
ತಲೆಹೊಟ್ಟಿನ (Dandruff) ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಂಡುಬರುತ್ತದೆ. ಒಮ್ಮೆ ಈ ಸಮಸ್ಯೆ ಆರಂಭವಾದರೆ ಇದರಿಂದ ಮುಕ್ತಿ ಪಡೆಯುವುದಕ್ಕೆ ನಾನಾ ರೀತಿಯಲ್ಲಿ ಹರಸಾಹಸ ಪಡೆಬೇಕಾಗುತ್ತದೆ. ಎಷ್ಟೇ ರೀತಿಯ ಶಾಂಪೂಗಳನ್ನು ಬಳಸಿದರೂ ತಲೆಹೊಟ್ಟಿನ ಸಮಸ್ಯೆ ಕಡಿಮೆಯಾಗುವುದಿಲ್ಲ. ಮಾತ್ರವಲ್ಲ ತಲೆಹೊಟ್ಟು ನೆತ್ತಿಯ ಮೇಲೆ ತುರಿಕೆ ಮತ್ತು ಕಿರಿಕಿರಿಯನ್ನು ಉಂಟುಮಾಡುವುದರಿಂದ ಎಲ್ಲರ ಮುಂದೆ ಮುಜುಗುರ ಉಂಟಾಗುತ್ತದೆ. ಆದರೆ ನಾವು ಹೇಳುವ ಕೆಲವು ನೈಸರ್ಗಿಕ ಸಲಹೆಗಳನ್ನು ಪಾಲಿಸುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಮಾತ್ರವಲ್ಲ ಕೆಲವೇ ಕೆಲವು ದಿನಗಳಲ್ಲಿ ನಿಮಗೆ ಒಳ್ಳೆಯ ಫಲಿತಾಂಶ ಕೂಡ ಸಿಗುತ್ತದೆ. ಶಾಂಪೂ (shampoo), ಸೀರಮ್, ಕ್ರೀಮ್ ಗಳಿಗೆ ಹಣ ಖರ್ಚು ಮಾಡುವ ಬದಲು ಮನೆಯಲ್ಲಿಯೇ ಸಿಗುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ತಲೆಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಬಹುದು. ಹಾಗಾದರೆ, ಆ ಸಲಹೆಗಳು ಯಾವುವು? ಅವು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ತೆಂಗಿನ ಎಣ್ಣೆ ಇದ್ದೆ ಇರುತ್ತದೆ ಇದನ್ನು ನಿಂಬೆ ರಸದೊಂದಿಗೆ ಬೆರೆಸಿ ನಿಮ್ಮ ನೆತ್ತಿಗೆ ಮಸಾಜ್ ಮಾಡಿ. ಬಳಿಕ 20 ನಿಮಿಷ ಬಿಟ್ಟು ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವವರ ಮನೆಯಲ್ಲಿ ಅಲೋವೆರಾ ಗಿಡ ಇದ್ದೆ ಇರುತ್ತದೆ. ಈ ಸಸ್ಯದಲ್ಲಿ ಕಂಡು ಬರುವ ಔಷಧೀಯ ಗುಣಗಳು ಸೌಂದರ್ಯ ವರ್ಧಕಗಳಲ್ಲಿ ಮಾತ್ರವಲ್ಲದೆ ಅಡುಗೆ ಮನೆಯಲ್ಲಿನ ಸಣ್ಣಪುಟ್ಟ ಗಾಯಗಳಿಗೂ ಪರಿಣಾಮಕಾರಿಯಾಗಿ ಉಪಯೋಗಕ್ಕೆ ಬರುತ್ತದೆ. ಮಾತ್ರವಲ್ಲ ತಲೆಹೊಟ್ಟಿನ ಸಮಸ್ಯೆಗೂ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದನ್ನು ತಲೆಗೆ ಹಚ್ಚಿ ಒಣಗಿದ ಮೇಲೆ ತಣ್ಣೀರಿನಿಂದ ತೊಳೆದುಕೊಳ್ಳುವುದರಿಂದ ತಲೆಹೊಟ್ಟಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
ನೀವು ಸರಳವಾಗಿ ಆಪಲ್ ಸೈಡರ್ ವಿನೆಗರ್ ಅನ್ನು ನೀರಿನೊಂದಿಗೆ ಸಮಾನ ಪ್ರಮಾಣದಲ್ಲಿ ಬೆರೆಸಿ ಶಾಂಪೂ ಮಾಡಿಕೊಳ್ಳಬಹುದು. ಬಳಿಕ ಇದನ್ನು ನೆತ್ತಿಗೆ ಹೆಚ್ಚಿ 15 ನಿಮಿಷಗಳ ಕಾಲ ಬಿಟ್ಟು ತಲೆಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬಹುದು. ಇದು ಪಿಹೆಚ್ ಅನ್ನು ಸಮತೋಲನಗೊಳಿಸಲು ಮತ್ತು ತಲೆಹೊಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೆನೆಸಿ, ಬೆಳಿಗ್ಗೆ ಪೇಸ್ಟ್ ಮಾಡಿ, ನೆತ್ತಿಗೆ ಹಚ್ಚಿ. 30 ನಿಮಿಷಗಳ ನಂತರ, ಕೂದಲನ್ನು ತೊಳೆದರೆ, ತುರಿಕೆ ಮತ್ತು ತಲೆಹೊಟ್ಟು ಕಡಿಮೆಯಾಗುತ್ತದೆ.
ಇದನ್ನೂ ಓದಿ: ಪ್ರತಿದಿನ ಈ ಒಂದು ಬೀಜವನ್ನು ತಿಂದ್ರೆ ಸಾಕು ಕೂದಲು ಉದುರುವುದು ನಿಲ್ಲುತ್ತೆ ನೋಡಿ!
ನೀವು ಬಳಸುವ ಶಾಂಪೂಗೆ ಕೆಲವು ಹನಿ ಟೀ ಟ್ರೀ ಎಣ್ಣೆಯನ್ನು ಸೇರಿಸಿ. ಇದು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದೆ. ಇದು ನೈಸರ್ಗಿಕವಾಗಿ ತಲೆಹೊಟ್ಟು ನಿವಾರಣೆಗೆ ಸಹಾಯ ಮಾಡುತ್ತದೆ ಮತ್ತು ನೆತ್ತಿಯನ್ನು ಸ್ವಚ್ಛವಾಗಿರಿಸಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ