
ದೇಶದಲ್ಲಿಂದು ಸಾಕಷ್ಟು ಸ್ಟಾರ್ಟ್‌ಅಪ್‌ಗಳು (Startup) ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ. ಜಾಗತೀಕರಣದ ಈ ಯುಗದಲ್ಲಿ, ಭಾರತೀಯ ನವೋದ್ಯಮ ಸಂಸ್ಕೃತಿಯನ್ನು ಹೊಸ ಎತ್ತರಕ್ಕೆ ಏರಿಸಲು ಪ್ರಯತ್ನಗಳು ನಡೆಯುತ್ತಿವೆ. ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಉದ್ಯೋಗ ಮತ್ತು ಅಭಿವೃದ್ಧಿಯ ಕನಸುಗಳನ್ನು ನನಸಾಗಿಸುವಲ್ಲಿ ನವೋದ್ಯಮಗಳ ಪಾತ್ರ ನಿರ್ಣಾಯಕವಾಗಿದ್ದು, ಭಾರತದಲ್ಲಿ ನವೋದ್ಯಮ ಪರಿಕಲ್ಪನೆಯನ್ನು ಪ್ರೋತ್ಸಾಹಿಸುವ, ಉದ್ಯಮಶೀಲತೆಯನ್ನು ಉತ್ತೇಜಿಸುವ ಹಾಗೂ ಭಾರತದ ಸ್ವಾವಲಂಬನೆಯ ಗುರಿಯನ್ನು ಸಾಧಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 16 ರಂದು ರಾಷ್ಟ್ರೀಯ ನವೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
2016 ರಲ್ಲಿ ಪ್ರಾರಂಭವಾದ ಸ್ಟಾರ್ಟ್‌ಅಪ್ ಇಂಡಿಯಾ ಉಪಕ್ರಮದ ಸಂಸ್ಥಾಪನಾ ದಿನವನ್ನು ಗುರುತಿಸಲು ಜನವರಿ 16, 2022 ರಂದು ಮೊದಲ ಬಾರಿಗೆ ರಾಷ್ಟ್ರೀಯ ನವೋದ್ಯಮ ದಿನವನ್ನು ಆಚರಿಸಲಾಯಿತು. ಜನವರಿ 15, 2022 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 16 ರಂದು ರಾಷ್ಟ್ರೀಯ ನವೋದ್ಯಮ ದಿನವನ್ನು ಅಳವಡಿಸಿಕೊಳ್ಳುವುದಾಗಿ ಘೋಷಿಸಿದರು. ಅದೇ ವರ್ಷ ಭಾರತ ತನ್ನ ಮೊದಲ ರಾಷ್ಟ್ರೀಯ ನವೋದ್ಯಮ ದಿನವನ್ನು ಆಚರಿಸಿತು. ಈ ದಿನವು ರಾಷ್ಟ್ರದ ಪ್ರಗತಿಗೆ ಸ್ಟಾರ್ಟ್‌ಅಪ್ ಸಮುದಾಯದ ಕೊಡುಗೆಗಳನ್ನು ಬೆಂಬಲಿಸುವ ಮತ್ತು ಗುರುತಿಸುವ ಹಾಗೂ ನಾಗರಿಕರಲ್ಲಿ ಉದ್ಯಮಶೀಲತಾ ಮನೋಭಾವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಸ್ಟಾರ್ಟ್ಅಪ್ ನವೋದ್ಯಮಿಗಳಿಗೆ ಸ್ವಂತ ಉದ್ದಿಮೆಯನ್ನು ಶುರು ಮಾಡಲು ಒಂದೊಳ್ಳೆ ವೇದಿಕೆಯಾಗಿದೆ. ಸ್ಟಾರ್ಟ್ಅಪ್ ಎಂದರೆ ಇದೀಗ ಕಾರ್ಯಾಚರಣೆ ಆರಂಭಿಸಿರುವ ಕಂಪನಿ. ಒಬ್ಬಂಟಿಯಾಗಿ ಅಥವಾ ಒಂದು ಟೀಮ್‌ನೊಂದಿಗೆ, ಇನ್ಕ್ಯುಬೇಶನ್ ಎಂಬ ಪ್ರಕ್ರಿಯೆಯ ಮೂಲಕ ಕಂಪನಿಗೆ ಅಡಿಪಾಯ ಹಾಕಲಾಗುತ್ತದೆ. ಇಲ್ಲಿ, ಜನರು ತಮ್ಮ ಕೌಶಲ್ಯ ಮತ್ತು ಪರಿಣತಿಯನ್ನು ತಂದು ಹೊಸ ವ್ಯವಹಾರ ಕಲ್ಪನೆಯ ಮೇಲೆ ಒಟ್ಟಾಗಿ ಕೆಲಸ ಮಾಡುತ್ತಾರೆ. ಈ ರೀತಿಯ ಕಂಪನಿಯು ಗ್ರಾಹಕರಿಗೆ ವಿಶಿಷ್ಟ ಉತ್ಪನ್ನ ಅಥವಾ ಸೇವೆಯನ್ನು ನೀಡುತ್ತದೆ.
ಇದನ್ನೂ ಓದಿ: ಭಾರತೀಯ ಸೇನೆಯ ಅದಮ್ಯ ಧೈರ್ಯ, ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ದಿನವಿದು
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ