
ಬೆಳಕಿನ ಹಬ್ಬ ದೀಪಾವಳಿ ಹಿಂದೂಗಳ ಅತಿ ದೊಡ್ಡ ಹಾಗೂ ವಿಶೇಷ ಹಬ್ಬವಾಗಿದೆ. ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟದರ ಮೇಲೆ ಒಳ್ಳೆಯದರ ಜಯ ಹಾಗೂ ಹೊಸ ಬೆಳಕು, ಭರವಸೆ, ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿರುವ ಬೆಳಕಿನ ಹಬ್ಬವನ್ನು ಐದು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಐದು ದಿನಗಳ ಹಬ್ಬಗಳಲ್ಲಿ ನರಕ ಚತುರ್ದಶಿ (Narak Chaturdashi) ಸಹ ಒಂದು. ಪ್ರತಿವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ನರಕ ಚತುರ್ದಶಿ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಕರ್ನಾಟಕ ಸೇರಿದಂತೆ ದೇಶದ ಕೆಲವೊಂದು ಭಾಗಗಳಲ್ಲಿ ಈ ಹಬ್ಬದ ದಿನ ಮುಂಜಾನೆ ಬೇಗ ಎದ್ದು ಅಭ್ಯಂಗ ಸ್ನಾನ ಮಾಡುವ ಸಂಪ್ರದಾಯವಿದೆ. ಈ ಸಂಪ್ರದಾಯದ ಹಿನ್ನೆಲೆ, ಮಹತ್ವ ಹಾಗೂ ಅಭ್ಯಂಗ ಸ್ನಾನ ಅಂದರೆ ಎಣ್ಣೆ ಸ್ನಾನ ಮಾಡುವುದರ ವೈಜ್ಞಾನಿಕ ಮಹತ್ವದ ಬಗ್ಗೆ ತಿಳಿಯಿರಿ.
ಈ ಬಾರಿ ಅಕ್ಟೋಬರ್ 20, ಸೋಮವಾರದಂದು ನರಕ ಚತುರ್ದಶಿ ಹಬ್ಬವನ್ನು ಆಚರಿಸಲಾಗುತ್ತಿದೆ.
ಚತುರ್ದಶಿ ತಿಥಿ ಆರಂಭ: ಅಕ್ಟೋಬರ್ 19, ಮಧ್ಯಾಹ್ನ 1:51
ಚತುರ್ದಶಿ ತಿಥಿ ಮುಕ್ತಾಯ: ಅಕ್ಟೋಬರ್ 20, ಮಧ್ಯಾಹ್ನ 3:44
ಅಭ್ಯಂಗ ಸ್ನಾನದ ಶುಭ ಮುಹೂರ್ತ: ಅಕ್ಟೋಬರ್ 20, ಮುಂಜಾನೆ 5:19 ರಿಂದ ಬೆಳಗ್ಗೆ 7:12 ರವರೆಗೆ (ಅಭ್ಯಂಗ ಸ್ನಾನವನ್ನು ಸೂರ್ಯೋದಯಕ್ಕೂ ಮುನ್ನವೇ ಮಾಡಿದರೆ ಶ್ರೇಷ್ಠ)
ನರಕ ಚತುರ್ದಶಿ ಹಬ್ಬ ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯದ ಸಂಕೇತವಾದ್ದರಿಂದ ಈ ದಿನ ಮುಂಜಾನೇ ಬೇಗ ಎದ್ದು ಎಣ್ಣೆ ಸ್ನಾನ ಮಾಡಿದರೆ ಪವಿತ್ರ ಗಂಗಾ ಸ್ನಾನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ. ಇದಲ್ಲದೆ ಅಭ್ಯಂಗ ಸ್ನಾನ ಮನುಷ್ಯನ ಅಹಂಕಾರ, ಕೋಪ, ನಕಾರಾತ್ಮಕ ಆಲೋಚನೆಗಳನ್ನು ಶುದ್ಧೀಕರಣ ಮಾಡಿ ಹೊಸ ಭರವಸೆಯೊಂದಿಗೆ ದೇಹ ಮತ್ತು ಮನಸ್ಸಿನ ಶುದ್ಧತೆಯನ್ನು ಸೂಚಿಸುತ್ತದೆ. ಹಾಗಾಗಿ ಜನ ದೇಹ ಮತ್ತು ಮನಸ್ಸನ್ನು ಶುದ್ಧೀಕರಣಗೊಳಿಸಲು ಈ ದಿನ ಮುಂಜಾನೆ ಬೇಗ ಎದ್ದು ಶುಭ ಮುಹೂರ್ತದಲ್ಲಿ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಸಂಪೂರ್ಣ ದೇಹಕ್ಕೆ ಹಚ್ಚಿ ಬಿಸಿ ನೀರಿನಿಂದ ಸ್ನಾನ ಮಾಡುತ್ತಾರೆ.
ಅಭ್ಯಂಗ ಸ್ನಾನದ ಹಿನ್ನೆಲೆಯ ಬಗ್ಗೆ ನೋಡುವುದಾದರೆ, ಪೌರಾಣಿಕ ನಂಬಿಕೆ, ಕಥೆ ಪ್ರಕಾರ, ಬ್ರಹ್ಮನಿಂದ ವರ ಪಡೆದು ನನಗ್ಯಾರು ತೊಂದರೆ ಕೊಡಲು ಸಾಧ್ಯವೇ ಇಲ್ಲವೆಂದು ಮದದಿಂದ ಮೆರೆಯುತ್ತಿದ್ದ ನರಕಾಸುರ ದೇವತೆಗಳಿಗೆ ತೊಂದರೆ ಕೊಡುತ್ತಿದ್ದನು. ಅಷ್ಟೇ ಅಲ್ಲದೆ 16,100 ಗೋಪಿಕಾ ಸ್ತ್ರೀಯರನ್ನು ಬಂಧನದಲ್ಲಿಟ್ಟು ಅವರಿಗೆ ಅತೀವ ಕಿರುಕುಳ ಕೊಡುತ್ತಿದ್ದನು. ಇವನ ಅಟ್ಟಹಾಸ ಮಿತಿ ಮೀರಿದ ಸಂದರ್ಭದಲ್ಲಿ ಗೋಪಿಕಾ ಸ್ತ್ರೀಯರೆಲ್ಲರೂ ಶ್ರೀಕೃಷ್ಣನನ್ನು ಪ್ರಾರ್ಥಿಸಿದಾಗ ಹಾಗೂ ರಕ್ಷಣೆಗಾಗಿ ದೇವತೆಗಳು ಕೃಷ್ಣನ ಮೊರೆ ಹೋದಾಗ, ಶ್ರೀ ಕೃಷ್ಣನು ಮಹಿಳೆಯ ಕೈಯಲ್ಲಿ ಸಾಯುವಂತೆ ಶಾಪಗ್ರಸ್ತನಾದ ನರಕಾಸುರನನ್ನು ಸತ್ಯಭಾಮೆಯ ಮುಖಾಂತರ ಅಶ್ವಯುಜ ಮಾಸದ ಕೃಷ್ಣಪಕ್ಷದಂದು ಸಂಹಾರ ಮಾಡಿದನು. ಈ ಸಮಯದಲ್ಲಿ ತನ್ನ ಮೇಲೆ ಚೆಲ್ಲಿದ ನರಕಾಸುರನ ರಕ್ತವನ್ನು ತೊಡೆದು ಹಾಕಲು ಶ್ರೀಕೃಷ್ಣ ಎಣ್ಣೆ ಸ್ನಾನವನ್ನು ಮಾಡುತ್ತಾನೆ. ಇದೇ ಕಾರಣಕ್ಕೆ ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯದ ಸಂಕೇತವಾಗಿ ನರಕ ಚತುರ್ದಶಿಯ ದಿನ ಎಣ್ಣೆ ಸ್ನಾನ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದೆ.
ಇದನ್ನೂ ಓದಿ: ದೀಪಾವಳಿ ಶಾಪಿಂಗ್ ಮಾಡುವಾಗ ನೀವು ಯಾವ ವಸ್ತುಗಳನ್ನು ಖರೀದಿ ಮಾಡೋದು ಬೆಸ್ಟ್ ಗೊತ್ತಾ?
ನರಕ ಚತುರ್ದಶಿಯ ದಿನದಂದು ಮಾಡುವ ಸಾಂಪ್ರದಾಯಿಕ ಅಭ್ಯಂಗ ಸ್ನಾನವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ