
ಕೆಲವರಿಗೆ ನಿದ್ರೆಯಲ್ಲಿ (Sleep) ನಡೆದಾಡುವ ಅಭ್ಯಾಸ ಇದ್ರೆ ಇನ್ನೂ ಕೆಲವರಿಗೆ ನಿದ್ರೆಯಲ್ಲಿ ಮಾತನಾಡುವ (Sleep Talking) ಅಭ್ಯಾಸ ಇರುತ್ತದೆ. ಹೀಗೆ ಗಾಢ ನಿದ್ದೆಯಲ್ಲಿ ಏನೇನೋ ಗೊಣಗುವುದನ್ನು ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಹೀಗೆ ಯಾರಾದ್ರೂ ನಿದ್ರೆಯಲ್ಲಿ ಮಾತನಾಡಿದರೆ ಇದು ಕನಸಿನಲ್ಲಿ ಮಾತನಾಡುವುದು ಎಂದು ಹಲವರು ಹೇಳುತ್ತಾರೆ. ನಿದ್ರೆಯಲ್ಲಿ ಮಾತನಾಡುವ ಈ ಅಭ್ಯಾಸವನ್ನು ವೈದ್ಯಕೀಯ ಭಾಷೆಯಲ್ಲಿ ಪ್ಯಾರಾಸೋಮ್ನಿಯಾ (Parasomnia) ಎಂದು ಕರೆಯುತ್ತಾರೆ. ಪ್ಯಾರಾಸೋಮ್ನೀಯಾ ಎನ್ನುವಂತಹದ್ದು ಏನಾದರೂ ಗಂಭೀರ ಕಾಯಿಲೆಯ ಲಕ್ಷಣವೇ? ಯಾವ ಕಾರಣದಿಂದ ಜನ ಹೀಗೆ ನಿದ್ರೆಯಲ್ಲಿ ಮಾತನಾಡುತ್ತಾರೆ. ಈ ಅಭ್ಯಾಸ ಮರುಕಳಿಸದಂತೆ ತಡೆಗಟ್ಟುವುದು ಹೇಗೆ? ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿದ್ರೆಯಲ್ಲಿ ಮಾತನಾಡುವ ಅಭ್ಯಾಸವನ್ನು ವೈದ್ಯಕೀಯ ಭಾಷೆಯಲ್ಲಿ ಪ್ಯಾರಾಸೋಮ್ನಿಯಾ ಎಂದು ಕರೆಯಲಾಗುತ್ತದೆ. ಇದು ನಿದ್ರೆಯ ಸಮಯದಲ್ಲಿ ಮಾತ್ರ ಸಂಭವಿಸುವ ನಡವಳಿಕೆಯಾಗಿದ್ದು, ಇದರಿಂದ ಯಾವುದೇ ಹಾನಿಯಿಲ್ಲ ಜೊತೆಗೆ ಇದು ಯಾವುದೇ ಮಾನಸಿಕ ಅಥವಾ ಆರೋಗ್ಯ ಸಮಸ್ಯೆ ಅಲ್ಲ ಎಂದು ತಜ್ಞರು ಹೇಳುತ್ತಾರೆ. ಅದೇ ರೀತಿ ಇದನ್ನು ಸಾಮಾನ್ಯ ಎಂದು ಬಿಂಬಿಸಲು ಕೂಡಾ ಸಾಧ್ಯವಿಲ್ಲ. ಹೆಚ್ಚಾಗಿ ಮೂರರಿಂದ ಹತ್ತು ವರ್ಷದೊಳಗಿಗೆ ಮಕ್ಕಳು ಹೀಗೆ ನಿದ್ರೆಯಲ್ಲಿ ಮಾತನಾಡುತ್ತಾರೆ. ದೊಡ್ಡವರು ಕೂಡಾ ಹೀಗೆ ನಿದ್ರೆಯಲ್ಲಿ ಗೊಣಗುವುದುಂಟು. ಕೆಲವೊಮ್ಮೆ ಈ ಸಮಸ್ಯೆ ಅನುವಂಶಿಕವಾಗಿಯೂ ಬರುತ್ತದೆ.
ನಿದ್ರೆಯಲ್ಲಿ ಮಾತನಾಡುವ ಅಭ್ಯಾಸಕ್ಕೆ ನಿಖರವಾದ ಕಾರಣ ಏನು ಎಂಬುದನ್ನು ಇನ್ನೂ ಕಂಡು ಹಿಡಿಯಲಾಗಿಲ್ಲ. ಆದರೆ ನಿದ್ರೆಯಲ್ಲಿ ಮಾತನಾಡಲು ಮುಖ್ಯ ಕಾರಣ ಒತ್ತಡ, ನಿದ್ರೆಯ ಕೊರತೆ, ಅತಿಯಾದ ಮದ್ಯಪಾನ ಸೇವನೆ, ಮಾನಸಿಕ ಅಸ್ವಸ್ಥತೆಗಳು, ನಿರಂತರವಾಗಿ ಔಷಧಿಗಳನ್ನು ತೆಗೆದುಕೊಳ್ಳುವ ಅಭ್ಯಾಸ ಎನ್ನುತ್ತಾರೆ ತಜ್ಞರು. ಹೀಗೆ ನಿದ್ರೆಯಲ್ಲಿ ಕೆಲವು ಸೆಕೆಂಡುಗಳ ಕಾಲ ಮಾತನಾಡುವುದು ದೊಡ್ಡ ಸಮಸ್ಯೆಯಲ್ಲ. ಆದರೆ ಯಾರಾದರೂ ಹೀಗೆ ದೀರ್ಘಕಾಲದವರೆಗೆ ಮಾತನಾಡುತ್ತ ಇದ್ರೆ ಅಥವಾ ಕಿರುಚಾಟಗಳು ಹೆಚ್ಚಾದರೆ ಇದರಿಂದ ಪಕ್ಕದಲ್ಲಿ ಮಲಗಿರುವವರ ನಿದ್ದೆ ಕೆಡುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇದನ್ನೂ ಓದಿ: ಬೇಸಿಗೆಯಲ್ಲಿ ಪ್ರತಿದಿನ 1 ಲೋಟ ಸೋಂಪು ನೀರನ್ನು ಕುಡಿಯಿರಿ, ಹಲವು ಪ್ರಯೋಜನಗಳನ್ನು ಪಡೆಯಿರಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ