ನೀವು ಚಹಾ ಪ್ರಿಯರಾ? ಶುಂಟಿ ಟೀ, ಲೆಮನ್ ಟೀ, ಬ್ಲಾಕ್ ಟೀ, ಗ್ರೀನ್ ಟೀ, ಮಸಾಲ ಟೀ, ಏಲಕ್ಕಿ ಟೀ ಹೀಗೆ ನಾನಾ ರೀತಿಯ ಚಹಾಗಳನ್ನು ನೀವು ಸೇವಿಸಿರಬಹುದು. ಆದರೆ, ಯಾವತ್ತಾದರೂ ಬಟರ್ ಟೀ ಕುಡಿದಿದ್ದೀರಾ? ಟಿಬೆಟ್ ದೇಶದಲ್ಲಿ ಪ್ರಾರಂಭವಾದ ಈ ಟಿಬೇಟನ್ ಬಟರ್ ಟೀ ಹಿಮಾಲಯದ ತಪ್ಪಲಿನಲ್ಲಿರುವ ಭೂತಾನ್, ನೇಪಾಳ, ಭಾರತದ ಉತ್ತರ ಪೂರ್ವ ರಾಜ್ಯಗಳಲ್ಲಿ ಸೇವಿಸಲ್ಪಡುವ ಜನಪ್ರಿಯ ಪಾನೀಯವಾಗಿದೆ.
ಚಹಾದ ಮೇಲೆ ಆಗಾಗ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ಜನರು ತಮಗಿಷ್ಟವಾಗುವ ರೀತಿಯಲ್ಲಿ ಚಹಾವನ್ನು ತಯಾರಿಸಿಕೊಂಡು ಕುಡಿಯುತ್ತಾರೆ. ವಾಸ್ತವವಾಗಿ ಬೆಣ್ಣೆ ನಮ್ಮ ತೂಕ ಹೆಚ್ಚಿಸುವ ಆಹಾರವಾಗಿದ್ದರೂ ಇದನ್ನು ಬಿಸಿಯಾದ ಟೀ ಜೊತೆಗೆ ಬೆರೆಸಿ ಕುಡಿದಾಗ ತೂಕ ಇಳಿಸುವಲ್ಲಿ ನೆರವಾಗುವುದು ಎಂಬುದು ನಿಮಗೆ ಗೊತ್ತಾ? ಈ ಆರೋಗ್ಯಕರ ಕೊಬ್ಬು ಹೊಟ್ಟೆಯನ್ನು ಹೆಚ್ಚು ಹೊತ್ತಿನವರೆಗೆ ತುಂಬಿರುವ ಭಾವನೆ ಮೂಡಿಸುತ್ತದೆ ಹಾಗೂ ಈ ಮೂಲಕ ಅನಗತ್ಯ ಆಹಾರ ಸೇವನೆಯಿಂದ ತಪ್ಪಿಸುತ್ತದೆ.
ಬೆಣ್ಣೆ ಹಾಕಿದ ಟೀಯಲ್ಲಿ ಹೆಚ್ಚಿನ ಪ್ರಮಾಣದ ಆ್ಯಂಟಿ ಆಕ್ಸಿಡೆಂಟುಗಳಿದ್ದು, ತಾರುಣ್ಯ ಮತ್ತು ಆರೋಗ್ಯವನ್ನು ಬಹುಕಾಲದವರೆಗೆ ಉಳಿಯುವಂತೆ ಮಾಡುತ್ತದೆ. ಟಿಬೆಟ್‌ನಲ್ಲಿ ಸಾಂಪ್ರದಾಯಿಕ ವಿಧಾನವನ್ನೇ ಇಂದಿಗೂ ಬಳಸಲಾಗುತ್ತಿದ್ದು ಸಾಮಾನ್ಯ ಟೀ ತಯಾರಿಸುವುದಕ್ಕಿಂತಲೂ ಹೆಚ್ಚು ಸಮಯ ತಗಲುತ್ತದೆ. ಈ ಭಾಗದಲ್ಲಿ ದೊರಕುವ ವಿಶಿಷ್ಟವಾದ ಕಪ್ಪು ಟೀ ಎಲೆಗಳನ್ನು ಕತ್ತರಿಸಿ ನುಜ್ಜುಗುಜ್ಜಾಗಿಸಿ ಬಳಿಕ ಇದನ್ನು ನೀರಿನಲ್ಲಿ ಕೆಲವಾರು ಘಂಟೆಗಳ ಕಾಲ ಕುದಿಸಲಾಗುತ್ತದೆ. ಬಳಿಕ ಈ ನೀರನ್ನು ಟೀ ತಯಾರಿಸಲು ಬಳಸಲಾಗುತ್ತದೆ. ಇದಕ್ಕೆ ಹೆಣ್ಣು ಯಾಕ್ ಪ್ರಾಣಿಯ ದಪ್ಪನೆಯ ಹಾಲು ಮತ್ತು ಬೆಣ್ಣೆಯನ್ನು ಬೆರೆಸಿ ಕುಡಿಯಲಾಗುತ್ತದೆ.
ಬಟರ್ ಟೀ ವಿಡಿಯೋವನ್ನು ಅಪ್‌ಲೋಡ್ ಮಾಡಿದಾಗಿನಿಂದ, ಒಂದು ಮಿಲಿಯನ್ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 29,500 ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಅಲ್ಲದೆ ನೂರಾರು ಕಾಮೆಂಟ್‌ಗಳನ್ನು ಗಳಿಸಿದೆ. ಈ ಬಟರ್ ಚಹಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಟರ್ ಟೀಯಲ್ಲಿ ಹೆಚ್ಚಿನ ಕೆಫೇನ್ ಇದ್ದು ಇದರ ಸೇವನೆಯಿಂದ ಶಕ್ತಿ ಲಭಿಸುತ್ತದೆ. ಬೆಣ್ಣೆ ಹಾಕಿದ ಟೀಯಲ್ಲಿ ಸಮೃದ್ಧವಾದ ಆ್ಯಂಟಿ ಆಕ್ಸಿಡೆಂಟುಗಳಿವೆ ಹಾಗೂ ಇವು ಮೆದುಳಿಗೆ ಘಾಸಿ ಎಸಗುವ ಕ್ಯಾನ್ಸರ್‌ಕಾರಕ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುತ್ತವೆ. ಬೆಣ್ಣೆ ಟೀ ಸೇವನೆಯಿಂದ ಮೆದುಳಿನ ಕ್ಷಮತೆ ಹೆಚ್ಚುತ್ತದೆ, ಏಕಾಗ್ರತೆ ಪಡೆಯಲು ಸಾಧ್ಯವಾಗುತ್ತದೆ.
ಅಧಿಕ ಕೊಲೆಸ್ಟ್ರಾಲ್ ಹೃದಯದ ಆರೋಗ್ಯಕ್ಕೆ ಕೆಟ್ಟದ್ದು ಹಾಗೂ ಕೊಲೆಸ್ಟ್ರಾಲ್ ಸಂಗ್ರಹ ಹೃದಯದ ಕಾಯಿಲೆಗಳಿಗೆ ಆಹ್ವಾನ ಎಂದು ನಮ್ಮೆಲ್ಲರಿಗೂ ಗೊತ್ತಿದೆ. ಬೆಣ್ಣೆ ಬೆರೆಸಿದ ಟೀಯಲ್ಲಿರುವ ಲಿನೋಲಿಕ್ ಆಮ್ಲ ಆರೋಗ್ಯಕ್ಕೆ ಸಹಕಾರಿ. ಟೀಗಳಲ್ಲಿ ಆ್ಯಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿವೆ. ಬೆಣ್ಣೆಯಲ್ಲಿ ಅಲ್ಪ ಪ್ರಮಾಣದ ಹಾಲಿನ ಪ್ರೋಟೀನ್ ಇದ್ದು ಇದು ಆ್ಯಂಟಿ ಆಕ್ಸಿಡೆಂಟುಗಳನ್ನು ದೇಹ ಹೀರಿಕೊಳ್ಳಲು ಯಾವುದೇ ಅಡ್ಡಿ ಉಂಟುಮಾಡುವುದಿಲ್ಲ.
ಇದನ್ನೂ ಓದಿ: Viral Video: ಉದ್ದಿನ ದೋಸೆ, ನೀರ್ ದೋಸೆಯೆಲ್ಲ ಹಳೇದಾಯ್ತು; ಫ್ರೂಟ್ ದೋಸೆ ಮಾಡೋದು ಹೇಗಂತ ಗೊತ್ತಾ?
Viral Video: ಬಿಸಿ ಎಣ್ಣೆಯೊಳಗೆ ಕೈ ಹಾಕಿ ಪಕೋಡ ಮಾಡಿದ ವ್ಯಾಪಾರಿ; ಶಾಕಿಂಗ್ ವಿಡಿಯೋ ಇಲ್ಲಿದೆ