ಸಾಂದರ್ಭಿಕ ಚಿತ್ರ
ಸಂಬಂಧಗಳು ಸದಾ ಸಿಹಿಯಾಗಿಯೇ ಇರಬೇಕೆಂದೇನಿಲ್ಲ. ಕೆಲವೊಮ್ಮೆ ಆತ್ಮೀಯರು ಪ್ರೀತಿ ತುಂಬಿದ ಮಾತುಗಳನ್ನಾಡಿದರೆ, ಇನ್ನು ಕೆಲವೊಮ್ಮೆ ಖಾರವಾದ ಮಾತುಗಳನ್ನಾಡಿ ಮನಸ್ಸಿಗೆ ನೋವು ಮಾಡುತ್ತಾರೆ. ವಾದ ವಿವಾದಗಳು ನಡೆದಾಗ ಆ ನೋವಿನಿಂದ ಹೊರಬರುವುದು ಕಷ್ಟವಾಗುತ್ತದೆ. ಇದೇ ವಿಚಾರವಾಗಿ ಟೆನ್ಶನ್ ಮಾಡಿಕೊಳ್ಳುತ್ತಾರೆ. ಈ ಕೆಲವು ಸಲಹೆಗಳನ್ನು ಪಾಲಿಸಿದರೆ ಸಂಬಂಧದಲ್ಲಿ ಉಂಟಾದ ಕಲಹಗಳಿಂದ ಚೇತರಿಸಿಕೊಳ್ಳಬಹುದು.
- ಮನಸ್ಸು ಹಗುರವಾಗುವಂತೆ ಅತ್ತು ಬಿಡಿ : ಆತ್ಮೀಯರ ಮಾತಿನಿಂದ ನೋವಾದಾಗ ಆ ಕಹಿ ನೋವನ್ನು ಹೊರಹಾಕಲು ಅತ್ಯುತ್ತಮವಾದ ಮಾರ್ಗವೆಂದರೆ ಅಳು. ಮನಸ್ಸು ಭಾರವೆನಿಸಿದ ಅನುಭವವಾದರೆ ಅತ್ತು ಹಗುರಾಗುವುದು ಉತ್ತಮ. ಇದರಿಂದ ಸ್ವಲ್ಪ ಆರಾಮದಾಯಕವೆನಿಸುತ್ತದೆ. ಅದಲ್ಲದೇ ಟೆನ್ಶನ್ ನಿಂದ ದೂರವಾಗಿ ನೋವಿನ ಭಾವನೆಯೂ ಕಡಿಮೆಯಾಗಿ ಮತ್ತೆ ಚೇತರಿಸಿಕೊಳ್ಳುವಂತೆ ಮಾಡುತ್ತದೆ.
- ಸ್ವಲ್ಪ ಹೊತ್ತು ನಿದ್ರಿಸಿ : ಸಂಬಂಧದಲ್ಲಿ ವಾದ ವಿವಾದಗಳಾದಾಗ ಮನಸ್ಸಿಗೆ ನೋವಾಗುವುದು ಸಹಜ. ಈ ವೇಳೆಯಲ್ಲಿ ಭಾವನಾತ್ಮಕ ಒತ್ತಡಕ್ಕೆ ಒಳಗಾಗುತ್ತಾರೆ. ಮನಸ್ಸು ಚೇತರಿಸಿಕೊಳ್ಳಲು ವಿಶ್ರಾಂತಿ ಪಡೆಯುವುದು ಅಗತ್ಯ. ಸ್ವಲ್ಪ ಹೊತ್ತು ಮಲಗುವುದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ, ಇದರಿಂದ ಸುಧಾರಿಸಿಕೊಳ್ಳಬಹುದು.
- ಸ್ನೇಹಿತರಿಗೆ ಕರೆ ಮಾತನಾಡಿ : ಸಂಗಾತಿಯ ಅಥವಾ ಆತ್ಮೀಯರ ಮಾತನ್ನು ಅರಗಿಸಿಕೊಳ್ಳುವುದು ಕಷ್ಟವಾಗಬಹುದು. ತನಗಾದ ನೋವನ್ನು ಯಾರಿಗಾದರೂ ಹೇಳಿಕೊಳ್ಳಬೇಕು ಎಂದು ಅನಿಸಬಹುದು. ಆ ತಕ್ಷಣವೇ ನಮ್ಮ ಮನಸ್ಸಿನ ಮಾತಿಗೆ ಕಿವಿಯಾಗುವ ತಮ್ಮನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಯೊಂದಿಗೆ ಈ ಬಗ್ಗೆ ಹಂಚಿಕೊಳ್ಳುವುದು ಸೂಕ್ತ. ಪರಿಸ್ಥಿತಿಯನ್ನು ಸುಗಮಗೊಳಿಸಿ ಕಾಡುವ ಒಂಟಿತನವು ದೂರವಾಗುತ್ತದೆ.
- ಇಷ್ಟವಾದ ಕೆಲಸದಲ್ಲಿ ಬ್ಯುಸಿಯಾಗಿ: ವಾದ ವಿವಾದಗಳಾದಾಗ ಅದರ ಬಗ್ಗೆಯೇ ಯೋಚನೆ ಮಾಡುತ್ತಾ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದಕ್ಕಿಂತ ತಮಗಿಷ್ಟದ ಕೆಲಸವಾದ ಪುಸ್ತಕ ಓದುವುದು, ಚಿತ್ರ ಬಿಡಿಸುವುದು, ಹಾಡು ಕೇಳುವುದು ಹೀಗೆ ಇನ್ನಿತ್ತರ ಕೆಲಸದಲ್ಲಿ ಬ್ಯುಸಿಯಾಗುವುದರಿಂದ ಮನಸ್ಸು ಸ್ವಲ್ಪ ರಿಲ್ಯಾಕ್ಸ್ ಆಗುತ್ತದೆ.
- ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ : ಆತ್ಮೀಯರು ಅಥವಾ ಸಂಗಾತಿಯೊಂದಿಗೆ ವಾದ ವಿವಾದಗಳಾದಾಗ ಇದು ಅಗತ್ಯವಿತ್ತೆ ಎನ್ನುವುದನ್ನು ಒಮ್ಮೆ ಪ್ರಶ್ನೆ ಮಾಡಿಕೊಳ್ಳುವುದು ಒಳ್ಳೆಯದು. ಅದಲ್ಲದೇ, ಚುಚ್ಚು ಮಾತಿನಿಂದ ನೋವಾಗಿದ್ದರೆ ಆ ನೋವಿನಿಂದ ಹೊರಬರುವುದು ಹೇಗೆ ಎನ್ನುವುದನ್ನು ಪ್ರಶ್ನಿಸಿಕೊಳ್ಳಿ. ಈ ಮೂಲಕ ನಿಮ್ಮ ಬಗ್ಗೆ ನೀವು ಸ್ವಯಂ ಕಾಳಜಿ ವಹಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ