ಯಾವಾಗಲೂ ಮನಸ್ಸು ಮತ್ತು ದೇಹವನ್ನು ಆರಾಮವಾಗಿ ಮತ್ತು ಶಾಂತವಾಗಿರಿಸಿಕೊಳ್ಳುವುದು ಮುಖ್ಯ. ಮನಸ್ಸು ಶಾಂತ ರೀತಿಯಲ್ಲಿದ್ದರೆ, ನಾವು ನಮ್ಮ ಕೆಲಸಕಾರ್ಯಗಳನ್ನು ಉತ್ತಮ ರೀತಿಯಲ್ಲಿ ಮತ್ತು ತ್ವರಿತವಾಗಿ ಮಾಡಬಹುದು. ಹಾಗೂ ಮನಸ್ಸು ಶಾಂತವಾಗಿದ್ದರೆ ಜಡತ್ವವೂ ದೂರವಾಗುತ್ತದೆ. ಇಂದಿನ ಒತ್ತಡದ ಜೀವನಶೈಲಿಯಲ್ಲಿ ನಿಮ್ಮ ಮನಸ್ಸನ್ನು ವಿಶ್ರಾಂತಿ ಮಾಡಲು ಇಲ್ಲಿವೆ ಕೆಲವೊಂದು ಸಲಹೆಗಳು.
ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು: ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿನ ಚಿಂತೆಯನ್ನು ದೂರಮಾಡಿ, ಆನಂದದಿಂದಿರಲು ಉತ್ತಮ ಮಾರ್ಗವಾಗಿದೆ. ಅದು ಒಟ್ಟಿಗೆ ಊಟ ಮಾಡುವುದಾಗಲಿ ಅಥವಾ ಸ್ವಲ್ಪ ಸಮಯಗಳ ಕಾಲ ಫೋನ್‌ನಲ್ಲಿ ಮಾತನಾಡುವುದಾಗಲಿ, ಮೆಸೆಜ್ ಮಾಡುವುದಾಗಲಿ ಈ ರೀತಿಯಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುತ್ತಾ, ಕಷ್ಟಸುಖ ಮಾತನಾಡಿಕೊಳ್ಳುವ ಮೂಲಕ ನಿಮ್ಮ ಮನಸ್ಸಿಗೆ ವಿಶ್ರಾಂತಿಯನ್ನು ಪಡೆದುಕೊಳ್ಳಬಹುದು.
ವ್ಯಾಯಾಮ: ದೈಹಿಕ ಚಟುವಟಿಕೆಯು ಒತ್ತಡವನ್ನು ನಿವಾರಿಸಲು ಮತ್ತು ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಉತ್ತಮ ಮಾರ್ಗವಾಗಿದೆ. ಪ್ರಕೃತಿಯ ಮಧ್ಯೆ ಸ್ವಲ್ಪ ಹೊತ್ತು ನಡೆಯುವುದು ಅಥವಾ ಇತರ ವ್ಯಾಯಾಮಗಳು ನಿಮ್ಮ ಮನಸ್ಸನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಓದುವುದು: ದೈನಂದಿನ ಜೀವನದ ಒತ್ತಡವನ್ನು ಕಡಿಮೆ ಮಾಡಲು ಪುಸ್ತಕಗಳನ್ನು ಓದುವುದು ಒಂದು ಉತ್ತಮ ಮಾರ್ಗವಾಗಿದೆ. ಕಾದಂಬರಿ, ಕಥೆ, ನಿಯತಕಾಲಿಕೆಗಳು ಹೀಗೆ ಯಾವುದೇ ಪುಸ್ತಕಗಳನ್ನು ಓದುವ ಮೂಲಕ ಒತ್ತಡವನ್ನು ಮರೆತು ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬಹುದು.
ಸಂಗೀತವನ್ನು ಆಲಿಸುವುದು: ಸಂಗೀತವು ನಮ್ಮ ಮನಸ್ಥಿತಿ ಮತ್ತು ಭಾವನೆಗಳ ಮೇಲೆ ಪ್ರಬಲ ಪರಿಣಾಮವನ್ನು ಬೀರುತ್ತದೆ. ಹಿತವಾದ ಸಂಗೀತ ಕೇಳುವ ಮೂಲಕ ನಮ್ಮ ಆತಂಕವನ್ನು ಕಡಿಮೆ ಮಾಡಬಹುದು. ಮತ್ತು ಸಂಗೀತವು ವಿಶ್ರಾಂತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಧ್ಯಾನ: ಮನಸ್ಸನ್ನು ಶಾಂತಗೊಳಿಸಲು ಮತ್ತು ಒತ್ತಡವನ್ನು ನಿವಾರಿಸಲು ಧ್ಯಾನವು ಉತ್ತಮ ಮಾರ್ಗವಾಗಿದೆ. ಶಾಂತವಾದ ಸ್ಥಳದಲ್ಲಿ ಕುಳಿತು ಕಣ್ಣುಗಳನ್ನು ಮುಚ್ಚಿ, ನಿಧಾನವಾಗಿ ಉಸಿರಾಟ ಮಾಡುತ್ತಾ ಧ್ಯಾನ ಮಾಡುವ ಮೂಲಕ ನಿಮ್ಮ ಮನಸ್ಸಿನ ಭಾರ ಹಾಗೂ ಚಿಂತೆಗಳನ್ನು ತೊಡೆದುಹಾಕಬಹುದು.