ಎಲ್ಲಾ ಮಕ್ಕಳಿಗೂ ತಮ್ಮ ತಂದೆಯೇ ಅವರ ಜೀವನದ ರೋಲ್ ಮಾಡೆಲ್ ಆಗಿರುತ್ತಾರೆ. ಆದರೆ ಕೆಲವು ಮಕ್ಕಳು ತಂದೆಯ ಬಳಿ ಮಾತನಾಡಲು ಹೆದರುವುದಿದೆ. ತಮ್ಮ ಇಷ್ಟ ಕಷ್ಟಗಳನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಾರೆ. ನೋಡುವುದಕ್ಕೆ ತುಂಬಾ ಒರಟು, ಬೇಗ ಸಿಟ್ಟು ಮಾಡಿಕೊಳ್ಳುವ ಗುಣವನ್ನು ಹೊಂದಿದ್ದರೂ ಮಕ್ಕಳ ವಿಷಯದಲ್ಲಿ ಅಪ್ಪನದ್ದು ಮೃದುವಾದ ಮನಸ್ಸು. ಮಕ್ಕಳಿಗೆ ಯಾವುದೇ ನೋವು ಬಾರದಂತೆ ನೋಡಿಕೊಳ್ಳುವ ಅಪ್ಪನು ಮಕ್ಕಳ ಪಾಲಿಗೆ ಬೆಸ್ಟ್ ಹಾಗೂ ಫೇವರಿಟ್ ಆಗಬೇಕೆಂದರೆ ಇಲ್ಲಿದೆ ಕೆಲವು ಟಿಪ್ಸ್
* ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯಿರಿ : ಪ್ರತಿದಿನ ಮಗುವಿನೊಂದಿಗೆ ಸಮಯ ಕಳೆಯುವುದು ಕೂಡ ಬೆಸ್ಟ್ ಅಪ್ಪನ ಗುಣಗಳಲ್ಲಿ ಒಂದು. ಅವರ ಇಷ್ಟದ ಚಟುವಟಿಕೆಗಳಲ್ಲಿ ನೀವು ಕೂಡ ತೊಡಗಿಕೊಳ್ಳಿ, ಅವರ ದಿನನಿತ್ಯ ಶಾಲಾ ವರದಿಗಳಿಗೆ ಕಿವಿಯಾಗುವುದು ಬಹಳ ಮುಖ್ಯ. ಮಗುವಿಗೆ ಯಾವುದರ ಬಗ್ಗೆ ಹೆಚ್ಚು ಆಸಕ್ತಿಯಿದೆಯೋ, ಅವರೊಂದಿಗೆ ನೀವು ಕೂಡ ಆ ವಿಷಯದ ಬಗ್ಗೆಯೇ ಚರ್ಚಿಸಿ.
* ಅಪರಿಮಿತ ಪ್ರೀತಿ ನೀಡಿ, ಸುರಕ್ಷಿತ ವಾತಾವರಣ ಸೃಷ್ಟಿಸಿ : ಮಕ್ಕಳ ಮೇಲೆ ಅಪರಿಮಿತ ಪ್ರೀತಿ ಹಾಗೂ ಕಾಳಜಿಯನ್ನು ತೋರುವ ವ್ಯಕ್ತಿಯೆಂದರೆ ಅದುವೇ ತಂದೆ. ಮಕ್ಕಳ ಯಾವುದೇ ಕೆಲಸ ಮಾಡಲು ಮುಂದಾದರೂ ಬೆಂಬಲ ನೀಡಿ. ಕೇಳಿದ್ದೆಲ್ಲವನ್ನು ಕೊಡಿಸುವುದರೊಂದಿಗೆ ಸುರಕ್ಷಿತ ವಾತಾವರಣ ಹಾಗೂ ಭವಿಷ್ಯವನ್ನು ನಿರ್ಮಿಸುವುದು ಮುಖ್ಯ.
* ಮಗುವಿನ ಮೊದಲ ಸ್ನೇಹಿತ ನೀವಾಗಿರಿ : ಮಕ್ಕಳಿಗೆ ಅತ್ಯುತ್ತಮ ಸ್ನೇಹಿತರೆಂದರೆ ಅದುವೇ ತಂದೆ ತಾಯಿಯಾಗಿರುತ್ತಾರೆ. ತಂದೆ ಯಾವಾಗಲೂ ತನ್ನ ಮಕ್ಕಳೊಂದಿಗೆ ಒಳ್ಳೆಯ ಬಾಂಧವ್ಯದೊಂದಿಗೆ ಸ್ನೇಹಪರರಾಗಿರಬೇಕು. ಒಳ್ಳೆಯ ಜೀವನವನ್ನು ಕಲ್ಪಿಸುವುದರೊಂದಿಗೆ ಮಕ್ಕಳನ್ನು ಸ್ನೇಹಿತರಂತೆ ಕಾಣುವ ಮೂಲಕ ಅವರ ಸರಿತಪ್ಪುಗಳನ್ನು ತಿದ್ದಬೇಕು.
* ಉತ್ತಮ ಸಂವಹನಕಾರರಾಗಿರಿ : ಮಕ್ಕಳು ತಂದೆ ತಾಯಿಯರನ್ನು ನೋಡಿಯೇ ಕಲಿಯುವುದೇ ಹೆಚ್ಚು. ಜಗತ್ತಿನಲ್ಲಿ ಬೆಸ್ಟ್ ಅಪ್ಪ ಎಂದು ಕರೆಸಿಕೊಳ್ಳಲು ಉತ್ತಮ ಸಂವಹನಕಾರರು ಆಗುವುದು ಬಹಳ ಮುಖ್ಯ. ಒಳ್ಳೆಯ ಮಾತುಗಳೊಂದಿಗೆ ನಿಮ್ಮ ಮಗುವಿನ ಮಾತನ್ನು ಆಲಿಸಲು ಸಿದ್ಧರಾಗಿ. ಮಕ್ಕಳ ಅಭಿಪ್ರಾಯಗಳಿಗೆ ಬೆಲೆ ಕೊಡುವುದರ ಜೊತೆಗೆ ತನ್ನ ಮಾತಿನಿಂದಲೇ ಮಕ್ಕಳಿಗೆ ಬುದ್ಧಿವಾದ ಹೇಳುವುದು ಅವಶ್ಯಕ.
* ನಿಮ್ಮ ಮಗುವಿಗೆ ಮಾರ್ಗದರ್ಶಕರಾಗಿರಿ : ಮಗುವಿಗೆ ತಂದೆ ಉತ್ತಮ ಮಾರ್ಗದರ್ಶಕರು ಹಾಗೂ ಜೀವನ ಮುನ್ನಡೆಸುವ ಒಬ್ಬ ಗುರುವೂ ಕೂಡ ಹೌದು. ಹೀಗಾಗಿ ಮಕ್ಕಳಿಗೆ ಸರಿ ತಪ್ಪು, ಒಳ್ಳೆಯದು ಕೆಟ್ಟದ್ದರ ಬಗ್ಗೆ ತಂದೆ ತಿಳಿಹೇಳಬೇಕು. ಮಕ್ಕಳ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ತಂದೆಯೂ ಗಮನ ಕೊಡುವುದರ ಜೊತೆಗೆ ಮಾರ್ಗದರ್ಶನ ಮಾಡುವುದು ಬಹಳ ಮುಖ್ಯವಾಗಿರುತ್ತದೆ.
* ಮಕ್ಕಳಿಗೆ ಪ್ರೇರಣಾ ಶಕ್ತಿಯಾಗಿರಿ : ಪ್ರತಿಯೊಬ್ಬ ತಂದೆಯೂ ಮಕ್ಕಳಿಗೆ ಪ್ರೋತ್ಸಾಹ ನೀಡಿದರೆ ಸಾಕಾಗುವುದಿಲ್ಲ. ಪ್ರೇರಣಾ ಶಕ್ತಿಯಾಗಿರುವುದು ಮುಖ್ಯ. ಮಕ್ಕಳು ಸ್ವತಂತ್ರರಾಗಿ, ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವಂತೆ ನೋಡಿಕೊಳ್ಳಬೇಕು. ಮಕ್ಕಳೊಂದಿಗೆ ಕಠಿಣ ಸ್ವಭಾವದಿಂದ ನಡೆದುಕೊಳ್ಳುವ ಬದಲು ಆತ್ಮವಿಶ್ವಾಸ ಹಾಗೂ ಸ್ವಾಭಿಮಾನದಿಂದ ಬದುಕುವಂತೆ ಮಾಡಬೇಕು.
* ಮಕ್ಕಳ ಆರೋಗ್ಯಕ್ಕೆ ಹೆಚ್ಚು ಗಮನ ನೀಡಿ : ಅತ್ಯುತ್ತಮ ತಂದೆ ಯಾವಾಗಲೂ ತಮ್ಮ ಮಕ್ಕಳ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ತಮ್ಮ ಮಕ್ಕಳು ಚೆನ್ನಾಗಿರಬೇಕೆಂದರೆ ತಮ್ಮ ಆರೋಗ್ಯ ಉತ್ತಮವಾಗಿರಬೇಕೆಂದು ತಂದೆ ಬಯಸುತ್ತಾರೆ. ಅದಲ್ಲದೇ, ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಹಾಗೂ ವ್ಯಾಯಾಮದಂತಹ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ