ಮಕ್ಕಳೆಂದ ಮೇಲೆ ತುಂಟಾಟ ಸಹಜ, ಈ ಮಕ್ಕಳ ತುಂಟಾಟಗಳು ನಗು ತರಿಸಿದರೆ ಕೆಲವೊಮ್ಮೆ ಪಿತ್ತ ನೆತ್ತಿಗೇರುತ್ತದೆ. ಮಕ್ಕಳಂತೂ ಕುಳಿತಲ್ಲಿಯೇ ಕುಳಿತುಕೊಳ್ಳುವುದು ಕಡಿಮೆಯೇ. ಏನಾದರೊಂದು ತರಲೆ ತುಂಟಾಟಗಳನ್ನು ಮಾಡುತ್ತಾ ಹೆತ್ತವರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿರುತ್ತಾರೆ. ಹೊರಗಡೆ ಹೋದಾಗ ತುಂಟಾಟವು ಅತಿರೇಕಕ್ಕೆ ಮಿತಿದರೆ ಒಂದೇಟು ಬೀಳುತ್ತದೆ. ಕೆಲವೊಮ್ಮೆ ಹೆತ್ತವರ ಮೇಲೆ ಕೈಯೆತ್ತುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ನಿಮ್ಮ ಮಗುವಿನಲ್ಲಿ ಹೊಡೆಯುವ ಅಭ್ಯಾಸವಿದ್ದರೆ ಈ ಕೆಲವು ಸಲಹೆಗಳನ್ನು ಪಾಲಿಸಿ ಮಕ್ಕಳನ್ನು ಸರಿದಾರಿಗೆ ತರಬಹುದು.
- ಶಾಂತವಾಗಿರುವುದನ್ನು ಕಲಿಯಿರಿ : ಒಂದು ವೇಳೆ ನಿಮ್ಮ ಮಗು ಕೈ ಎತ್ತಿದರೆ ಶಾಂತವಾಗಿಯೇ ಆ ಸಂದರ್ಭವನ್ನು ನಿಭಾಯಿಸುವುದನ್ನು ಕಲಿಯಿರಿ. ಕೋಪದಲ್ಲಿ ಮಗುವಿಗೆ ಹೊಡೆಯುವುದು ಸರಿಯಲ್ಲ. ನೀವು ಕೂಡ ಸಿಟ್ಟು ಮಾಡಿಕೊಂಡರೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಮಗುವಿನೊಂದಿಗೆ ಶಾಂತವಾಗಿ ವರ್ತಿಸಿ ಮಗುವಿಗೆ ಮಾಡುತ್ತಿರುವುದು ತಪ್ಪು ಎಂದು ವಿವರಿಸಿ ಹೇಳುವುದನ್ನು ಕಲಿಯಿರಿ.
- ಮಗುವಿಗೆ ನೀವೇ ಮಾದರಿ ವ್ಯಕ್ತಿಯಾಗಿರಿ: ಮಗುವು ಕಡಿಮೆ ವಯಸ್ಸಿನವರಾಗಿದ್ದರೆ ಮತ್ತು ನಿಮ್ಮನ್ನು ಹೊಡೆಯುತ್ತಿದ್ದರೆ, ಆ ಕ್ಷಣದಲ್ಲಿ ನೀವು ಕೂಡ ಕೂಗಾಡಿದರೆ ಕೋಪದಲ್ಲಿ ಕೈ ಎತ್ತಬೇಡಿ. ಇದರಿಂದ ಮಗುವು ಮತ್ತಷ್ಟು ಆಕ್ರಮಣಕಾರಿ ಸ್ವಭಾವವನ್ನು ತೋರಿಸಬಹುದು. ಸಾಧ್ಯವಾದಷ್ಟು ನೀವು ಮಾದರಿ ವ್ಯಕ್ತಿಯಾಗಿ ಮಕ್ಕಳನ್ನು ಉತ್ತಮ ಮಾರ್ಗದಲ್ಲಿ ಬೆಳೆಸುವತ್ತ ಗಮನ ಕೊಡಿ.
- ಮಕ್ಕಳ ಈ ಅಭ್ಯಾಸದ ಹಿಂದಿನ ಕಾರಣ ಅರ್ಥೈಸಿಕೊಳ್ಳಿ : ಮಕ್ಕಳು ದೊಡ್ಡವರ ಮೇಲೆ ಕೈ ಎತ್ತಿದರೆ ಆ ತಕ್ಷಣವೇ ಮಗುವಿನೊಂದಿಗೆ ಮಾತನಾಡಿದರೆ ಕಾರಣವನ್ನು ತಿಳಿಯುವುದು ಬಹಳ ಮುಖ್ಯ. ನಿಮ್ಮ ಮಗುವು ಯಾಕಾಗಿ ಇನ್ನೊಬ್ಬರ ಮೇಲೆ ಕೈ ಎತ್ತಿದ್ದಾರೆ ಎಂದು ಕಾರಣ ತಿಳಿದು ಆ ಬಳಿಕ ಮಗುವಿನೊಂದಿಗೆ ಪ್ರತಿಕ್ರಿಯಿಸುವುದು ಬಹಳ ಮುಖ್ಯ.
- ಕೋಪವನ್ನು ವ್ಯಕ್ತಪಡಿಸಲು ಇದೊಂದೇ ಮಾರ್ಗವಲ್ಲ ಎಂದು ತಿಳಿ ಹೇಳಿ : ಕೆಲವು ಮಕ್ಕಳು ಸಿಟ್ಟು ಬಂದರೆ ಒಂದೊಂದು ರೀತಿಯಲ್ಲಿ ವರ್ತಿಸುತ್ತಾರೆ. ಕೆಲವು ಮಕ್ಕಳು ಕಿರುಚಾಡಿದರೆ, ಇನ್ನು ಕೆಲವು ಮಕ್ಕಳು ಕೋಪ ದಲ್ಲಿ ಕೈ ಎತ್ತುತ್ತಾರೆ. ಈ ವೇಳೆಯಲ್ಲಿ ಕೋಪವನ್ನು ತೋರಿಸಲು ಇತರ ಮಾರ್ಗಗಳಿದ್ದು, ಹೊಡೆಯುವ ಬದಲು ಪದಗಳನ್ನು ಬಳಸಲು ಹೇಳಿ. ಹೀಗೆ ಮಾಡುತ್ತಾ ಈ ಕೆಟ್ಟ ಅಭ್ಯಾಸವನ್ನು ನಿಲ್ಲಿಸಿ.
- ಮಗುವಿಗೆ ಸಮಯ ನೀಡಿ : ನಿಮ್ಮ ಮಗುವಿಗೆ ಕೋಪ ಬಂದಾಗ ನೀವು ಕೂಡ ತಕ್ಷಣವೇ ಪ್ರತಿಕ್ರಿಯಿಸಬೇಡಿ. ಮಗುವು ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಸಾಧ್ಯವಾದರೆ ತಾಳ್ಮೆಯಿಂದ ಮಾರ್ಗದರ್ಶನದೊಂದಿಗೆ ಮಗುವಿನ ಅಭ್ಯಾಸವನ್ನು ಸುಧಾರಿಸಿ. ಒಂದೇ ಬಾರಿಗೆ ಈ ನಡವಳಿಕೆಯನ್ನು ತಿದ್ದಲು ಸಾಧ್ಯವಿಲ್ಲ. ಹೀಗಾಗಿ ಕಾಲವಕಾಶ ನೀಡುವ ಮುಖೇತ ಮಗುವಿನ ಈ ವರ್ತನೆಯನ್ನು ಬದಲಾಯಿಸುವುದು ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ