಗಿ ಬರದೆ ಇರುವ ಅಡುಗೆಯನ್ನ ಬೇರೆಯವರ ಹತ್ರಾನೋ ಅಥವಾ ಯೂಟ್ಯೂಬ್ ಅಲ್ಲೋ ನೋಡಿ ಮಾಡಿ ಉಣಸಿದವಳು, ಬಾಲ್ಯದಲ್ಲಿ ಊಟ ಮಾಡಲ್ಲ ಎಂದು ಹೇಳಿದಾಗ ಗುಮ್ಮ ಬರುವನು, ಪೋತರಾಜ ಬರುವನು ಎಂದವಳು, ತಿನ್ನದೆ ಇದ್ದಾಗ ಒಂದೊಂದು ತುತ್ತನ್ನು ಬೇರ್ಪಡಿಸಿ ಇದು ಅಣ್ಣ ನ ಪಾಲು, ಇನ್ನೊಂದು ಅಮ್ಮನ ಪಾಲು ಎಂದು ಕೊನೆಗೆ ಎಲ್ಲ ಅನ್ನವನ್ನು ನನ್ನ ಹೊಟ್ಟೆಗೆ ಹಾಕಿ ತಮ್ಮ ಹೊಟ್ಟೆಯ ಯೋಚನೆ ಮಾಡದೆ ಮಗನ ಮುಖವ ನೋಡಿ ಮಂದಹಾಸ ಬಿರಿದಾಕೆ.

ಅಮ್ಮ ನಮ್ಮ ಮನೆಯ ಹೆಡ್ ಮಾಸ್ಟರ್, ಹೆಡ್ ಮಾಸ್ಟರ್ ಆದರೂ ಕೆಲವು ಬಾರಿ ಶಿಕ್ಷಕಿಯಾಗುವಳು, ಕೆಲವು ಬಾರಿ ಕ್ಲರ್ಕ್, ಕೆಲವು ಸಲ ಪಿ ಟಿ ಮಾಸ್ಟರ್ ಆಗಿ ಎಲ್ಲಾ ಜವಾಬ್ದಾರಿ ಹೊತ್ತು ಸರಿಯಾಗಿ ನಿಭಾಯಿಸಿ ಬೇಶ್ ಅನಿಸಿಕೊಂಡವಳು, ಮನೆಗೆ ಮಹಾರಾಣಿಯಾದರು ಅಳುಗಳಷ್ಟೇ ದುಡಿಯುವಳು, ಮನೆಗೆ ಬಂದವರಿಗೆ ನಗುಮುಕದಿ ಸ್ವಾಗತಿಸಿಕೊಂಡು, ‘ಅತಿಥಿ ದೇವೋ ಭವ’ ಎನ್ನುವ ನುಡಿಯನ್ನು ಪಾಲಿಸುವ ಅಮ್ಮ ಅವರನ್ನು ದೇವರಂತೆ ಸತ್ಕರಿಸುವ ಗುಣ ಹೊಂದಿ ಸಹಕರಿಸುವ ಸಹನಾ ಮೂರ್ತಿ. ಅಕ್ಕ ಪಕ್ಕದ ಮನೆಯವರ ನೋವನ್ನ ತನ್ನದೇನೆಸಿಕೊಂಡು ಆ ನೋವಿಗೆ ಔಷಧಿ ಕಂಡು ಹಿಡಿದು ಓದದೇ ವೈದ್ಯಕೀ ಎನ್ನಸಿಕೊಂಡವಳು. ಆಕೆಯೇ ನನ್ನ ಮೊದಲ ಗೆಳತಿ ಅಮ್ಮಾ ನೀ ನನ್ನ ಜಗತ್ತು, ಉಸಿರ ಕೊನೆಯವರೆಗೂ ಪ್ರೀತಿಸುವವಳು ಅಮ್ಮ. ನನ್ನ ಅಮ್ಮಾ ನನ್ನ ಮೊದಲ ಆದರ್ಶ ಮೂರ್ತಿ, ಏಳುಬಿಳಿನ ಕಹಿ ಘಟನೆಗಳನ್ನು ತೊಳೆದು ಮುನ್ನಡೆಸಿದಾಕೆ ಅಮ್ಮಾ ನೀ ನನ್ನ ಜಗತ್ತು…..

ಲಕ್ಷ್ಮೀ, ಬಾಗಲಕೋಟೆ

ಅಮ್ಮಂದಿರ ಬಗ್ಗೆ ಅದ್ಭುತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ