ಹೊಸತನಕ್ಕೆ ಬದ್ಧರಾಗುವುದು ಅಷ್ಟು ಸುಲಭವಲ್ಲ. ಅದರಲ್ಲೂ ಸಂಬಂಧಗಳ ವಿಷಯಕ್ಕೆ ಬಂದಾಗ ಇದು ಮತ್ತಷ್ಟು ಕಷ್ಟ. ಯಾವುದೇ ಒಂದು ಸಂಬಂಧದ (Relationship) ಒಳಗೆ ನಾವು ಪ್ರವೇಶಿಸುವ ಮುನ್ನ ಬಹಳಷ್ಟು ಯೋಚನೆ ಮಾಡುತ್ತೇವೆ. ಅದರಲ್ಲೂ ಆರಂಭಿಕ ಆಕರ್ಷಣೆಯ ಜತೆಗೆ ಕಳೆದ ಅದೆಷ್ಟೋ ಸಂಬಂಧಗಳು ಕೊನೆಗೆ ಆ ವ್ಯಕ್ತಿಯೊಂದಿಗೆ ದೀರ್ಘಕಾಲ ಇರಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುವ ಹಂತಕ್ಕೆ ಕರೆದುಕೊಂಡು ಹೋಗುತ್ತದೆ. ಈ ಹಂತದಲ್ಲಿ ತೆಗೆದುಕೊಳ್ಳುವ ನಿರ್ಧಾರ ಇಬ್ಬರ ನಡುವಿನ ಒಡನಾಟಕ್ಕೆ ಸಂಬಂಧಿಸಿರುತ್ತದೆ. ಆದರೆ ಸಂಬಂಧ ಗಟ್ಟಿಯಾದ ಮೇಲೆ ಕೆಲವೊಮ್ಮೆ ಆಲೋಚನೆಗಳಿಗೆ ಒಳಗಾಗುತ್ತೇವೆ. ಮುಖ್ಯವಾಗಿ ನಮ್ಮ ಸಂಗಾತಿಯ ಜತೆಗಿನ ಬಾಂಧವ್ಯದ ಸುತ್ತ ಒಂದು ರೀತಿಯ ಆತಂಕ (Anxiety) ಹುಟ್ಟಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ಸಂಗಾತಿಯನ್ನು ಕಳೆದುಕೊಳ್ಳುವ ಭೀತಿ.
ಮನೋವಿಜ್ಞಾನಿ ಡಾ. ನಿಕೋಲ್ ಲೆಪೆರಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಸಂಬಂಧದ ಬಗ್ಗೆ ಸದಾ ಯೋಚಿಸುವ ಅಥವಾ ಚಿಂತೆಗೀಡಾಗುವ ಜನರಿಗೆ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ.
ಯಾವುದೇ ಒಂದು ಸಂಬಂಧದಲ್ಲಿ ನಾವು ಇರುವಾಗ ಅಥವಾ ಆ ಸಂಬಂಧದ ಬಗ್ಗೆ ನೀವು ಗಂಭೀರವಾಗಿರುವಾಗ ನಿಮ್ಮ ಸಂಗಾತಿ ನಿಮಗೆ ದ್ರೋಹ ಮಾಡಬಹುದೆಂಬ ಭಯ ಹೊಂದಿದ್ದೀರಾ? ಇದು ಸಂಬಂಧದ ಮೇಲೆ ನಿಮಗಿರುವ ಆತಂಕವಾಗಿರಬಹುದು. ಇದಕ್ಕೆ ನಿಮ್ಮಲ್ಲಿ ಈ ಮೊದಲು ನಡೆದ ಅನಿರೀಕ್ಷಿತ ಘಟನೆಗಳು, ಬಾಲ್ಯದಲ್ಲಿ ಎದುರಾದ ಕೆಲವೊಂದು ಸನ್ನಿವೇಶಗಳು ಕಾರಣವಾಗಬಹುದು. ಇದು ಒಂದೊಳ್ಳೆ ಬಾಂಧವ್ಯವನ್ನು ಹಾಳು ಮಾಡಬಹುದು ಎಚ್ಚರ.
ಸಂಬಂಧದಲ್ಲಿನ ಭಯ ಅಥವಾ ಆತಂಕವು ಒಂದು ಒಳ್ಳೆ ಬಾಂಧವ್ಯದ ಮೇಲೆ ನಿರಂತರವಾಗಿ ಚಿಂತೆ ಪಡುವಂತೆ ಅಥವಾ ಅಸುರಕ್ಷಿತ ಭಾವನೆಯನ್ನು ಹೆಚ್ಚಿಸುತ್ತದೆ. ಇದು ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಈ ಆತಂಕಕ್ಕೆ ಹಲವು ಕಾರಣಗಳು ಕೂಡ ಇವೆ.
ಸಂಬಂಧದಲ್ಲಿನ ಆತಂಕಕ್ಕೆ ಮುಖ್ಯ ಕಾರಣ ನಮ್ಮ ಮನಸ್ಥಿತಿ. ಹುಟ್ಟಿನಿಂದ ತಂದೆ- ತಾಯಿ ಜತೆಯಲ್ಲಿ ಬೆಳೆಯದಿದ್ದರೆ, ಪೋಷಕರನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದರೆ ಅಥವಾ ಈಗಾಗಲೇ ಒಂದು ಸಂಬಂಧದಿಂದ ಮೋಸ ಹೋಗಿದ್ದರೆ, ಹೊಸ ಸಂಬಂಧದಲ್ಲಿ ಅಥವಾ ಬಾಂಧವ್ಯದಲ್ಲಿ ನಂಬಿಕೆ ಇರುವುದಿಲ್ಲ. ಒಂದು ವೇಳೆ ನಂಬಿಕೆ ಇದ್ದರೂ ಕೆಲವೊಮ್ಮೆ ಆತಂಕ ಕಾಡುತ್ತಿರುತ್ತದೆ ಎಂದು ಡಾ. ನಿಕೋಲ್ ಲೆಪೆರಾ ಹೇಳಿದ್ದಾರೆ.
ಡಾ. ಲೆಪೆರಾ ಪ್ರಕಾರ, ಸಂಬಂಧದಲ್ಲಿನ ಆತಂಕದ ಲಕ್ಷಣಗಳು ಹೀಗಿವೆ
* ನೀವು ಏನು ಹೇಳಿದ್ದೀರಿ ಅಥವಾ ಏನು ತಪ್ಪು ಮಾಡಿದ್ದೀರಿ ಎಂಬುದರ ಕುರಿತು ಮತ್ತೆ ಮತ್ತೆ ಸಂಭಾಷಣೆಗಳನ್ನು ಪುನರಾವರ್ತಿಸುವುದು.
* ಸಂಗಾತಿಯ ಕಡೆ ನಿರ್ಲಕ್ಷ್ಯ ವಹಿಸಿ ಇತರ ಕಾರ್ಯಗಳತ್ತ (ಸ್ನೇಹಿತರು, ಕೆಲಸ, ಹವ್ಯಾಸಗಳು, ಆಸಕ್ತಿಗಳು, ಕುಟುಂಬ ಇತ್ಯಾದಿ) ಮುಖ ಮಾಡುವುದು.
* ನಿಮ್ಮ ಸಂಗಾತಿ ನಿಮಗೆ ದ್ರೋಹ ಮಾಡುತ್ತಾರೆ ಎಂಬ ಭಯ ಹೆಚ್ಚಾಗುವುದು.
* ನೀವು ಹೊಸಬರನ್ನು ಭೇಟಿಯಾದಾಗ, ಅವರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುವುದರ ಕಡೆಗೆ ಗಮನಹರಿಸುವುದು.
ಸಂಬಂಧದ ಆತಂಕದಿಂದ ಹೊರಬರುವುದು ಹೇಗೆ?
ನಮ್ಮನ್ನು ನಾವು ಮೊದಲು ಗೌರವಿಸಬೇಕು. ಎಲ್ಲಾ ಸಂಬಂಧವು ಅಥವಾ ಎಲ್ಲಾ ವ್ಯಕ್ತಿಯು ಒಂದೇ ರೀತಿಯಾಗಿ ಇರುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಬದಲಾವಣೆಗೆ ತಕ್ಕಂತೆ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು ಎನ್ನುವುದನ್ನು ತಿಳಿಯಿರಿ. ಆತ್ಮಗೌರವವನ್ನು ಹೆಚ್ಚಿಸುವ ಕಾರ್ಯಗಳ ಮೇಲೆ ಗಮನಹರಿಸಿ. ಪ್ರೀತಿಯನ್ನು ಹಂಚುವ ಮೊದಲು ಅಥವಾ ಮತ್ತೊಬ್ಬರಲ್ಲಿ ಪ್ರೀತಿ ಹುಡುಕುವ ಮೊದಲು ನಿಮ್ಮ ಮೇಲೆ ನಿಮಗೆ ಪ್ರೀತಿ ಹೆಚ್ಚಿಸಿಕೊಳ್ಳಿ.
Published On - 12:48 pm, Tue, 4 January 22