Mother’s Day 2022: ಬದುಕು ಕಲಿಸಿದ ಗೆಳತಿ ನನ್ನ ಅಮ್ಮ…
Mother’s Day 2022: ನನ್ನ ಏಳಿಗೆಗಾಗಿ ಅವಳು ಕಣ್ಣೀರಿಟ್ಟ ಅದೆಷ್ಟೋ ಕರಾಳ ರಾತ್ರಿಗಳನ್ನು ನಾ ಕಾಣೆ. ನನಗಾಗಿ ಆ ಕಣ್ಣೀರನ್ನು, ಅವಮಾನ, ಮನಸ್ತಾಪಗಳನ್ನು ಸಹಿಸಿಕೊಂಡು, ಒಂದೊಳ್ಳೆ ವ್ಯಕ್ತಿಯಾಗಿ ನನ್ನನ್ನು ಬೆಳೆಸುತ್ತೇನೆ ಎಂದು ನುಡಿದ ಅವಳ ಧೈರ್ಯ ನನಗೆ ಸದಾ ಸ್ಪೂರ್ತಿ.
ಬಹುಶಃ ನನ್ನ ಜೀವನದಲ್ಲಿ ನಾನು ಅತೀ ಇಷ್ಟ ಪಡುವ ಜೊತೆಗೆ ಅತೀ ಕಷ್ಟ ಕೊಡುವ ಒಬ್ಬ ವ್ಯಕ್ತಿ ಎಂದರೆ ಅದು ನನ್ನ ತಾಯಿ. ತಾಯಿ ಎನ್ನುವುದಕ್ಕಿಂತ ಒಂದೊಳ್ಳೆ ಗೆಳತಿ ಎನ್ನಬಹುದು. ನನ್ನ ಬದುಕಿನಲ್ಲಿ ಸದಾ ಮಹತ್ವದ ಪಾತ್ರ ವಹಿಸಿ, ಬದುಕಲು ಕಲಿಸಿದವಳು ನನ್ನ ತಾಯಿ. ನಾಣ್ಯ ಗಾತ್ರದ ಹಣೆಬೊಟ್ಟು, ಸದಾ ಲಕ್ಷಣವಾಗಿ ಸೀರೆಯನ್ನುಟ್ಟು ತನಗನ್ನಿಸಿದ್ದನ್ನು ಅತ್ಯಂತ ನೇರವಾಗಿ ಹೇಳುವ ಧಿಮಂತ ವ್ಯಕ್ತಿತ್ವ ಆಕೆಯದ್ದು. ನನ್ನ ಪ್ರತಿಯೊಂದು ಹೊಸತರಲ್ಲಿಯೂ ನನಗಿಂತ ಉತ್ಸಾಹಿಯಾಗಿ ಇಂದಿಗೂ ಪ್ರೋತ್ಸಾಹಿಸುತ್ತಿರುವ ಅಮ್ಮನ ಬಗ್ಗೆ ಬರೆಯಲು ಹೋದರೆ ನಿಜಕ್ಕೂ ಮುಗಿಸುವುದು ಅಸಾಧ್ಯ. ನನ್ನ ಬಾಲ್ಯದಿಂದ ಇಂದಿನ ವರೆಗಿನ ಪ್ರತಿಯೊಂದು ವಿಚಾರದಲ್ಲಿಯೂ ಒಬ್ಬ ತಾಯಿಯಾಗಿ ಮಾತ್ರ ನಡೆದುಕೊಳ್ಳದೇ ನನ್ನ ಒಳ ಮನಸ್ಸಿನಲ್ಲಿ ಮೂಡುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವ ದೇವತೆ ಎಂದರೆ ಅತಿಶಯೋಕ್ತಿ ಇಲ್ಲ.
ಇವತ್ತಿಗೂ ನನಗೆ ವಿಚಿತ್ರ ಎನಿಸುವುದೆಂದರೆ ಅದು ಹೇಗೆ ಆಕೆಗೆ ನನ್ನ ಮನಸ್ಸಿನಲ್ಲಿ ಮೂಡುವ ಪ್ರಶ್ನೆಯೂ ತಿಳಿಯುತ್ತದೆ ಎಂದು. ಬಹುಶಃ ನನ್ನ ನೋಡುವ ಮೊದಲೇ, ನಾನು ಯಾರೆಂದು ತಿಳಿಯುವ ಮೊದಲೇ ತನ್ನ ಗರ್ಭದಲ್ಲಿ ನನಗೆ ಆಶ್ರಯ ನೀಡಿದವಳಿಗೆ ಮನಸ್ಸಿನ ಮಾತು ತಿಳಿದುಕೊಳ್ಳುವುದು ಯಾವ ಲೆಕ್ಕ ಅಲ್ಲವೇ? ನಾನು ಚಿಕ್ಕವಳಿರುವಾಗಿನಿಂದಲೇ ನನ್ನ ಎಲ್ಲಾ ಆಸೆಗಳಿಗೆ ತನ್ನ ಸುಖವನ್ನು ತ್ಯಾಗ ಮಾಡಿದವಳು ಆಕೆ. ತನ್ನ ಮಗಳು ಯಾವುದರಲ್ಲಿಯೂ ಹಿಂದುಳಿಯಬಾರದೆಂದು ಇರೋ-ಬರೋ ಎಲ್ಲಾ ಕ್ಲಾಸಿಗೂ ನನ್ನನ್ನು ಸೇರಿಸಿ ನನ್ನ ಬೆಳವಣಿಗೆಯನ್ನು ನೋಡಿ ಅತೀ ಖುಷಿ ಪಟ್ಟ ಜೀವ ಅವಳು.
ನನ್ನ ಏಳಿಗೆಗಾಗಿ ಅವಳು ಕಣ್ಣೀರಿಟ್ಟ ಅದೆಷ್ಟೋ ಕರಾಳ ರಾತ್ರಿಗಳನ್ನು ನಾ ಕಾಣೆ. ನನಗಾಗಿ ಆ ಕಣ್ಣೀರನ್ನು, ಅವಮಾನ, ಮನಸ್ತಾಪಗಳನ್ನು ಸಹಿಸಿಕೊಂಡು, ಒಂದೊಳ್ಳೆ ವ್ಯಕ್ತಿಯಾಗಿ ನನ್ನನ್ನು ಬೆಳೆಸುತ್ತೇನೆ ಎಂದು ನುಡಿದ ಅವಳ ಧೈರ್ಯ ನನಗೆ ಸದಾ ಸ್ಪೂರ್ತಿ. ಒಬ್ಬ ಹುಡುಗಿಗೆ ನೀ ಕೊಡುವ ಸ್ವಾತಂತ್ರ್ಯ. ಮುಂದೆ ನಿನಗೇ ಮುಳುವಾಗುತ್ತದೆ ಎಂದು ಹೇಳುವವರ ಎದುರು ನಾ ಕೊಟ್ಟ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳದಂತೆ ಬೆಳೆಸಿದ್ದೇನೆ ಎಂದು ಹೆಮ್ಮೆ ಇಂದ ಹೇಳುವ ಗಟ್ಟಿಗಿತ್ತಿ ಅವಳು.
ನಾನೆಂತಹ ಕಷ್ಟದ ಪರಿಸ್ಥಿತಿಯಲ್ಲಿರಲಿ ಅಥವಾ ಗೊಂದಲ ದಿಂದ ಏನು ಮಾಡುವುದೆಂದು ತಿಳಿಯದೇ ಇರುವ ಸಂದರ್ಭದಲ್ಲಿ ಕೇವಲ ಒಂದು ಸಣ್ಣ ನೀತಿ ಕಥೆಯನ್ನು ಹೇಳಿ ನನ್ನ ಎಲ್ಲಾ ಗೊಂದಲವನ್ನು ಪರಿಹಾರ ಮಾಡುವ ಜಾದೂಗಾರ್ತಿ. ಅವಳು ಕಲಿಸಿದ ಬದುಕಿನ ಮೌಲ್ಯ, ಧೈರ್ಯವೇ ಎಲ್ಲದಕ್ಕೂ ಪರಿಹಾರ ಎನ್ನುವ ಅವಳ ಮಾತು, ಸ್ವತಂತ್ರವಾಗಿ ಬದುಕಿ ತೋರಿಸಬೇಕು ಎನ್ನುವ ಅವಳ ನಿಲುವು ನನ್ನ ಜೀವನದಲ್ಲಿ ಎಂದಿಗೂ ಸಾಧನೆ ಎನ್ನುವ ಏಣಿಯ ಮೊದಲ ಮೂರು ಮೆಟ್ಟಿಲುಗಳಾಗಿರುತ್ತದೆ. ತಪ್ಪು ಮಾಡಿದ್ದಲಿ ಶಿಕ್ಷಿಸಿ, ಸರಿ ದಾರಿಯ ತೋರಿಸಿ, ಪ್ರತಿಯೊಂದು ಹಂತದಲ್ಲಿಯೂ ನನ್ನ ಎಲ್ಲಾ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತಿರುವ ಅವಳಿಗೆ ತಾಯಂದಿರ ದಿನದ ಶುಭಾಶಯಗಳು.
ಭಾರತಿ ಹೆಗಡೆ
ಶಿರಸಿ
ಅಮ್ಮ ಎಂದರೆ ಅಕ್ಷರದಲ್ಲಿ ವಿವರಿಸಲು ಸಾಧ್ಯವಿಲ್ಲ ಶಕ್ತಿ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ