ದೇಹದಲ್ಲಿರುವ ಪ್ರತಿಯೊಂದು ಅಂಗವು ಕಾರ್ಯ ನಿರ್ವಹಣೆಯಾಗಬೇಕಾದರೆ ರಕ್ತ ಪರಿಚಲನೆ ಸರಿಯಾಗಿ ಆಗಬೇಕು. ಕೆಲವೊಮ್ಮೆ ರಕ್ತ ಪರಿಚಲನೆಯಾಗದೇ ಇದ್ದಾಗ ನೋವು, ಸ್ನಾಯು ಸೆಳೆತ, ಕೈ ಕಾಲುಗಳು ಮರಗಟ್ಟುವಿಕೆ, ಪಾದಗಳಲ್ಲಿ ಜುಮ್ಮ್ ಎನ್ನುವುದು ಹೀಗೆ ನಾನಾ ರೀತಿಯ ಅನುಭವವಾಗುತ್ತದೆ. ಈ ಜೋಮು ಹಿಡಿಯುವ ಅಥವಾ ಮರಗಟ್ಟುವ ಅನುಭವವು ಕೆಲವೇ ನಿಮಿಷಗಳು ಆಗಿದ್ದರೂ ಆ ಕ್ಷಣವು ಕಿರಿಕಿರಿಯೆನಿಸುತ್ತದೆ. ನರಗಳ ಮೇಲೆ ಒತ್ತಡ ಬಿದ್ದಾಗ, ಕುಳಿತು ಕೊಳ್ಳುವ ಭಂಗಿಯೂ ಸರಿಯಿಲ್ಲದಿದ್ದಾಗ ಹೀಗಾಗುತ್ತದೆ. ಈ ವೇಳೆಯಲ್ಲಿ ಕೈ ಕಾಲುಗಳನ್ನು ಮುಟ್ಟಿದರೂ ಸ್ಪರ್ಶದ ಅನುಭವವಾಗುವುದೇ ಇಲ್ಲ, ಅಷ್ಟು ಭಾಗವು ಮರಗಟ್ಟಿದಂತಾಗಿರುತ್ತದೆ. ಸ್ವಲ್ಪ ಸಮಯ ಬಳಿಕ ಕೈ ಕಾಲುಗಳು ಯಥಾಸ್ಥಿತಿಗೆ ಮರಳುತ್ತದೆ.
ಕೈ ಕಾಲುಗಳ ಮರಗಟ್ಟುವಿಕೆಗೆ ಸರಳ ಮನೆ ಮದ್ದುಗಳು
- ಒಂದು ಚಮಚ ಚಕ್ಕೆಯ ಪುಡಿ ಹಾಗೂ ಒಂದು ಚಮಚ ಜೇನುತುಪ್ಪ ಇವೆರಡನ್ನು ಬೆರೆಸಿ ಸೇವಿಸುವುದು ಈ ಸಮಸ್ಯೆಗೆ ಉತ್ತಮವಾದ ಔಷಧಿಯಾಗಿದೆ.
- ವಿಟಮಿನ್ ಬಿ, ವಿಟಮಿನ್ ಬಿ6, ವಿಟಮಿನ್ ಬಿ12 ಹೇರಳವಾಗಿರುವ ಆಹಾರಗಳ ಸೇವನೆಯಿಂದ ಈ ಸಮಸ್ಯೆಯು ಬಾರದಂತೆ ನೋಡಿಕೊಳ್ಳಬಹುದು.
- ಒಂದು ಬಕೆಟ್ ಬಿಸಿನೀರಿಗೆ ಎರಡು ಚಮಚ ಉಪ್ಪು ಹಾಕಿ ಕೆಲವು ನಿಮಿಷ ಕೈ ಕಾಲುಗಳನ್ನು ಇಟ್ಟರೆ ಜುಮ್ಮ್ ಎನ್ನುವ ಅನುಭವವು ದೂರವಾಗುತ್ತದೆ.
- ವಾರಕ್ಕೊಮ್ಮೆ ಕೈ ಕಾಲುಗಳಿಗೆ ಎಳ್ಳೆಣ್ಣೆಯಿಂದ ನಿಧಾನವಾಗಿ ಮಸಾಜ್ ಮಾಡಿದರೆ ರಕ್ತ ಪರಿಚಲನೆ ಸರಿಯಾಗಿ ಜೋಮು ಹಿಡಿಯುವುದಿಲ್ಲ.
- ಬೆಳಗ್ಗೆ ಒಂದು ಲೋಟ ಹಾಲಿಗೆ ಒಂದು ಚಮಚ ಅರಿಶಿನ ಹಾಕಿ ಕುಡಿಯುವುದು ಕೂಡ ಪರಿಣಾಮಕಾರಿಯಾಗಿದೆ.
- ಅಶ್ವತ್ಥ ಮರದ ಮೂರು ನಾಲ್ಕು ತಾಜಾ ಎಲೆಗಳನ್ನು ಸಾಸಿವೆ ಎಣ್ಣೆಯಲ್ಲಿ ಬಿಸಿ ಮಾಡಿ, ಈ ಎಣ್ಣೆಯಿಂದ ಕೈ ಕಾಲುಗಳನ್ನು ಮಸಾಜ್ ಮಾಡುವುದರಿಂದ ಮರಗಟ್ಟುವಿಕೆ ಸಮಸ್ಯೆಯು ಶಮನವಾಗುತ್ತದೆ.
- ಬೆಳಗ್ಗೆ ಸ್ವಲ್ಪ ಪ್ರಮಾಣದಲ್ಲಿ ಒಣ ಶುಂಠಿ, ಒಂದೆರಡು ಲವಂಗ ಹಾಗೂ ಬೆಳ್ಳುಳ್ಳಿಯನ್ನು ಅಗಿದು ತಿನ್ನುವುದರಿಂದ ಈ ಸಮಸ್ಯೆಯನ್ನು ದೂರವಾಗಿಸಬಹುದು.
- ರಾತ್ರಿ ಮಲಗುವುದಕ್ಕೂ ಮೊದಲು ದೇಸಿ ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ಪಾದದ ಅಡಿಭಾಗಕ್ಕೆ ಹಾಗೂ ಕೈಗೆ ಮಸಾಜ್ ಮಾಡುವುದು ಪರಿಣಾಮಕಾರಿಯಾಗಿದೆ.
ಈ ಮನೆ ಮದ್ದನ್ನೊಮ್ಮೆ ತಯಾರಿಸುವ ಮುನ್ನ ತಜ್ಞರ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ