Healthy Cake Recipe: ಮೈದಾ, ಸಕ್ಕರೆ ಬಳಸದೆ ತಯಾರಿಸಿ ಆರೋಗ್ಯಕರ ಕೇಕ್
ನೀವು ಡಯೆಟ್‌ನಲ್ಲಿದ್ದಾಗ ಕಟ್ಟುನಿಟ್ಟಾದ ಆಹಾರ ಕ್ರಮವನ್ನು ಪಾಲಿಸಬೇಕಾಗುತ್ತದೆ. ಆದರೆ ಆ ಸಮಯದಲ್ಲಿ ಏನಾದರೂ ಕೇಕ್ ತಿನ್ನಬೇಕೆಂಬ ಬಯಕೆ ಆದಾಗ, ಈ ಆರೋಗ್ಯಕರ ಮೊಟ್ಟೆರಹಿತ ಕೇಕ್‌ನ್ನು ತಯಾರಿಸಿ. ಇದು ನಿಮ್ಮ ಡಯೆಟ್ ಆಹಾರಕ್ಕೂ ತುಂಬಾ ಒಳ್ಳೆಯದು.
ಕೇಕ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಹೆಚ್ಚಿನ ಜನರು ಕೇಕ್‌ನ್ನು ಇಷ್ಟಪಟ್ಟು ತಿನ್ನುತ್ತಾರೆ. ಇನ್ನು ಕೆಲವರು ಕೇಕ್ ತಿನ್ನಬೇಕೆಂಬ ಮನಸ್ಸಿದ್ದರೂ ತಿನ್ನಲ್ಲ. ಯಾಕೆಂದರೆ ಒಂದಾ ಅವರು ಡಯೆಟ್‌ನಲ್ಲಿರುತ್ತಾರೆ. ಇಲ್ಲ ಅಂದರೆ ಕೇಕ್‌ನಲ್ಲಿ ಹೆಚ್ಚು ಮೈದಾ, ಸಕ್ಕರೆ, ಇರುತ್ತೆ ಎಂಬ ಕಾರಣದಿಂದ ಕೇಕ್ ಸೇವಿಸಲು ಹಿಂದೇಟು ಹಾಕುತ್ತಾರೆ. ಇಂತಹ ಕೇಕ್‌ಗಳು ತೂಕವನ್ನು ಹೆಚ್ಚು ಮಾಡುವುದರ ಜೊತೆಗೆ ಒಟ್ಟಾರೆ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ಹಾಗೂ ಅತಿಯಾದ ಸಿಹಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇಂದು ನಾವು ಮೈದಾ, ಸಕ್ಕರೆ ಹಾಗೂ ಮೊಟ್ಟೆ ರಹಿತ ಆರೋಗ್ಯಕರ ಕೇಕ್‌ನ ಪಾಕ ವಿಧಾನದ ಬಗ್ಗೆ ತಿಳಿಸಿಕೊಡುತ್ತೇವೆ.
ಇದರಲ್ಲಿ ಮೊಟ್ಟೆಯನ್ನು ಸೇರಿಸದ ಕಾರಣ ಸಸ್ಯಾಹಾರಿಗಳೂ ಕೂಡಾ ಇದನ್ನು ಆರಾಮವಾಗಿ ಮಾಡಿಕೊಂಡು ತಿನ್ನಬಹುದು. ಫುಡ್ ವ್ಲಾಗರ್ ಅನನ್ಯಾ ಬ್ಯಾನರ್ಜಿ ಅವರು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಈ ಕೇಕ್ ರೆಸಿಪಿಯನ್ನು ಹಂಚಿಕೊಂಡಿದ್ದಾರೆ. ಕೇಕ್‌ಗೆ ಸಿಹಿಯನ್ನು ಸೇರಿಸಲು ಸಕ್ಕರೆಯ ಬದಲಿಗೆ ಬೆಲ್ಲವನ್ನು ಬಳಸಿದ್ದಾರೆ. ಅಲ್ಲದೆ ಈ ಕೇಕ್ ತಯಾರಿಸುವುದು ತುಂಬಾ ಸುಲಭ.
ಇದನ್ನೂ ಓದಿ: Mug Cake Recipe: ಕೇವಲ 2 ನಿಮಿಷಗಳಲ್ಲಿ ಚಾಕೊಲೇಟ್ ಮಗ್ ಕೇಕ್ ತಯಾರಿಸಿ
ಸಕ್ಕರೆ ಮತ್ತು ಮೈದಾ ಇಲ್ಲದೆ ಆರೋಗ್ಯಕರ ಕೇಕ್ ಮಾಡುವುದು ಹೇಗೆ?:
ಒಂದು ದೊಡ್ಡ ಬೌಲ್ ತೆಗೆದುಕೊಂಡು ಅದಕ್ಕೆ ಮೊಸರು, ಬೇಕಿಂಗ್ ಪೌಡರ್ ಮತ್ತು ಬೇಕಿಂಗ್ ಸೋಡಾವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮತ್ತು ಮೊಸರು ಉಬ್ಬಿ ನೊರೆ ಬರರುವವರೆಗೂ ಗಮನಿಸಿ. ನಂತರ ಒಂದು ಮಿಕ್ಸಿ ಜಾರ್‌ಗೆ ಬೆಲ್ಲ ಮತ್ತು ಎಣ್ಣೆಯನ್ನು ಸೇರಿಸಿ ಅದನ್ನು ರುಬ್ಬಿಕೊಳ್ಳಿ. ನಂತರ ಇದನ್ನು ಮೊಸರು ಮಿಶ್ರಣಕ್ಕೆ ಸೇರಿಸಿ, ಜೊತೆಗೆ ಹಾಲು ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಗೋಧಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇಟ್ಟುಕೊಳ್ಳಿ. ಈಗ ಕೇಕ್ ಟಿನ್‌ನಲ್ಲಿ ಬಟರ್ ಪೇಪರ್ ಇಟ್ಟು, ಕೇಕ್ ಮಿಶ್ರಣವನ್ನು ಅದಕ್ಕೆ ವರ್ಗಾಯಿಸಿಕೊಳ್ಳಿ. ನಂತರ ಅದರ ಮೇಲೆ ಸ್ವಲ್ಪ ಡ್ರೆಫ್ರೂಟ್ಸ್ ಮತ್ತು ನಟ್ಸ್ಗಳನ್ನು ಹರಡಿ. ಒಲೆಯಲ್ಲಿ ಬೇಯಿಸಿ. ಕೇಕ್ ಚೆನ್ನಾಗಿ ಕಂದು ಬಣ್ಣಕ್ಕೆ ತಿರುಗಿದ ಬಳಿಕ, ಈ ಮೃದುವಾದ ಕೇಕ್ ತಿನ್ನಲು ಸಿದ್ಧ.
Published On - 2:22 pm, Tue, 28 March 23