Mothers Day: ಇಬ್ಬರು ಮಕ್ಕಳೊಂದಿಗೆ ಉದ್ಯೋಗ ಸಂಭಾಳಿಸುವ ಶಿಕ್ಷಕಿಯೊಬ್ಬರ ಬದುಕಿನ ಪುಟಗಳಿವು

ತಾಯ್ತನವು ನನಗೆ ಸಾಕಷ್ಟು ತಾಳ್ಮೆಯನ್ನು ಕಲಿಸಿದೆ. ಇದು ನನ್ನ ಬದುಕು, ಇದನ್ನೇನು ದೊಡ್ಡ ಸಾಧನೆ ಎಂದು ನಾನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ಕತೆ ಓದಿದ ಯಾರಿಗಾದರೂ ಪ್ರೇರಣೆ ಸಿಗಬಹುದು ಎನ್ನುವ ಕಾರಣಕ್ಕೆ ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.

Mothers Day: ಇಬ್ಬರು ಮಕ್ಕಳೊಂದಿಗೆ ಉದ್ಯೋಗ ಸಂಭಾಳಿಸುವ ಶಿಕ್ಷಕಿಯೊಬ್ಬರ ಬದುಕಿನ ಪುಟಗಳಿವು
ತೊಡೆಯ ಮೇಲಿನ ಮಗುವಿಗೆ ಹಾಲು ಕುಡಿಸುತ್ತಲೇ ಪಾಠ ಮಾಡುತ್ತಿರುವ ಶಿಕ್ಷಕಿ ಶಿಲ್ಪಾ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 08, 2022 | 8:46 AM

ತಾಯ್ತನ ಸುಂದರ ಕನಸಿನಂತೆ ಕಂಡರೂ, ಅದರಿಂದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಮಗುವಿನ ಲಾಲನೆ ಪಾಲನೆಯ ಜೊತೆಗೆ ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ಇದು ತನ್ನ ಕರುಳಕುಡಿಗಳ ಜೊತೆ ಇತರ ನೂರಾರು ಮಕ್ಕಳಿಗೆ ಜವಾಬ್ದಾರರಾಗಿರುವ ತಾಯಿಯ ಕಥೆ. ಟಿವಿ9 ಕನ್ನಡ ಡಿಜಿಟಲ್ ಓದುಗರೊಂದಿಗೆ ಈ ಕಥೆ ಹಂಚಿಕೊಂಡಿರುವ ಶಿಲ್ಪಾ ಪಿ ಅವರು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ವೃತ್ತಿಯಲ್ಲಿರುವವರ ಜವಾಬ್ದಾರಿಗಳು ಇತರರಿಗಿಂತಲೂ ಭಿನ್ನ. ಏಕೆಂದರೆ ಅವರ ಮಗು ಮಾತ್ರವಲ್ಲದೆ ಇತರ ನೂರಾರು ಮಕ್ಕಳು ಸಹ ಸದಾ ಅವರ ಕಡೆಗೆ ನೋಡುತ್ತಾ ಅವರನ್ನು ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾರೆ. ಮನೆಯಲ್ಲಿ ಮಕ್ಕಳನ್ನು ಸಂಭಾಳಿಸಲು ಯಾರೂ ಇಲ್ಲದ ಸಂದರ್ಭದಲ್ಲಿ ವೃತ್ತಿನಿರತ ತಾಯಿ ಎದುರಿಸುವ ಸವಾಲುಗಳು ಹಲವು. ಅಮ್ಮಂದಿರ ದಿನದ ಪ್ರಯುಕ್ತ ಇಂಥ ಒಬ್ಬ ತಾಯಿಯ ಮಾತುಗಳ ಸಂಗ್ರಹ ರೂಪ ಇಲ್ಲಿದೆ.

ಜೀವನಶೈಲಿಗೆ ಸಂಬಂಧಿಸಿದ ಮತ್ತಷ್ಟು ಬರಹಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

***

ಜೀವನವು ಪ್ರತಿಯೊಬ್ಬರಿಗೆ ವಿಭಿನ್ನ ಪಾಠಗಳನ್ನು ಕಲಿಸುತ್ತದೆ. ಕೆಲವರಿಗೆ ಜೀವನವೆನ್ನುವುದು ಆರಾಮದಾಯಕ ಪಯಣವಾದರೆ, ಮಿಕ್ಕವರಿಗೆ ಅದು ಗುಂಡಿಗಳಿರುವ ರಸ್ತೆಯಲ್ಲಿನ ಸಂಕಷ್ಟದ ಪಯಣ. ನನ್ನ ಇಲ್ಲಿಯತನಕದ ಪಯಣ ಅನೇಕ ಪಾಠಗಳನ್ನು ಕಲಿಸಿದೆ. ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಮಧ್ಯಮ ವರ್ಗದ ಕುಟುಂಬದಿಂದ ಬಂದವಳು. ಬಿಕಾಂ ಓದಿದ ನಂತರ ಕೆಲಸಮಯ ಖಾಸಗಿ ಶಾಲೆಯಲ್ಲಿ ಕೆಲಸ ಮಾಡಿದೆ. 2015ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾನು, 2016ರಲ್ಲಿ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದೆ. ಪಾಠ ಮಾಡಿದ ಅನುಭವಿದ್ದರೂ, ಮಾನ್ಯತೆ ಪಡೆದ ಶಿಕ್ಷಕಿಯಾಗಲು ನಾನು ಬಯಸಿದ್ದೆ. ಹೀಗಾಗಿ ನನ್ನ ಮಗುವಿಗೆ ಕೇವಲ ಒಂದೂವರೆ ತಿಂಗಳಿರುವಾಗ, ಬಿಎಡ್‌ ತರಗತಿಗಳಿಗೆ ಸೇರಿಕೊಂಡೆ.

ಎರಡು ವರ್ಷಗಳ ವಿರಾಮದ ನಂತರ ವೃತ್ತಿಜೀವನವನ್ನು ಪ್ರಾರಂಭಿಸುವುದು ಅಷ್ಟು ಸುಲಭದ ವಿಷಯವಾಗಿರಲಿಲ್ಲ. ಸಂದರ್ಶನಗಳಿಗೆ ಹೋದಾಗ, ನನ್ನಮುಂಚಿನ ಅನುಭವವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ನನ್ನನ್ನು ಫ್ರೆಶರ್‌ ಎಂದು ಪರಿಗಣಿಸಿದ್ದರು. ಈ ರೀತಿ ಮಾಡುವುದರಿಂದ ನನ್ನ ಅನುಭವಕ್ಕೆ ಅರ್ಹವಾದ ಸಂಭಾವನೆ ಹಾಗೂ ಸವಲತ್ತುಗಳಿಂದ ನಾನು ವಂಚಿತಳಾಗುತ್ತಿದ್ದೆ. ನನ್ನ ಪತಿ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ದುಡಿಯುತ್ತಿದ್ದರು. ಕುಟುಂಬವನ್ನು ನೋಡಿಕೊಳ್ಳಲು ನಾನು ಕೂಡ ದುಡಿಯುವ ಅನಿವಾರ್ಯತೆ ಇತ್ತು. ಜೊತೆಗೆ ಇಡೀ ಕುಟುಂಬದ ಆರ್ಥಿಕ ಜವಾಬ್ದಾರಿಯನ್ನು ನನ್ನ ಪತಿಗೆ ಮಾತ್ರ ಹೊರೆಸಲು ನನಗೆ ಇಷ್ಟವಿರಲಿಲ್ಲ, ಅದು ಕಷ್ಟಸಾಧ್ಯ ಎನ್ನುವುದು ನನಗೆ ತಿಳಿದಿತ್ತು. ನನ್ನ ತವರು ಸದಾ ಬೆಂಬಲವಾಗಿ ನಿಂತಿದ್ದರೂ, ನಮ್ಮ ಮಕ್ಕಳ ಜವಾಬ್ದಾರಿಯನ್ನು ಅವರ ಮೇಲೆ ಹೇರುವುದು ಸರಿಯೆನಿಸಲಿಲ್ಲ.

2019ರಲ್ಲಿ, ಆರ್ಕಿಡ್ಸ್ – ದಿ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ನನಗೆ ಕೆಲಸ ಸಿಕ್ಕಿತು. ಬಿಟಿಎಂ ಶಾಖೆಯಲ್ಲಿ ಕೆಲಸ ಪ್ರಾರಂಭಿಸಿದ ನಾನು ಹೋಗಿ ಬರಲು ಅನುಕೂಲವೆನಿಸಿದ ಬನ್ನೇರುಘಟ್ಟ ಶಾಖೆಗೆ ವರ್ಗಾವಣೆ ಪಡೆದುಕೊಂಡೆ. 2021ರ ಮಾರ್ಚ್‌ನಲ್ಲಿ ನಾನು ಗಂಡು ಮಗುವಿಗೆ ಜನ್ಮ ನೀಡಿದೆ. 6 ತಿಂಗಳು ಹೆರಿಗೆ ರಜೆಯನ್ನು ಪೂರ್ಣಗೊಳಿಸಿದ ನಂತರ, ಜನವರಿ 2022ಕ್ಕೆ ಮತ್ತೆ ಶಾಲೆಗೆ ಸೇರಿದೆ. ಆದರೆ ಶಿಕ್ಷಕಿಯಾಗಿ ಹಾಗೂ ಇಬ್ಬರು ಮಕ್ಕಳ ತಾಯಿಯಾಗಿ ನನ್ನ ಕರ್ತವ್ಯಗಳನ್ನು ನಿಭಾಯಿಸುವುದು ತುಂಬಾ ದೊಡ್ಡ ಸವಾಲಾಗಿತ್ತು. ಹೀಗಾಗಿ ಆನ್​ಲೈನ್‌ ತರಗತಿಗಳು ಇರುವಾಗ ನನ್ನ ಮಕ್ಕಳನ್ನು ಶಾಲೆಗೆ ಕರೆತಂದು ತರಗತಿಗಳನ್ನು ನಿಭಾಯಿಸುತ್ತಿದ್ದೆ. ಇದರಿಂದ ಬೇರೆ ಯಾರಿಗೂ ಅವಲಂಬಿತವಾಗದೇ ನನ್ನ ಕರ್ತವ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿತ್ತು.

ಆರ್ಕಿಡ್ ಆಡಳಿತ ಸಂಸ್ಥೆಯೊಂದಿಗೆ ಸಂದರ್ಶನದ ಸಮಯದಲ್ಲಿ, ನಾನು ಎದುರಿಸಿದ ಸವಾಲುಗಳನ್ನು ಹಂಚಿಕೊಂಡೆ. ಅವರು ತಕ್ಷಣವೇ ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ನನ್ನ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವಾಗ ಅಗತ್ಯವಿರುವ ಸಕಲ ಬೆಂಬಲವನ್ನು ಒದಗಿಸುವುದಾಗಿ ಭರವಸೆ ನೀಡಿದರು. ಹೀಗೆ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭವಾಯಿತು. ನನ್ನ ಮಗಳನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು, ಮಗನನ್ನು ತೊಡೆಯ ಮೇಲೆ ಕೂಡಿಸಿಕೊಂಡು ಆನ್​ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೆ. ತರಗತಿಗಳ ಜೊತೆಗೆ ನನ್ನ ಮಕ್ಕಳಿಬ್ಬರನ್ನೂ ನಿರ್ವಹಿಸುವುದು ನನಗೆ ಪ್ರಯಾಸದ ಕೆಲಸವಾಗಿದೆ. ಆದರೆ ಜೀವನದಲ್ಲಿ ಸ್ವಲ್ಪವಾದರೂ ಸವಾಲುಗಳು ಇರದಿದ್ದರೆ ಹೇಗೆ? ಪ್ರತಿದಿನ ಮುಂಜಾನೆ 4.30ಕ್ಕೆ ನನ್ನ ದಿನಚರಿ ಪ್ರಾರಂಭವಾಗುತ್ತದೆ. ಮುಂಜಾನೆಯ ಉಪಹಾರ, ಮಧ್ಯಾಹ್ನದ ಊಟ ತಯಾರಿಸಿ ಇಬ್ಬರು ಮಕ್ಕಳನ್ನು ಹೊರಡಿಸಿ ಶಾಲೆಗೆ ಕರೆತರುತ್ತೇನೆ. ಆರಂಭದಲ್ಲಿ ಇವೆಲ್ಲವನ್ನು ನಾನು ನಿಭಾಯಿಸಬಲ್ಲೆ ಎಂದು ನನಗೆ ನಂಬಿಕೆ ಇರಲಿಲ್ಲ. ಆದರೆ ತಾಯಿಯಾಗಿ ಮತ್ತು ಶಿಕ್ಷಕಿಯಾಗಿ ನನ್ನ ಪಾತ್ರಗಳನ್ನು ಸಾಧಿಸಲು ನನ್ನನ್ನು ಪ್ರೋತ್ಸಾಹಿಸಿದವರು ಪ್ರಾಂಶುಪಾಲೆ ಅಪರ್ಣಾ ಶರ್ಮಾ ಮತ್ತು ನನ್ನ ಸಹೋದ್ಯೋಗಿಗಳು. ಅವರ ಬೆಂಬಲ ಹಾಗೂ ಕಾಳಜಿಯಿಂದ ನಾನು ಯಾವುದೇ ಚಿಂತೆ ಇಲ್ಲದೇ ನನ್ನ ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗುತ್ತಿದೆ.

ಇದೀಗ ನನ್ನ ಮಗನನ್ನು ನಾಲ್ಕು ತಿಂಗಳಿಂದ ಶಾಲೆಗೆ ಕರೆತರುತ್ತಿದ್ದೇನೆ, ಎರಡೂ ಕೆಲಸಗಳನ್ನು ಏಕಕಾಲದಲ್ಲಿ ಮಾಡುವುದನನು ಕರಗತ ಮಾಡಿಕೊಂಡಿದ್ದೇನೆ. ನನ್ನ ಸಹೋದ್ಯೋಗಿಗಳು ಬಿಡುವಿನ ವೇಳೆಯಲ್ಲಿ ನನ್ನ ಮಗನನ್ನು ನೋಡಿಕೊಳ್ಳುತ್ತಾರೆ. ನಾನು ತರಗತಿಗಳಲ್ಲಿ ನಿರಳಾಗಿರುವಾಗ ನನ್ನ ಮಗನಿಗೆ ಹಾಲುಣಿಸಿ ಮಲಗಿಸುತ್ತಾರೆ. ಇಂತಹ ಸಹಕಾರ ಮನೋಭಾವದವರೊಂದಿಗೆ ಕೆಲಸ ಮಾಡುತ್ತಿರುವ ಬಗ್ಗೆ ನನಗೆ ಖುಷಿ ಇದೆ, ಜೊತೆಗೆ ಶಿಕ್ಷಕಿಯಾಗಿ ನಾನು ಪೂರ್ಣಪ್ರಮಾಣದಲ್ಲಿ ತೊಡಗಿಕೊಳ್ಳಲು ಸಹಾಯ ಮಾಡುತ್ತಿದೆ.

ಇಂದು, ನಾನು ನನ್ನ ಮಕ್ಕಳನ್ನು ಯಶಸ್ವಿಯಾಗಿ ನಿಭಾಯಿಸಲು ಸಮರ್ಥಳಾಗಿದ್ದೇನೆ. ಜೊತೆಗೆ ನನ್ನ ಪತಿಗೆ ಆರ್ಥಿಕವಾಗಿ ಬೆಂಬಲವನ್ನು ನೀಡುತ್ತಿದ್ದೇನೆ ಎನ್ನುವ ವಿಚಾರದಲ್ಲಿ ಹೆಮ್ಮೆಪಡುತ್ತೇನೆ. ಇದು ನನ್ನ ಬದುಕು, ಇದನ್ನೇನು ದೊಡ್ಡ ಸಾಧನೆ ಎಂದು ನಾನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ಕತೆ ಓದಿದ ಯಾರಿಗಾದರೂ ಪ್ರೇರಣೆ ಸಿಗಬಹುದು ಎನ್ನುವ ಕಾರಣಕ್ಕೆ ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ. ಆದರೆ ಇಷ್ಟು ಮಾತ್ರ ನಿಜ. ನಮ್ಮ ಮುಂದೆ ಯಾವ ಅಡೆತಡೆಗಳು ಇದ್ದರೂ, ನಾವು ದೃಢಸಂಕಲ್ಪದೊಂದಿಗೆ ಮುನ್ನುಗ್ಗಿದರೆ ನಮಗೆ ಪೂರಕ ವಾತಾವರಣ, ಸಹಕಾರ ಸಿಗುತ್ತದೆ. ಆದರೆ ತಾಳ್ಮೆ ಇರಬೇಕಷ್ಟೇ.

ತಾಯ್ತನವು ನನಗೆ ಸಾಕಷ್ಟು ತಾಳ್ಮೆಯನ್ನು ಕಲಿಸಿದೆ. ನನ್ನ ವಿದ್ಯಾರ್ಥಿಗಳ ಪ್ರೀತಿ ಮತ್ತು ಗೌರವವು ನನಗೆ ಭರವಸೆ ಮತ್ತು ಸಂತೋಷವನ್ನು ನೀಡಿದೆ. ಇದನ್ನು ನಾನು ಸದಾ ಕಾಲ ನೆನಪಿನಲ್ಲಿ ಇಡುತ್ತೇನೆ.

ಬರಹ: ಉಮಾಶಂಕರ ಶರ್ಮಾ

ಮಕ್ಕಳೊಂದಿಗೆ ಶಿಕ್ಷಕಿಯ ಕಾರ್ಯವೈಖರಿ ತೋರಿಸುವ ವಿಡಿಯೊ ಇಲ್ಲಿದೆ…

ಇದನ್ನೂ ಓದಿ: Mother’s Day 2022: ಅಮ್ಮ ಎಂದರೆ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲದ ಶಕ್ತಿ

ಇದನ್ನೂ ಓದಿ: Mother’s Day 2022: ಅವಳು ಕೇವಲ ತಾಯಿಯಲ್ಲ ಭುವಿಯೊಳಗಿದ್ದ ದೇವತೆ

Published On - 7:32 am, Sun, 8 May 22