Encephalartos woodii : ಈ ಒಂಟಿಮರಕ್ಕೆ ಹೆಣ್ಣು ಸಂಗಾತಿಯೇ ಇಲ್ವಂತೆ, ಹುಡುಕಾಟದತ್ತ ವಿಜ್ಞಾನಿಗಳು

ಪ್ರಕೃತಿಯಲ್ಲಿರುವ ಕೆಲವು ಗಿಡ ಮರಗಳು, ಸಸ್ಯಸಂಪತ್ತು ಹಾಗೂ ಪ್ರಾಣಿ ಪ್ರಬೇಧಗಳು ಕಣ್ಮರೆಯತ್ತ ಸಾಗುತ್ತಿದೆ. ಈಗಾಗಲೇ ಲೆಕ್ಕವಿಲ್ಲದಷ್ಟು ಸಂಪತ್ತುಭರಿತವಾದ ಸಸ್ಯ ಸಂಪತ್ತು ಅಳಿವಿನಂಚಿಗೆ ತಲುಪಿದೆ. ಅಂತಹ ಮರಗಳ ಸಾಲಿಗೆ ಇ ವುಡಿ ಅಥವಾ ಎನ್ಸೆಫಲಾರ್ಟೊಸ್ ವುಡಿ ಸಸ್ಯಪ್ರಬೇಧವು ಸೇರಿಕೊಂಡಿದೆ. ಇದೀಗ ವಿಜ್ಞಾನಿಗಳು ಈ ಮರಕ್ಕೆ ಹೆಣ್ಣು ಸಂಗಾತಿಯನ್ನು ಹುಡುಕುವ ಕೆಲಸದಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.

Encephalartos woodii : ಈ ಒಂಟಿಮರಕ್ಕೆ ಹೆಣ್ಣು ಸಂಗಾತಿಯೇ ಇಲ್ವಂತೆ, ಹುಡುಕಾಟದತ್ತ ವಿಜ್ಞಾನಿಗಳು
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Jun 14, 2024 | 4:12 PM

ಭೂಮಿಯ ಮೇಲಿರುವ ಅದೆಷ್ಟೋ ಜೀವಿಗಳು ಹಾಗೂ ಸಸ್ಯಸಂಪತ್ತು ಅಳಿವಿನಂಚಿಗೆ ತಲುಪಿದೆ. ಹೀಗೆ ಆದರೆ ಮುಂದಿನ ಪೀಳಿಗೆಯವರು ಕಣ್ಮರೆಯಾಗುತ್ತಿರುವ ಪ್ರಾಣಿ ಪ್ರಬೇಧಗಳು ಹಾಗೂ ವಿವಿಧ ರೀತಿಯ ಸಸ್ಯಸಂಪತ್ತನ್ನು ಫೋಟೋದಲ್ಲಿ ನೋಡುವ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಇದೀಗ ಪ್ರಪಂಚದಲ್ಲಿರುವ ಈ ಮರವೊಂದು ಪತ್ತೆಯಾಗಿದೆ. ಇದರ ಹೆಸರೇ ಇ ವುಡಿ ಅಥವಾ ಎನ್ಸೆಫಲಾರ್ಟೊಸ್ ವುಡಿ.

ದೈತ್ಯಕಾರದ ಡೈನೋಸಾರ್‌ಗಳು ಭೂಮಿಗೆ ಕಾಲಿಡುವ ಮೊದಲೇ ಈ ಮರಗಳು ಅಸ್ತಿತ್ವದ್ದವು ಎನ್ನಲಾಗಿದೆ. ಆದರೆ ಈ ಜಾತಿಯ ಮರವನ್ನು ಮೊದಲು 1895 ರಲ್ಲಿ ದಕ್ಷಿಣ ಆಫ್ರಿಕಾದ ಪೂರ್ವ ಕರಾವಳಿಯ ಸಮೀಪವಿರುವ ನೋಯ್ ಕಾಡಿನಲ್ಲಿ ಪತ್ತೆ ಹಚ್ಚಲಾಯಿತು. ಇದೀಗ ಈ ಮರವು ಅಳಿವಿನಂಚಿನಲ್ಲಿದ್ದು, ಪ್ರಪಂಚದಲ್ಲಿರುವ ಏಕಾಂಗಿ ಮರ ಇದು ಎನ್ನಲಾಗಿದೆ.

ಈ ಪ್ರಬೇಧವನ್ನು ಉಳಿಸುವ ಕಾರಣಕ್ಕೆ ಈ ಮರಕ್ಕೆ ಹೆಣ್ಣು ಸಂಗಾತಿಯ ಹುಡುಕಾಟದಲ್ಲಿ ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ಹೀಗಾಗಿ ವಿಜ್ಞಾನಿಗಳು ಕೃತಕ ಬುದ್ಧಿಮತ್ತೆಯ ನೆರವಿನೊಂದಿಗೆ ಮರಕ್ಕೆ ಹೆಣ್ಣು ಸಂಗಾತಿಯ ಹುಡುಕಾಟದಲ್ಲಿದ್ದಾರೆ. ಒಂದು ವೇಳೆ ಈ ಮರಕ್ಕೆ ಸಂಗಾತಿಯಾಗಿ ಹೆಣ್ಣು ಮರ ಸಿಕ್ಕರೆ ಈ ಪ್ರಬೇಧವನ್ನು ಉಳಿಸಬಹುದಾಗಿದೆ. ಇಂಗ್ಲೆಂಡಿನ ಸೌತಾಂಪ್ಟನ್ ವಿಶ್ವವಿದ್ಯಾಲಯದ ನೇತೃತ್ವದ ಸಂಶೋಧನಾ ಯೋಜನೆಯ ಭಾಗವಾಗಿ ವಿಜ್ಞಾನಿಗಳು ದಕ್ಷಿಣ ಆಫ್ರಿಕಾದ ಸಾವಿರಾರು ಎಕರೆ ಅರಣ್ಯದಲ್ಲಿ ಹೆಣ್ಣು ಸಸ್ಯದ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ತುಂಬಾ ದಪ್ಪ ಇದ್ದೀರಾ? ತೆಳ್ಳಗಾಗಲು ಈ ಆಹಾರಗಳನ್ನು ದಿನನಿತ್ಯ ಸೇವಿಸಿ

ಈಗಾಗಲೇ ಈ ಯೋಜನೆಯ ನೇತೃತ್ವದ ವಹಿಸಿಕೊಂಡಿರುವ ಸೌತಾಂಪ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕಿ ಡಾ ಲಾರಾ ಸಿಂಟಿ ಅವರು, ‘ವಿಜ್ಞಾನಿಗಳ ತಂಡ ಈಗ ಕೃತಕ ಬುದ್ಧಿಮತ್ತೆ ಹೊಂದಿರುವ ಡ್ರೋನ್ ಕ್ಯಾಮೆರಾಗಳನ್ನು ಬಳಸಿಕೊಂಡು ಹೆಣ್ಣು ಮರವನ್ನು ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಈ ಅರಣ್ಯದಲ್ಲಿ ಎಲ್ಲೋ ಒಂದು ಹೆಣ್ಣು ಮರ ಇರಬಹುದು ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿ ನಾವು ಹುಡುಕಾಟ ನಡೆಸುತ್ತಿದ್ದೇವೆ. ಒಂದು ವೇಳೆ ಒಂದು ಹೆಣ್ಣು ಮರ ಸಿಕ್ಕರೆ ಇದರ ಪ್ರಬೇಧವನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: