Mother’s Day 2022: ತಾಯಿಯ ನಿಸ್ವಾರ್ಥ ಪ್ರೀತಿ ಎಂದಿಗೂ ಶಾಶ್ವತ
Mother’s Day 2022: ನನ್ನ ಶಕ್ತಿಯೇ ನನ್ನ ಅಮ್ಮ. ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಎದುರಾದರು ನನ್ನ ಸಾಮರ್ಥ್ಯದ ಮೇಲೆ ಭರವಸೆ ಇಡಲು ಇದೇ ಶಕ್ತಿ ಕಾರಣ. ಅನಾರೋಗ್ಯ ದೈಹಿಕವಾಗಿರಲಿ, ಮಾನಸಿಕವಾಗಿರಲಿ ಸಂಪೂರ್ಣ ಗುಣಮುಖನಾಗಲು ಇದೇ ಶಕ್ತಿ ಮದ್ದು.
ತಾಯಿ ಎಂಬ ಪದ ಸಕಲ ಜೀವಿಗಳ ಭಾಷೆಗಳಲ್ಲಿ ತ್ಯಾಗ, ಪ್ರೀತಿ, ಕಾಳಜಿ, ನಿಸ್ವಾರ್ಥ ಎಂದೇ ಅರ್ಥ ನೀಡುತ್ತದೆ. ಆದರೇ ಮಾನವ ಜಾತಿಯಲ್ಲಿ ಮಾತ್ರ ಈ ಎಲ್ಲಾ ಅಂಶಗಳನ್ನು ಜೀವನಪರ್ಯಂತ ಅನುಭವಿಸಲು ಸಾಧ್ಯ. ಉದಾಹರಣೆಗೆ ಮನೆಯಲ್ಲಿ ಸಾಕಿದ ಬೆಕ್ಕು, ನಾಯಿಗಳು ಸಹಾ ಮರಿಗಳಿಗೆ ಜನ್ಮ ನೀಡಿದಾಗ ಅತ್ಯಂತ ಪ್ರೀತಿ, ವಾತ್ಸಲ್ಯದಿಂದ ಮಕ್ಕಳನ್ನು ಪೋಷಿಸುತ್ತವೆ. ಆದರೇ ಮಕ್ಕಳಿಗೆ ಬದುಕುವ ಸಾಮರ್ಥ್ಯ ಬಂದ ಕೂಡಲೇ ತನ್ನ ಹಾರೈಕೆಯ ಬಂಧನದಿಂದ ಮುಕ್ತವಾಗಿಸುತ್ತವೆ. ಮತ್ತೊಂದು ಬಾರಿ ಜನ್ಮ ನೀಡಿದಾಗ ಮೊದಲ ಮಕ್ಕಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತವೆ. ಇದು ಪ್ರಾಣಿಗಳ ತಾಯಿತನದ ನೀತಿ, ನಿಯಮಗಳೆಂದುಕೊಳ್ಳಬಹುದು. ಆದೇ ಮನುಷ್ಯರಲ್ಲಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಮೇಲೆ ತನ್ನ ಮಗು ಸಮರ್ಥನಾಗಲಿ, ಅಸಮರ್ಥನಾಗಲಿ, ಬಡವ, ಶ್ರೀಮಂತ, ಅಂಗವಿಕಲ ಏನೇ ಆಗಿದ್ದರೂ ಜೀವನ ಪೂರ್ತಿ ಅವಳ ಪ್ರೀತಿ, ವಾತ್ಸಲ್ಯ ಸ್ಥಿರವಾಗಿರುತ್ತದೆ. ಇದೆಲ್ಲಾ ತಾಯಿ ಎಂಬ ಶಕ್ತಿಯ ಪವಾಡವಾದರೆ ನನ್ನ ಶಕ್ತಿಯ ಗುಣಗಳು ಒಂದಷ್ಟಿವೆ.
ನನ್ನ ಶಕ್ತಿಯೇ ನನ್ನ ಅಮ್ಮ. ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಎದುರಾದರು ನನ್ನ ಸಾಮರ್ಥ್ಯದ ಮೇಲೆ ಭರವಸೆ ಇಡಲು ಇದೇ ಶಕ್ತಿ ಕಾರಣ. ಅನಾರೋಗ್ಯ ದೈಹಿಕವಾಗಿರಲಿ, ಮಾನಸಿಕವಾಗಿರಲಿ ಸಂಪೂರ್ಣ ಗುಣಮುಖನಾಗಲು ಇದೇ ಶಕ್ತಿ ಮದ್ದು. ತಾಯಿಯ ಮಹತ್ವ ದೂರವಿದ್ದಾಗ ಹೆಚ್ಚು ತಿಳಿಯುವುದು ಎಂಬ ಮಾತು ನಿಜ. ಮನೆಯಲ್ಲಿದ್ದಾಗ ಊಟದಲ್ಲಿ ದೋಷ ಹುಡುಕುತ್ತಿದ್ದ ನನಗೆ ಐದು ವರ್ಷದಿಂದ ದೂರದ ಊರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕಾರಣ ಅವಳ ಅಡುಗೆಯ ಕೈ ರುಚಿ ಎಲ್ಲೂ ಸಿಗಲಿಲ್ಲ.
ತನ್ನ ಹಸಿವು, ದಣಿವು ಮರೆತು ಬಯಸಿದನ್ನ ರುಚಿ ರುಚಿಯಾಗಿ ಮಾಡಿ ತಿನ್ನಿಸುವ ನಿಸ್ವಾರ್ಥಿ ಅವಳು. ನಾನು ಎಷ್ಟೇ ದೊಡ್ಡವನಾದರೂ ಅವಳು ತೋರಿಸುವ ಪ್ರೀತಿ, ಕಾಳಜಿಯಲ್ಲಿ ಏರಿಳಿತವಾಗಿಲ್ಲ. ಅವಳ ಶುಭ ಹಾರೈಕೆ ಇಲ್ಲದೆ ನನ್ನ ಯಾವ ಕೆಲಸವೂ ಪೂರ್ಣವಾಗದು ಎಂಬ ನಂಬಿಕೆ ನನ್ನದು. ತನಗಾಗಿ ಹಣ ಖರ್ಚು ಮಾಡಿದ್ದು ತೀರಾ ಕಡಿಮೆ, ಕೂಡಿಟ್ಟದೆಲ್ಲ ಮಕ್ಕಳಿಗೆ ಅನ್ನುವ ಗುಣ ಅವಳದು. ಮಕ್ಕಳ ಸಂತೋಷ, ಗೆಲುವೇ ಅವಳ ಜೀವನದ ಗುರಿ. ನನ್ನ ತಪ್ಪಿನಿಂದ ಎಷ್ಟೇ ನೋವಾದರೂ, ಸಿಟ್ಟಾದರೂ ಒಂದೂ ಬಾರಿಯೂ ಶಿಕ್ಷೆ ಕೊಟ್ಟಿದ್ದು ನಾ ಕಾಣೆ. ಪದಗಳಲ್ಲಿ ಅವಳ ಮಹತ್ವವನ್ನು ಎಷ್ಟೇ ಬಣ್ಣಸಿದರೂ ಸಾಲದು.
ಪ್ರತಿಯೊಬ್ಬರ ಜೀವನದಲ್ಲಿ ತಾಯಿಯ ಪಾತ್ರ ಮಹತ್ವವಾದದ್ದು. ತಮ್ಮ ತಮ್ಮ ತಾಯಿಗೆ ಗೌರವ ಕೊಡುವವರು ಅದೇ ರೀತಿ ಮತ್ತೊಬ್ಬರ ತಾಯಿಗೂ ಅಷ್ಟೇ ಗೌರವ ಕೊಟ್ಟಲ್ಲಿ ತಾಯಿ ಎಂಬ ಶಕ್ತಿಗೆ ನಾವು ಕೊಡುವ ಕಾಣಿಕೆ. ಕೋಪ, ತಾಳ್ಮೆ ಕಳೆದುಕೊಂಡ ಮಾತ್ರಕ್ಕೆ ತಾಯಿ ಎಂಬ ಶಕ್ತಿಯನ್ನು ಅವಾಚ್ಯ ಪದಗಳಿಗೆ ಆಹಾರವಾಗಿಸುವುದು ಎಷ್ಟು ಮಾತ್ರ ಸರಿ ಎಂಬುದು ಯೋಚಿಸಬೇಕಾದ ಸಂಗತಿ.
ಹರಿನಾಥ್ ವಿ ಎ
ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
ಅಮ್ಮಂದಿರ ಬಗ್ಗೆ ಅದ್ಭುತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ