ಚಳಿಗಾಲದಲ್ಲಿ ತುಳಸಿ ಗಿಡ ಒಣಗುತ್ತಿದೆಯೇ? ಆರೈಕೆ ಹೀಗೆ ಮಾಡಿ
ತುಳಸಿ ಗಿಡವನ್ನು ಪವಿತ್ರ ಹಾಗೂ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ತುಳಸಿಗಿಡವು ಒಣಗಬಾರದು ಹಾಗೂ ಸಾಯಬಾರದು ಎನ್ನಲಾಗುತ್ತದೆ. ಒಂದು ವೇಳೆ ಈ ರೀತಿ ಏನಾದರೂ ಆದರೆ ಮನೆಗೆ ಅಶುಭವೆಂದು ಭಾವಿಸಲಾಗುತ್ತದೆ. ಚಳಿಗಾಲದಲ್ಲಿ ತುಳಸಿ ಸಸ್ಯವು ಒಣಗಲು ಪ್ರಾರಂಭವಾಗುತ್ತದೆ. ಈ ಸಸ್ಯದ ಆರೈಕೆಗೆ ಗಮನ ನೀಡದಿರುವುದೇ ಮುಖ್ಯ ಕಾರಣವಾಗಿದೆ. ಈ ಋತುವಿನಲ್ಲಿ ತುಳಸಿ ಗಿಡವು ಒಣಗುತ್ತಿದ್ದರೆ ಹೆಚ್ಚು ಚಿಂತಿಸಬೇಡಿ. ಮನೆಯಂಗಳದಲ್ಲಿರುವ ತುಳಸಿ ಗಿಡವು ಸದಾ ಹಸಿರಾಗಿರಲು ಈ ಕೆಲವು ಸಲಹೆಗಳನ್ನು ತಪ್ಪದೇ ಪಾಲಿಸಿ.
ತುಳಸಿ ಗಿಡವನ್ನು ಲಕ್ಷ್ಮಿಯ ಅವತಾರ ಎಂದು ಪರಿಗಣಿಸಲಾಗಿದ್ದು, ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಹಚ್ಚ ಹಸಿರಿನಿಂದ ಕಂಗೊಳಿಸುವ ತುಳಸಿ ಗಿಡವು ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಆದರೆ ಈ ತುಳಸಿ ಗಿಡವು ಒಣಗುವುದು ಅಥವಾ ಸಾಯುವುದು ಅಶುಭ ಎಂದು ಪರಿಗಣಿಸಲಾಗಿದೆ. ಆದರೆ ಚಳಿಗಾಲದಲ್ಲಿ ಹಚ್ಚಹಸಿರಿನಿಂದ ಕೂಡಿದ ತುಳಸಿಯೂ ಒಣಗುತ್ತವೆ. ಈ ಋತುವಿನಲ್ಲಿ ತುಳಸಿಯ ಆರೈಕೆ ಮಾಡುವುದು ಕಷ್ಟದಾಯಕವಾಗಿದ್ದು, ಒಂದು ವೇಳೆ ನಿಮ್ಮ ಮನೆಯಲ್ಲಿರುವ ತುಳಸಿ ಗಿಡವು ಒಣಗುತ್ತಿದ್ದರೆ ಈ ಕೆಲವು ಸಲಹೆಗಳನ್ನು ಅನುಸರಿಸಿ ಗಿಡದ ಆರೈಕೆ ಮಾಡಿ.
- ಚಳಿಗಾಲದಲ್ಲಿ ತಂಪಾದ ವಾತಾವರಣವಿರುವ ಕಾರಣ ತುಳಸಿ ಗಿಡಗಳಿಗೆ ತಣ್ಣೀರು ಹಾಕಬೇಡಿ. ಯಾವಾಗಲೂ ಉಗುರುಬೆಚ್ಚನೆಯ ನೀರು ಬಳಕೆ ಮಾಡಿ. ಹೀಗೆ ಮಾಡಿದ್ದಲ್ಲಿ ಸಸ್ಯದಲ್ಲಿ ತೇವಾಂಶ ಉಳಿದು, ಗಿಡವು ಒಣಗುವುದಿಲ್ಲ ಹಚ್ಚಹಸಿರಾಗಿರುತ್ತದೆ.
- ಚಳಿಗಾಲದಲ್ಲಿ ತುಳಸಿಯನ್ನು ಹಸಿರಾಗಿಡಲು, ಎಲೆಗಳ ಮೇಲೆ ಸಂಗ್ರಹವಾಗಿರುವ ಧೂಳನ್ನು ಸ್ವಚ್ಛಗೊಳಿಸುವುದರೊಂದಿಗೆ ಬೇರಿನ ಸುತ್ತಲಿನ ಮಣ್ಣನ್ನು ಸಡಿಲುಗೊಳಿಸುತ್ತ ಇರುವುದು ಬಹಳ ಮುಖ್ಯ. ವಾರಕ್ಕೆ ಎರಡು ಬಾರಿಯಾದರೂ ಮಣ್ಣನ್ನು ಸಡಿಲಗೊಳಿಸಿ.
- ಚಳಿಗಾಲದಲ್ಲಿ ತುಳಸಿ ಗಿಡವು ಒಣಗಲು ಪ್ರಾರಂಭಿಸಿದರೆ ಮಡಕೆಯಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಣ ಮಾಡಿಕೊಳ್ಳಿ. ಮಡಕೆಯ ಕೆಳಗಿನಿಂದ ಚಿಕ್ಕದಾಗಿ ತೂತು ಮಾಡಿ ತುಳಸಿ ಗಿಡವನ್ನು ನೆಡಿ. ಮಡಕೆ ಸ್ವಲ್ಪ ದೊಡ್ಡದಿರಲಿ. ಈ ರೀತಿ ಗಿಡ ನೆಡುವುದು ಉತ್ತಮ.
- ತುಳಸಿ ಗಿಡಕ್ಕೆ ನೀರು ಅಗತ್ಯವಾಗಿ ಬೇಕು. ಆದರೆ ಹೆಚ್ಚು ನೀರನ್ನು ಹಾಕಬೇಡಿ. ನೀರು ಹೆಚ್ಚಾದರೆ ಸಸ್ಯದ ಬೇರುಗಳಿಂದಲೇ ಕೊಳೆಯಲು ಪ್ರಾರಂಭಿಸುತ್ತದೆ. ನೀರು ಕಡಿಮೆಯಾದ್ರೂ ಕೂಡ ಗಿಡ ಒಣಗುತ್ತವೆ. ಹೀಗಾಗಿ ನೀರನ್ನು ಹಾಕುವಾಗ ನೀರಿನ ಪ್ರಮಾಣದ ಬಗ್ಗೆ ಹೆಚ್ಚು ಗಮನ ಕೊಡಿ.
- ಚಳಿಗಾಲದಲ್ಲಿ ಇಬ್ಬನಿಯಿಂದ ತುಳಸಿ ಗಿಡವು ಒಣಗಿ ಸಾಯುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ತುಳಸಿ ಗಿಡವನ್ನು ಸ್ವಚ್ಛವಾದ ಕೆಂಪು ಬಟ್ಟೆಯಿಂದ ಮುಚ್ಚಿ. ಅದಲ್ಲದೇ, ಈ ಗಿಡವನ್ನು ಒಳಾಂಗಣದಲ್ಲಿ ಇರಿಸುವುದು ಸೂಕ್ತ.
- ತುಳಸಿ ಗಿಡಕ್ಕೆ ಯೂರಿಯಾದಂತಹ ಕೃತಕ ಗೊಬ್ಬರಗಳ ಬಳಕೆಯನ್ನು ಆದಷ್ಟು ತಪ್ಪಿಸಿ. ಈ ಗಿಡಕ್ಕೆ ಮಿಶ್ರಗೊಬ್ಬರ, ಸಾವಯವ ಮಿಶ್ರಗೊಬ್ಬರವನ್ನು ಬಳಸುವುದು ಸೂಕ್ತದಾಯಕವಾಗಿದೆ. ಕಾಲಕಾಲಕ್ಕೆ ಮಣ್ಣನ್ನು ಬದಲಾಯಿಸುತ್ತ ಇರಿ. ಇದರಿಂದ ಸಸ್ಯಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ