AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mother’s Day 2022: ಅಮ್ಮ ನನ್ನ ಪಾಲಿನ ಸೂಪರ್ ಸ್ಟಾರ್

Mother’s Day 2022:  ದಿ ಮೋಸ್ಟ್ ಸ್ವೀಟೆಸ್ಟ್ ಅಮ್ಮ  ಸಿಹಿ ಅಂದ್ರೆ ತುಂಬಾ ಸಿಹಿ ಅಂತೇನಲ್ಲ. ಸ್ವಲ್ಪ ಖಾರ ಕೂಡ, ಒಂಥರಾ ರೆಬೆಲ್ ನಮ್ಮಮ್ಮ. ಯಾವ್ದು ಸರಿ ಯಾವ್ದು ತಪ್ಪು ಅನ್ನೋದು ಬಹುಷಃ ಅವರಿಗಿಂತ ಚೆನ್ನಾಗಿ ಮತ್ಯಾರು ಎಣಿಸೂಕೆ ಸಾಧ್ಯವೇ ಇಲ್ಲ.

Mother’s Day 2022: ಅಮ್ಮ ನನ್ನ ಪಾಲಿನ ಸೂಪರ್ ಸ್ಟಾರ್
ಸಾಂದರ್ಭಿಕ ಚಿತ್ರ
TV9 Web
| Updated By: shivaprasad.hs|

Updated on:May 08, 2022 | 7:49 AM

Share

ಅಮ್ಮಾ… ನನ್ನಿಂದೆ ನೆರಳಾಗಿ, ನನ್ನೆಲ್ಲಾ ಗೆಲುವಾಗಿ, ಕಣ್ಣಾಚೆ ಉಳಿದಂತ ಮೌನಾ!! ಜಗತ್ತಿನ ಅತ್ಯಂತ ಸುಂದರ ಸೃಷ್ಠಿ ಎಂದರೆ ಅದು ಅಮ್ಮ. ಅವಳ ನಿಸ್ವರ್ಥ ಪ್ರೀತಿಗೆ, ವಾತ್ಸಲ್ಯಕ್ಕೆ, ಮಮತೆಗೆ, ಬೆಲೆ ಕಟ್ಟಲು ಸಾಧ್ಯವೇ ಇಲ್ಲಾ. ಆಕೆಯ ತ್ಯಾಗಕ್ಕೆ, ತಾಳ್ಮೆಗೆ ಸರಿ ಸಾಟಿಯೇ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಅಮ್ಮ ಅಂದ್ರೆ ತಾಗ್ಯ, ಶಕ್ತಿ, ಹಾಗೇ ನಮಗೆ ಬೇಕಾದನ್ನು ಕೊಡುವ ದೇವತೆ. ನಿದ್ದೇಲಿ ಮಡಿಲಾಗಿ, ಮಳೆಯಲ್ಲಿ ಸೆರಗಾಗಿ, ಮಗುವನ್ನು ಜೋಪಾನ ಮಾಡೋ ಸಹನೆಯ ಪ್ರತೀಕ ಅಮ್ಮ. ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಅಪ್ಪಾನೆ ಫೇವರೇಟ್. ಆದ್ರೆ ಗಂಡುಮಕ್ಕಳು ಯಾವಾಗ್ಲೂ ಅಮ್ಮನ ಸೇರಗಿಡ್ಕೊಂಡೇ ಓಡಾಡುತ್ತಾರೆ. ನಮ್ಮನೆಯಲ್ಲಿ ನಾವಿಬ್ರು ಹೆಣ್ಣು ಮಕ್ಕಳೇ ಆಗಿರುವುದರಿಂದ ಪಪ್ಪಾ ಎಷ್ಟೇ ಫೇವರಿಟ್ ಆಗಿದ್ರೂ ನಮ್ಮೆಲ್ಲಾ ಕೆಲಸಗಳಿಗೂ ಅಪ್ಪನಿಂದ ಗ್ರೀನ್ ಸಿಗ್ನಲ್ ಕೊಡ್ಸೋದೆ ಅಮ್ಮ.

ದಿ ಮೋಸ್ಟ್ ಸ್ವೀಟೆಸ್ಟ್ ಅಮ್ಮ  ಸಿಹಿ ಅಂದ್ರೆ ತುಂಬಾ ಸಿಹಿ ಅಂತೇನಲ್ಲ. ಸ್ವಲ್ಪ ಖಾರ ಕೂಡ, ಒಂಥರಾ ರೆಬೆಲ್ ನಮ್ಮಮ್ಮ. ಯಾವ್ದು ಸರಿ ಯಾವ್ದು ತಪ್ಪು ಅನ್ನೋದು ಬಹುಷಃ ಅವರಿಗಿಂತ ಚೆನ್ನಾಗಿ ಮತ್ಯಾರು ಎಣಿಸೂಕೆ ಸಾಧ್ಯವೇ ಇಲ್ಲ. ಮನೆಯನ್ನ ಹಾಗೂ ಮನೆಯವರನ್ನು ಅಚ್ಚುಕಟ್ಟಾಗಿ ನಿಭಾಯಿಸೋದ್ರಲ್ಲಿ ಪಿ.ಹೆಚ್.ಡಿ  ಮಾಡಿದ್ದಾರೆ. ಅಪ್ಪ ಕಾಲೇಜಿನಲ್ಲಿ ಲೆಕ್ಚರರ್ ಆದ್ರೆ ಮನೆಯಲ್ಲಿ ಅಮ್ಮಾನೇ ಪ್ರಿನ್ಸಿಪಾಲ್. ಅದಕ್ಕೆ ನಾನ್ ಅವ್ರ‍್ನ ಹೋಮ್ ಮಿನಿಸ್ಟರ್ ಅಂತ ಕರೀತೀನಿ.

ಚಿಕ್ಕ ವಯಸ್ಸಿನಿಂದ ಇಲ್ಲಿಯವರೆಗೂ ನನಗಾಗಲಿ, ತಂಗಿಗಾಗಲಿ ಯಾವುದೇ ಕೊರತೆ ಬಾರದಂತೆ, ಯಾವುದಕ್ಕೂ ಕಮ್ಮಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತವಳು. ತಾನು ಊಟ ಮಾಡದಿದ್ದರೂ ನನಗೆ ಹೊಟ್ಟೆ ತುಂಬಾ ಉಣಿಸಿದವಳು , ಅಪ್ಪನಿಗೆ ಎಷ್ಟೇ ಕಷ್ಟ ಆದ್ರೂ, ಎಲ್ಲರಂತೆ ನನ್ನ ಮಗಳು ಒಳ್ಳೆ ಶಾಲೆಯಲ್ಲಿ ಕಲಿಯಬೇಕು ಅನ್ನೋ ಸಲುವಾಗಿ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಸೇರಿಸಲು ಹಠ ಹಿಡಿದವಳು, ಶಾಲೆಯ ವಾರ್ಷಿಕೋತ್ಸವ ಸಮಾರಂಭಕ್ಕೆ ಆಕೆಯ ಸಾಸಿವೆ ಡಬ್ಬಿಯಿಂದ ಹಣ ತೆಗೆದು ಹೊಸ ಬಟ್ಟೆ ಕೊಡಿಸಿದವಳು, ಸ್ಕೂಲ್ ಟ್ರಿಪ್ ಕಳಿಸಲು ಅಪ್ಪನನ್ನು ಒಪ್ಪಿಸುತ್ತಿದ್ದವಳು, ಹುಟ್ಟುಹಬ್ಬಕ್ಕೆ ಸ್ನೇಹಿತರೊಡನೆ ಹೋಟೆಲ್ ಗೆ ಹೋಗಲು ಕದ್ದು ಮುಚ್ಚಿ ಹಣ ನೀಡುತ್ತಿದ್ದವಳು, ಕಡಿಮೆ ಅಂಕ ಬಂದಾಗ ಅಪ್ಪನಿಗೆ ಗೊತ್ತಾಗದಂತೆ ತಾನೇ ಸಹಿ ಹಾಕಿಕೊಟ್ಟು ಮುಂದಿನ ಸಲ ಚೆನ್ನಾಗಿ ಮಾಡು ಎಂದು ಧೈರ್ಯ ತುಂಬುತ್ತಿದ್ದವಳು, ಪೋಷಕರ ಸಭೆಗಳಿಗೆ ತಪ್ಪದೇ ಹಾಜರ್ ಹಾಕುತ್ತಿದ್ದವಳು, ತಪ್ಪು ಮಾಡಿದಾಗ ಗದರುತ್ತಾ, ಎರಡೇಟು ಹೊಡೆಯುತ್ತ, ಮುನಿಸಿಕೊಂಡಾಗ ಪ್ರೀತಿಯಿಂದ ಕೈ ತುತ್ತು ನೀಡುತ್ತಿದ್ದ ಸ್ವರ ಬಡಿತದ ಸಾರಥಿ ನನ್ನಮ್ಮ.

ನಾನು ಕಾಲೇಜ್ ಮೆಟ್ಟಿಲು ಹತ್ತುತ್ತಿದಂತೆ, ಗೊತ್ತಿಲ್ಲದೇ ನನ್ನ ಗೆಳತಿ ಆದವಳು. ಪ್ರತಿನಿತ್ಯ ಬೆಳಗ್ಗೆ ಬೇಗ ಏಳಿಸುವುದರಿಂದ ಹಿಡಿದು, ತಿಂಡಿ ತಿನಿಸಿ, ಬಾಕ್ಸ್ ರೆಡಿ ಮಾಡಿ, ಗಾಡಿ ಕೀ ಹುಡುಕಿಕೊಟ್ಟು, ನಾನು ಮನೆಯಿಂದ ಹೊರೋಡೋ ಮುನ್ನ ಆಕೆಯೇ ಮೊದಲು ಬಂದು ಗೇಟ್ ತೆಗೆದು, ಗಾಡಿ ತೆಗೆಯಲು ಸಹಾಯ ಮಾಡುವವರೆಗೂ ನನ್ನ ಸೇವೆ ಮಾಡುತ್ತಿದ್ದಳು . ಇನ್ನೇನು ಹೊರಟಳು ಎಂದು ಆಕೆ ನಿಟ್ಟುಸಿರು ಬಿಡುವಷ್ಟರಲ್ಲಿ ಜೋರಾಗಿ ಅಮ್ಮಾ ನನ್ನ ಐಡಿ ಕಾರ್ಡ್ ಎಲ್ಲಿ? ಅಂತ ಕೂಗುತ್ತಿದ್ದೆ , ತಕ್ಷಣ ಮನೆಯೊಳಗಿ ಓಡಿ, ಹುಡುಕಿ, ನಾನಿದ್ದಲ್ಲಿಗೆ ತಂದುಕೊಡುತ್ತಿದ್ದ ನನ್ನ ಬದುಕಿನ ನಾಯಕಿ ಅವಳು.

ನನ್ನೆಲ್ಲಾ ಸಾಧನೆಗೂ ಸ್ಪೂರ್ತಿ ನನ್ನಮ್ಮ. ಎಲ್ಲಾ ಕ್ಷೇತ್ರದಲ್ಲೂ ನನ್ನ ಮಗಳು ಸೈ ಅನ್ನಿಸ್ಕೊಬೇಕು ಅಂತ ಡ್ಯಾನ್ಸ್, ಸಂಗೀತಾ, ಚಿತ್ರಕಲೆ, ಹೀಗೆ ನಾನಾ ಬಗೆಯ ತರಬೇತಿ ಕೊಡಿಸಿದವಳು. ನಿಸ್ವರ್ಥದ ಭಾವಗಳು ಅವಳಲ್ಲಿ ಸ್ವಾಭಾವಿಕವಾಗಿಯೇ ಇತ್ತು. ನನ್ನನ್ನು ಡಾಕ್ಟರ್ ಮಾಡಬೇಕು ಅನ್ನೋ ಕನಸನ್ನು ಹೊತ್ತಿದ್ದಳು. ಆದರೆ ನನ್ನ ಆಯ್ಕೆ ಪತ್ರಿಕೋದ್ಯಮ ಆಗಿತ್ತು. ಮೊದ ಮೊದಲು ಒಪ್ಪದ ಅವಳು ಕೊನೆಗೆ ನಿನ್ನಾಸೆಯಂತೆ ಆಗಲಿ ಎಂದು ಒಪ್ಪಿಗೆ ಸೂಚಿಸಿ ಒಲ್ಲದ ಮನಸಲ್ಲೇ ಅಪ್ಪನನ್ನೂ ಒಪ್ಪಿಸಿದಳು. ಹಾಗಾಗಿ ಯಾವಾಗ್ಲೂ ಅಮ್ಮನಿಗೆ ಹೇಳ್ತಾರ‍್ತೀನಿ ನಾನು ಡಾಕ್ಟರ್ ಆಗ್ಲಿಲ್ಲಾ ಅಂತ ಚಿಂತೆ ಮಾಡ್ಬೇಡಿ, ಡಾಕ್ಟರ್ ಅಳಿಯನನ್ನೇ ಹುಡುಕಿ ತರೋಣ ಅಂತ. ಇತ್ತೀಚೆಗೆಂತು ಆಕೆ ಜೀವನದ ಪಾಠದ ಜೊತೆಗೆ ಜೀವನದ ಗೆಳೆಯನ ಬಗ್ಗೆ ಮಾತುಡುವಷ್ಟು ಸಲುಗೆ ಕೊಟ್ಟಿದ್ದಾಳೆ.

ಎಂದಿಗೂ ನನ್ನ ಸಂತೋಷವನ್ನೇ ಬಯಸುವ ನನ್ನ ಅಮ್ಮ ನನ್ನ ಪಾಲಿನ ಸೂಪರ್ ಸ್ಟಾರ್ ಈಗ ಸದ್ಯ ಉನ್ನತ ವ್ಯಾಸಂಗಕ್ಕಾಗಿ ಮನೆಯಿಂದ ದೂರಯಿರುವ ನನಗೆ ಆಕೆಯ ಬೆಲೆ ಮತ್ತಷ್ಟು ತಿಳಿದಿದೆ. ಆಗಾಗ ನೆನಪಿಗೆ ಬಂದು ಕಣ್ಣಂಚಲ್ಲಿ ನೀರು ತರಿಸುತ್ತಾಳೆ. ಪರೀಕ್ಷೆ ಮುಗಿಸಿ  ಅಮ್ಮನ ಮಡಿಲು ಸೇರಲು ಹಪ ಹಪಿಸುತ್ತಿದ್ದೇನೆ…. ಅಮ್ಮನ ಬಗ್ಗೆ ಎಷ್ಟೇ ಹೇಳಿದ್ರೂ ಅದು ಕಡಿಮೆ ಅನಿಸುತ್ತದೆ. ನಿಮಗೆ ಒಪ್ಪಿಗೆಯಾದರೆ ನಿಮ್ಮ ಅಂಗೈ ಜೀವಿಯಾಗಿ ನಿಮ್ಮ ಬಳಿ ಕೊನೆ ಉಸಿರು ಇರುವವರೆಗೆ ಬದುಕುವ ಆಸೆ ನನ್ನದು. ನನ್ನ ಬಾಳ ಕನ್ನಡಿಯಾದ ನನ್ನ ಮುದ್ದಮ್ಮನಿಗೆ ಅಮ್ಮಂದಿರ ದಿನದ ಶುಭಾಶಯಗಳು!

ತೇಜಶ್ವಿನಿ ಕಾಂತರಾಜ್, ಬೆಂಗಳೂರು

Published On - 6:00 am, Sun, 8 May 22