ಆಕೆ ನಿಷ್ಕಲ್ಮಶ ಮನದವಳು. ಸದಾ ಕುಟುಂಬದ ಏಳಿಗೆಗೆ ತನ್ನ ಕನಸುಗಳನ್ನು ತ್ಯಾಗ ಮಾಡಿದವಳು. ಎಂದೂ ಎದುರುತ್ತರ ನೀಡದವಳು. ತನ್ನ ಆಸೆ ಆಕಾಂಕ್ಷೆಗಳನ್ನು ಮನದಲ್ಲೇ ಹುದುಗಿಟ್ಟು ನಮ್ಮ ನಗುವಿನಲ್ಲಿ ಅವಳ ಸಂತೋಷ ಕಂಡವಳು. ಆಕೆ ನನ್ನಮ್ಮ. ತಾಳ್ಮೆ ಮತ್ತು ಸಂಯಮದ ಕೈಗನ್ನಡಿ ನನ್ನ ಅಮ್ಮ. ನನ್ನ ಅಮ್ಮ ಯಾವತ್ತೂ ನನ್ನ ಮೇಲೆ ಸಿಡಿಮಿಡಿಗೊಂಡವಳಲ್ಲ ಹಾಗಂತ ನಾನೇನಾದರೂ ತಪ್ಪು ಮಾಡಿದರೆ ಸುಮ್ಮನೆ ಕೂತವಳೂ ಅಲ್ಲ. ಚಿಕ್ಕ ಚಿಕ್ಕ ವಿಷಯಗಳಿಗೂ ಅಮ್ಮನ ಜೊತೆ ಜಗಳವಾಡುವ ನನಗೆ ಅಮ್ಮ ಆಪ್ತಗೆಳತಿಯೂ ಹೌದು. ಅದೆಷ್ಟೋ ಬಾರಿ ಅಮ್ಮನಲ್ಲಿ ಕೇಳಿದ್ದಿದೆ ಅಮ್ಮಾ ನಿನಗೆ ಕೋಪಾನೇ ಬರಲ್ವ ಅಂತ! ತುಟಿಯಂಚಿನ ಮುಗುಳ್ನಗೆಯೇ ಈ ಪ್ರಶ್ನೆಗೆ ಅವಳ ಉತ್ತರ. ನನ್ನ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನಿಟ್ಟುಕೊಂಡರೂ ಆಕೆ ಎಂದೂ ಕೂಡ ನನ್ನ ಮೇಲೆ ಒತ್ತಡ ಹೇರಿದವಳಲ್ಲ, ಹಾಗಂತ ಸುಮ್ಮನೆ ಕೂತವಳೂ ಅಲ್ಲ. ಮುಗುಳ್ನಗುತ್ತಲೇ ಜೀವನದ ಪ್ರತಿ ಹಂತವನ್ನೂ ಅರ್ಥಮಾಡಿಸಿದವಳು.
ಅನೇಕ ಬಾರಿ ಅರ್ಥವಿಲ್ಲದ ನನ್ನ ಹರಟೆಗಳನ್ನು ಕುತೂಹಲದಿಂದ ಕೇಳಿ ನಕ್ಕು ಹುಸಿಗೋಪದಿಂದ ಬೆನ್ನಿಗೆ ಒಂದೇಟು ಹಾಕಿ ತನ್ನೆಲ್ಲಾ ಆಯಾಸವನ್ನು ಮರೆಯುವವಳು ನನ್ನ ಅಮ್ಮ. ಎದುರಿಗಿರುವಾಗ ಸಾಕಷ್ಟು ಬಾರಿ ಅಮ್ಮನೊಂದಿಗೆ ಜಗಳವಾಡುವ ನನಗೆ ಒಂದು ದಿನ ಅಮ್ಮ ಮನೆಯಲ್ಲಿಲ್ಲವೆಂದರೂ ದಿನವಿಡೀ ಮಂಕು ಕವಿದಂತೆ. ನನ್ನೆಲ್ಲಾ ನೋವುಗಳಿಗೆ ಹೆಗಲಾಗಿ ನನ್ನ ಸಾಧನೆಗಳಿಗೆ ಸ್ಫೂರ್ತಿಯಾಗಿ ಅದರಲ್ಲೇ ಖುಷಿಯನ್ನು ಕಾಣುವ ಅವಳ ಬಗ್ಗೆ ಎಷ್ಟೇ ಬರೆದರೂ ಕಮ್ಮಿಯೇ!
ಪ್ರತಿ ವರುಷ ಎರಡನೇ ಭಾನುವಾರ ಅಮ್ಮಂದಿರ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಮಕ್ಕಳು ತಮ್ಮ ಹೆತ್ತಾಕೆಗೆ ವಿವಿಧ ರೀತಿಯಲ್ಲಿ ಶುಭಕೋರುತ್ತಾರೆ. ಇದರಲ್ಲಿ ತಾಯಿಯ ತ್ಯಾಗ, ಪ್ರೀತಿ, ಮಮತೆ ಇವೆಲ್ಲವೂ ಒಂದು ಕಡೆಯಾದರೆ ತಾಯಿ ಇಲ್ಲದವರ ನೋವಿನ ಮಾತುಗಳು ಮತ್ತೊಂದೆಡೆ. ಪ್ರಾಚೀನ ಕಾಲದಲ್ಲಿ ಗ್ರೀಕ್ ಹಾಗೂ ರೋಮನ್ ನಾಗರಿಕರು ಮಾತೃದೇವತೆಗಳ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಕಾಲಕ್ರಮೇಣ ಈ ದಿನ ಮಾತೃದಿನವಾಗಿ ಪರಿವರ್ತನೆಗೊಂಡಿತು. ಅದೇನೇ ಇರಲಿ, ಇದೀಗ ಪ್ರತಿವರುಷ ಮೇ ತಿಂಗಳ ಎರಡನೇ ಭಾನುವಾರ ಆಚರಿಸಲ್ಪಡುತ್ತಾ ಬರುತ್ತಿರುವ ಅಮ್ಮಂದಿರ ದಿನ ಇಂದಿಗೆ ಮಾತ್ರ ಸೀಮಿತವಾಗದೆ ಪ್ರತಿದಿನ ಅಮ್ಮನ ಬಗೆಗಿನ ಪ್ರೀತಿ ಗೌರವ ಹೀಗೆ ಇರಲಿ.
ಇತ್ತೀಚಿನ ವರುಷಗಲ್ಲಿ ಗಮನಿಸಿದಾಗ ಅಮ್ಮ ಬದಲಾಗಿದ್ದಾಳಾ? ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತಿದೆ. ಹಿಂದೆ ಡಿಜಿಟಲ್ ಜಗತ್ತಿನ ಬಗ್ಗೆ ಅರಿವಿಲ್ಲದ ಮುಗ್ಧ ತಾಯಂದಿರು ಈಗ ಮಾಯವಾಗಿ ಮಕ್ಕಳು ಒಂದೆಡೆಯಾದರೆ ತಾಯಿ ಮತ್ತೊಂದೆಡೆ ಮೊಬೈಲ್ಗೆ ಮುಖ ಮಾಡಿ ಕೂರುವ ಪ್ರಮೇಯ ಬಂದಿರುವುದು ವಿಷಾದನೀಯ. ಅಮ್ಮ ಎಂದರೆ ಮಕ್ಕಳನ್ನು ಸಲಹುವುದು ಮಾತ್ರವಲ್ಲದೆ ಪೂರ್ತಿ ಕುಟುಂಬದ ಜವಾಬ್ದಾರಿ ನಿರ್ವಹಿಸುವುದು ಕಟುಂಬವನ್ನು ಸಲಹುವುದು ಕೂಡ ಆಕೆಯ ಕರ್ತವ್ಯ, ಇದು ಮಾತ್ರವಲ್ಲದೆ ಆಕೆಯನ್ನು ಸದಾ ಎತ್ತರದ ಸ್ಥಾನದಲ್ಲಿಡುತ್ತದೆ. ಈ ಎಲ್ಲಾ ಕಾರಣಗಳಿಂದ ಆಕೆಯ ಮನಸ್ಸಿಗೆ ಕಿಂಚಿತ್ತೂ ನೋವಾದರೂ ಅದು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಅಮ್ಮನಿಗಿರುವ ಶಕ್ತಿಯೇ ಅಂತಹುದು.
ಒಬ್ಬ ತಾಯಿಯು ತನ್ನ ಮಕ್ಕಳಿಗೆ ಮಾತ್ರ ಅಮ್ಮ ಆಗಿರದೆ ವೃದ್ಧಾಪ್ಯದಲ್ಲಿರುವ ತನ್ನ ಅತ್ತೆ ಮಾವ, ತಂದೆ ತಾಯಿಗೂ, ಸೋತ ಗಂಡನಿಗೂ ಮಿಡಿಯುವ ಮಾತೃ ಹೃದಯ ಅವಳದ್ದಾಗಿರುತ್ತದೆ. ಜೊತೆಗೆ ಎಂತಹ ಸಂಧರ್ಭಗಳಲ್ಲೂ ಮಕ್ಕಳ ರಕ್ಷಣೆಗೆ ಮುಂದೆ ನಿಲ್ಲುವವಳು ತಾಯಿ. ಹಾಗಾಗಿ ತಾಯಿಯ ಬಗೆಗೆ ಅದೆಷ್ಟೇ ಬರೆದರು ಮುಗಿಯದ ಅಧ್ಯಾಯವಾಗಿ ಉಳಿದುಬಿಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಪ್ರತಿಯೊಂದು ದಿನವೂ ಅಮ್ಮಂದಿರ ದಿನವೇ. ಆಕೆಯನ್ನು ಜೀವನ ಪರ್ಯಂತ ಸಂತೋಷವಾಗಿ ನೋಡಿಕೊಳ್ಳುವುದು ಮಗ ಅಥವಾ ಮಗಳ ಆಧ್ಯ ಕರ್ತವ್ಯವೂ ಹೌದು. ಏನು ಅರಿಯದ ವಯಸ್ಸಿನಲ್ಲಿ ಕೈ ಹಿಡಿದು ನಡೆಸಿದಾಕೆಯ ವೃಧ್ಯಾಪ್ಯದ ದಿನಗಳಲ್ಲಿ ಅಕೆಯನ್ನು ಕೈಬಿಡದೆ ನಾವು ಮಾತೃಹೃದಯಿಗಳಾಗಿ ಆಕೆಗೆ ಸಮಯ,ತಾಳ್ಮೆ,ಪ್ರೀತಿ, ಗೌರವ ಕೊಟ್ಟರೆ ಅದೇ ಅಮ್ಮಂದಿರ ದಿನದ ನಿಜವಾದ ಉಡುಗೊರೆ.
ಇನ್ನಷ್ಟು ಬ್ಲಾಗ್ ಮತ್ತು ಲೈಫ್ಸ್ಟೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.