ಗಣಿತ ಎಂದರೆ ಹೆಚ್ಚಿನವರಿಗೆ ಕಬ್ಬಿಣದ ಕಡಲೆಯಾಗಿದ್ದು, ಹೀಗಾಗಿ ಈ ವಿಷಯದ ಬಗ್ಗೆ ಆಸಕ್ತಿ ತೋರಿಸುವವರು ಕಡಿಮೆ ಎನ್ನಬಹುದು. ಆದರೆ ಸರಿಯಾಗಿ ಗಮನಿಸಿದಾಗ ಈ ಗಣಿತ ಕಲಿಯುವುದು ಮೋಜಿನ ಸಂಗತಿಯಾಗಿದ್ದು, ಗಣಿತ ಸೂತ್ರ, ಲೆಕ್ಕವನ್ನು ಬಿಡಿಸುವ ವಿಧಾನವು ಬಹಳ ಆಸಕ್ತಿದಾಯಕವಾಗಿದೆ. ಈ ಗಣಿತವೆನ್ನುವು ಶಾಲೆ ಕಾಲೇಜು ದಿನಗಳಲ್ಲಿ ಮಾತ್ರ ಸೀಮಿತವಾಗಿರದೇ, ಬದುಕಿಗೂ ಕೂಡ ಲೆಕ್ಕಾಚಾರ ಎನ್ನುವುದು ಬಹುಮುಖ್ಯ. ಹೀಗಾಗಿ ಗಣಿತಕ್ಕೂ ದೈನಂದಿನ ಜೀವನಕ್ಕೂ ಬಹಳಷ್ಟು ನಂಟಿದೆ. ಗಣಿತದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಶ್ರೀನಿವಾಸ ರಾಮಾನುಜನ್ ರವರು ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತು ಸಾಧನೆಗಳನ್ನು ನೆನಪಿಸಿಕೊಳ್ಳುವ ದಿನವೇ ಈ ರಾಷ್ಟ್ರೀಯ ಗಣಿತ ದಿನವಾಗಿದೆ.
ಪ್ರತಿ ವರ್ಷ ಡಿಸೆಂಬರ್ 22 ರಂದು ಭಾರತದ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಗಣಿತ ದಿನ’ ಎಂದು ಆಚರಿಸಲಾಗುತ್ತಿದೆ. 2012 ರಲ್ಲಿ ಆಗಿನ ಪ್ರಧಾನ ಮಂತ್ರಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವಾಗಿ ಆಚರಿಸಲು ಕರೆಕೊಟ್ಟರು. ಹೀಗಾಗಿ ಅಂದಿನಿಂದ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಗಣಿತದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ರಾಷ್ಟ್ರೀಯ ಗಣಿತ ದಿನದ ಉದ್ದೇಶವಾಗಿದೆ. ಅದಲ್ಲದೇ, ರಾಷ್ಟ್ರದ ಯುವ ಪೀಳಿಗೆಗೆ ಗಣಿತ ಕ್ಷೇತ್ರಕ್ಕೆ ಕೊಡುಗೆ ನೀಡಿದ ಭಾರತದ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನರ್ ಅವರ ಕೊಡುಗೆಗಳನ್ನು ತಿಳಿಸುವುದು ಹಾಗೂ ಯುವ ಪೀಳಿಗೆಯಲ್ಲಿ ಗಣಿತವನ್ನು ಕಲಿಯಲು ಪ್ರೇರೇಪಿಸಲು ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಶ್ರೀನಿವಾಸ ರಾಮಾನುಜನರ್ ರವರ ಕೊಡುಗೆಗಳನ್ನು ನೆನಪಿಸಿಕೊಳ್ಳುವ ಮೂಲಕ ದೇಶದಾದ್ಯಂತ ಶಾಲಾಕಾಲೇಜುಗಳು, ಶಿಕ್ಷಣ ಸಂಸ್ಥೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: Tavel Tips: ಹೊಸ ವರ್ಷವನ್ನು ವಿದೇಶದಲ್ಲಿ ಆಚರಿಸಲು ಬಯಸುವಿರಾ?; ಬಜೆಟ್ ಸ್ನೇಹಿ ದೇಶಗಳ ಪಟ್ಟಿ ಇಲ್ಲಿದೆ
ಭಾರತದ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನರು ಗಣಿತಶಾಸ್ತ್ರದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಬಡತನ ಹಾಗೂ ಜವಾಬ್ದಾರಿಗಳಿದ್ದರೂ ಇವರಿಗಿದ್ದ ಗಣಿತದ ಮೇಲಿನ ಪ್ರೀತಿಯೂ ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಲು ಕಾರಣವಾಯಿತು. ಹೀಗಾಗಿ ಶ್ರೀನಿವಾಸ ರಾಮಾನುಜನರನ್ನು ಅನಂತವನ್ನೂ ಅರಿತ ಮನುಷ್ಯ ಎಂದು ಕರೆಯಲಾಗುತ್ತಿತ್ತು. ಅದಲ್ಲದೇ, ಪ್ರತಿಭೆಯನ್ನು ಗಣಿತಜ್ಞರು ಕ್ರಮವಾಗಿ 18 ಮತ್ತು 19ನೇ ಶತಮಾನಗಳ ಯೂಲರ್ ಮತ್ತು ಜಾಕೋಬಿಗೆ ಸಮನಾಗಿ ಪರಿಗಣಿಸಿದ್ದು, ಸಂಖ್ಯೆ ಸಿದ್ಧಾಂತದಲ್ಲಿ ಸಾಕಷ್ಟು ಕೆಲಸವನ್ನು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅದರೊಂದಿಗೆ ಪಾರ್ಟಿಷನ್ ಫಂಕ್ಷನ್ನಲ್ಲಿ ಹೆಚ್ಚಿನ ಅಧ್ಯಯನ ನಡೆಸುವುದರೊಂದಿಗೆ, ಮುಂದುವರಿದ ಭಿನ್ನರಾಶಿಗಳ ಜ್ಞಾನದಿಂದಲೇ ಗುರುತಿಸಲ್ಪಟ್ಟಿದ್ದರು. ರೀಮನ್ ಸರಣಿಗಳು, ಎಲಿಪ್ಟಿಕ್ ಇಂಟಿಗ್ರಲ್ಸ್, ಹೈಪರ್ಜಿಯೊಮೆಟ್ರಿಕ್ ಸರಣಿಗಳು ಮತ್ತು ಜೀಟಾ ಕ್ರಿಯೆಯ ಕ್ರಿಯಾತ್ಮಕ ಸಮೀಕರಣಗಳನ್ನು ರೂಪಿಸಿದ್ದ ಅವರು ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಅಪಾರವಾದದ್ದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ