Senior Living Community : ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ ಸುಖೀಜೀವನ ನಿಮ್ಮದಾಗಿಸಿಕೊಳ್ಳಿ

| Updated By: ಶ್ರೀದೇವಿ ಕಳಸದ

Updated on: Jul 22, 2021 | 8:45 PM

Retirement Homes in Bengaluru : ನಾವೊಂದು ದಡ ನಮ್ಮ ಮಕ್ಕಳೊಂದು ದಡ ಎಂದು ಚಿಂತಿಸುವ ಕಾಲ ಇದಲ್ಲ. ಮಕ್ಕಳ ಸ್ವಾತಂತ್ರ್ಯ ಮಕ್ಕಳಿಗೆ, ನಮ್ಮ ಸ್ವಾತಂತ್ರ್ಯ ನಮಗೆ ಎನ್ನುವ ‘ಅರ್ಥಪೂರ್ಣ’ ಆಲೋಚನೆಗೆ ಇಂಬು ಕೊಡುವಂಥ ಆಧುನಿಕ ಕಾಲವಿದು; ಮಹಾನಗರಗಳಲ್ಲಿರುವ ಹಿರಿಯ ನಾಗರಿಕರ ವಸತಿ ಸಮುಚ್ಚಯಗಳು ಕೊರೊನಾ ಸಮಯದಲ್ಲಿಯೂ ವಿಶೇಷ ಗಮನ ಸೆಳೆಯುತ್ತಿರುವುದು ಹೀಗೆ...

Senior Living Community : ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ ಸುಖೀಜೀವನ ನಿಮ್ಮದಾಗಿಸಿಕೊಳ್ಳಿ
ಪ್ರೈಮಸ್ ಕಾರ್ನಿವಲ್ ನಲ್ಲಿ ಹಿರಿಯ ದಂಪತಿ
Follow us on

Senior Living Communities : ಅರವತ್ತರ ನಂತರವೂ ತಮ್ಮಿಚ್ಛೆಯಂತೆ ಬದುಕನ್ನು ಅರಳಿಸಿಕೊಳ್ಳಲು ಹೊಸ ಮಾರ್ಗೋಪಾಯಗಳೇನಿವೆ ಎಂಬ ಹುಡುಕಾಟದಲ್ಲಿ ಇಂದಿನ ಪೋಷಕರಿದ್ದಾರೆ. ಉದ್ಯೋಗಾವಕಾಶಗಳು ಕೈಬೀಸಿ ಕರೆದತ್ತ ಹಾರಿಹೋಗಿರುವ ಅವರ ಮಕ್ಕಳು, ತಮ್ಮ ಪೋಷಕರು ಹೆಚ್ಚು ಸುರಕ್ಷಿತವಾಗಿರಲು ಏನು ವ್ಯವಸ್ಥೆ ಮಾಡಬೇಕು ಎಂಬ ಆಲೋಚನೆಯಲ್ಲಿದ್ದಾರೆ. ಪರಸ್ಪರರ ಈ ನಿರೀಕ್ಷೆಗೆ ಪೂರಕವಾಗಿ ಮಹಾನಗರಗಳಲ್ಲಿ ಪರ್ಯಾಯ ವ್ಯವಸ್ಥೆಗಳು ಈಗಾಗಲೇ ಸೃಷ್ಟಿಯಾಗಿವೆ. ಮಹಾನಗರಗಳಲ್ಲಿ ತಲೆ ಎತ್ತಿರುವ ಹಿರಿಯ ನಾಗರಿಕರ ವಸತಿ ಸಮುಚ್ಚಯಗಳಲ್ಲಿ 24 ಗಂಟೆಗಳ ಕಾಲವೂ ಸಕಲ ಸೌಲಭ್ಯಗಳು ಲಭ್ಯವಿದ್ದು, ಸಮಾನ ಮನಸಿಗರೊಂದಿಗೆ ಉಲ್ಲಾಸದಿಂದ ಸಮಯ ಕಳೆಯಲು ಬೇಕಾದಂಥ ವಾತಾವರಣವೂ ನಿರ್ಮಾಣಗೊಳ್ಳುತ್ತಿದೆ. ಇಂಥದೊಂದು ಟ್ರೆಂಡ್ ಬೆಂಗಳೂರಿನಲ್ಲಿ ಹೆಚ್ಚುತ್ತಿದ್ದು, ಕೊರೊನಾದ ಸಂದರ್ಭದಲ್ಲಿ ಸೂಕ್ತ ನಿಭಾವಣೆ, ನಿರ್ವಹಣೆಯಿಂದಾಗಿ ಮತ್ತಷ್ಟು ಜನಪ್ರಿಯತೆಗೊಳ್ಳುತ್ತಿದೆ. ಇದಕ್ಕೆ ಸಾಕ್ಷಿಯಂತಿವೆ ಕೆಲ ಸೀನಿಯರ್ ಲಿವಿಂಗ್ ಕಮ್ಯೂನಿಟಿಗಳು.         

*

ಕಳೆದ ಒಂದೂವರೆ ವರ್ಷದಿಂದ ಕೊವಿಡ್​ನಿಂದಾಗಿ ಸಾಮಾಜಿಕ ಅಂತರ, ಐಸೋಲೇಷನ್ ಎಲ್ಲವೂ ಪ್ರತಿಯೊಬ್ಬರ ಜೀವನ ಹಾಗೂ ಜೀವನಶೈಲಿಯನ್ನೇ ಬದಲಾಯಿಸಿಬಿಟ್ಟಿದೆ. ಅದರಲ್ಲೂ ಹಿರಿಯ ನಾಗರಿಕರ ಮೇಲೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ತುಂಬಾ ಪರಿಣಾಮ ಬೀರಿದೆ. ಎಷ್ಟೋ ಹಿರಿಯರಿಗೆ ಮನೆಗೆಲಸಕ್ಕೆ ಮತ್ತು ಆರೋಗ್ಯ ಮೇಲ್ವಿಚಾರಣೆಗೆ ಸಹಾಯಕರಿಲ್ಲದೆ ಸಂಕಷ್ಟ ಉಂಟಾಗಿದೆ. ಆದರೆ ಎಲ್ಲದಕ್ಕೂ ಪರ್ಯಾಯ ವ್ಯವಸ್ಥೆಯೆನ್ನುವುದು ಇದ್ದೇ ಇರುತ್ತದೆ. ನಮ್ಮ ಆಲೋಚನಾ ಶೈಲಿಗಳನ್ನು ಬದಲಾಯಿಸಿಕೊಂಡರೆ ಮತ್ತು ಕೆಲ ಬದಲಾವಣೆಗಳನ್ನು ಸ್ವೀಕರಿಸಿದರೆ ಬದುಕು ಹೆಚ್ಚು ಸುಗಮವಾಗಿರುತ್ತದೆ.  ಇದಕ್ಕೆ ನಿದರ್ಶನವೆಂಬಂತೆ ಸಾಕಷ್ಟು ಕಂಪೆನಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ.

ಬೆಂಗಳೂರಿನ ಕನಕಪುರ ರಸ್ತೆಯ ‘ಪ್ರೈಮಸ್ ಸೀನಿಯರ್ ಲಿವಿಂಗ್ ಕಮ್ಯುನಿಟಿ’ಯಲ್ಲಿ ಇತ್ತೀಚೆಗೆ ಮೂರು ದಿನಗಳ ದಿನಗಳ ‘ಪ್ರೈಮಸ್ ಕಾರ್ನಿವಲ್’ ಆಯೋಜಿಸಲಾಗಿತ್ತು. ಹಿರಿಯರನ್ನು ಮನೋರಂಜಿಸಲು, ವಿವಿಧ ಬ್ರೈನ್ ಟೀಸರ್ ಆಟಗಳು, ಕ್ವಿಝ್, ವರ್ಡ್ ಗೇಮ್ಸ್, ಟಾರ್ಗೆಟ್ ಗೇಮ್ಸ್, ತಂಬೋಲಾ ಹೀಗೆ ಹಲವಾರು ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲರೂ ಸಕ್ರಿಯವಾಗಿ ಪ್ರತಿಯೊಂದು ಆಟಗಳಲ್ಲಿ ಪಾಲ್ಗೊಂಡಿದ್ದರು. ಆಟವಾಡುತ್ತ ತಮ್ಮ ಬಾಲ್ಯ ಹಾಗೂ ಕಾಲೇಜು ದಿನಗಳನ್ನು ನೆನೆದು ತುಂಬಾ ಸಂತೋಷಪಟ್ಟರು. ಗೆದ್ದ ಪ್ರತಿ ಸ್ಪರ್ಧಿಗಳಿಗೂ ಬಹುಮಾನಗಳನ್ನೂ ವಿತರಿಸಿದ್ದರಿಂದ ಅವರಲ್ಲಿ ವಿಶೇಷ ಹುಮ್ಮಸ್ಸು ಮೊಳೆತಿತ್ತು. ಇದೆಲ್ಲವನ್ನೂ ನೋಡುವುದೇ ಒಂದು ಹಬ್ಬದಂತಿತ್ತು.

ಹಿರಿಯ ನಾಗರಿಕರೊಂದಿಗೆ ‘ಪ್ರೈಮಸ್ ಲೈಫ್​’ ವ್ಯವಸ್ಥಾಪಕ ನಿರ್ದೇಶಕ ಆದರ್ಶ ನರಹರಿ

‘ವಯಸ್ಸಾದವರಿಗೆ ಬೇಕಿರುವುದು ಪೋಷಣೆ, ಆತ್ಮೀಯತೆ, ಕಾಳಜಿ ಮತ್ತು ಆರಾಮದಾಯಕ ಪರಿಸರ. ಈ ಹಿನ್ನೆಲೆಯಲ್ಲಿ ವೃದ್ಧಾಪ್ಯ ಪ್ರಕ್ರಿಯೆಯನ್ನು ನಿಯಂತ್ರಣದಲ್ಲಿರಿಸಲು ಅವರಿಗೆ ಪೂರಕವಾದ ಚಟುವಟಿಕೆಗಳಲ್ಲಿ  ತೊಡಗಿಸಿ ಒಂಟಿತನ ಮತ್ತು ಇತರೇ ದೈಹಿಕ ಮಾನಸಿಕ ಸಮಸ್ಯೆಗಳು ಉಲ್ಬಣಿಸದಂತೆ ನೋಡಿಕೊಳ್ಳುವ ಉದ್ದೇಶ ನಮ್ಮದಾಗಿದೆ.’ ಹೀಗೆನ್ನುತ್ತಾರೆ ಪ್ರೈಮಸ್​ ಲೈಫ್​ಸ್ಪೇಸಸ್ ಪ್ರೈವೇಟ್ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕ ಆದರ್ಶ್ ನರಹರಿ.

ಕೊರೊನಾ ಸಂದರ್ಭದಲ್ಲಿ ಒಂಟಿಮನೆಗಳಲ್ಲಿ ವಾಸಿಸುವ ಹಿರಿಯನಾಗರಿಕರು ಮತ್ತು ಪರಊರು, ದೇಶಗಳಲ್ಲಿ ವಾಸಿಸುವ ಅವರ ಮಕ್ಕಳು ಪರಸ್ಪರ ಆತಂಕದಲ್ಲೇ ಜೀವನ ಕಳೆಯುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿ ಮನೆಗೆಲಸದಿಂದ ಹಿಡಿದು ಯಾವುದೇ ರೀತಿಯ ವೈದ್ಯಕೀಯ ಸೇವೆ, ಸೌಲಭ್ಯ, ಸಹಾಯಗಳು ಸೂಕ್ತ ಸಮಯಕ್ಕೆ ದೊರೆಯದೆ ಹೆಚ್ಚೆಚ್ಚು ಅವಘಡಗಳು ಸಂಭವಿಸುತ್ತಿವೆ. ಇದೆಲ್ಲದಕ್ಕೆ ಪರ್ಯಾಯವೆಂಬಂತಿವೆ ಹಿರಿಯ ನಾಗರಿಕ ಸಮುಚ್ಚಯಗಳು. ಇಲ್ಲಿ ವಾಸಿಸುತ್ತಿರುವ ಎಲ್ಲರೂ ನಿರಾತಂಕವಾಗಿ ಜೀವನ ಸಾಗಿಸುತ್ತಿದ್ದಾರೆ ಎನ್ನುವುದು ಗಮನಾರ್ಹ.

‘ಉಳಿದ ದಿನಗಳಂತೆ ಕೋವಿಡ್ ದಿನಗಳಲ್ಲಿಯೂ ಆರಾಮಾಗಿ ದಿನದ ಎಲ್ಲಾ ಚಟುವಟಿಕೆಗಳಲ್ಲಿ ಇವರು ತೊಡಗಿಕೊಂಡಿರುತ್ತಾರೆ. ಅವರವರ ಕುಟುಂಬದವರೊಂದಿಗೆ ಆನ್​ಲೈನ್​ ಮೂಲಕ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೂ ಇಲ್ಲಿದೆ. ಪೌಷ್ಟಿಕ ಆಹಾರ, ಯೋಗ, ಧ್ಯಾನ, ಫಿಸಿಯೋಥೆರಪಿ, ಸಂಗೀತ ಮತ್ತು ಕಲೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಕೊಂಡು ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳುವಂತಹ ವಾತಾವರಣ ಇಲ್ಲಿದೆ. 24 ಗಂಟೆಗಳ ಕಾಲ ವೈದ್ಯಕೀಯ ಸೌಲಭ್ಯವಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿಯೂ ಸೂಕ್ತ ಸೌಲಭ್ಯಕ್ಕೆ ಏರ್ಪಾಟು ಮಾಡಲಾಗುತ್ತದೆ’ ಎಂದು ವಿವರಿಸುತ್ತಾರೆ ಆದರ್ಶ್ ನರಹರಿ.

ಆಡೂ ಆಟ ಆಡೂ

ಸೌಲಭ್ಯವಿದ್ದರೂ ಮನಸಿನ ಆತಂಕ ಸಹಜ. ಇಲ್ಲಿರುವ ಹಿರಿಯ ನಾಗರಿಕರು ಕೋವಿಡ್​ನಿಂದಾಗಿ ಬಹಳ ಭಯಪಟ್ಟಿದ್ದರು. ‘ಮೊದಮೊದಲು ಆತಂಕವಾಗಿತ್ತು. ಅದರೆ, ಕೋವಿಡ್​ನಿಂದ ನಮಗೆ ಊಟೋಪಚಾರ ಅಥವಾ ಮನೆಗೆಲಸದ ವಿಷಯವಾಗಿ ಯಾವ ತೊಂದರೆಯೂ ಆಗಿಲ್ಲ. ವ್ಯಾಕ್ಸಿನೇಷನ್​ಗೆ ಕೂಡ ಇಲ್ಲಿಯೇ ವ್ಯವಸ್ಥೆ ಮಾಡಿದ್ದರು. ನಾವು ತುಂಬಾ ಸುರಕ್ಷಿತವಾಗಿದ್ದೇವೆ, ಎಲ್ಲವೂ ಸುಗಮವಾಗಿ ನಡೆಯುತ್ತಿದೆ’ ಎನ್ನುತ್ತಾರೆ ಈ ಕಮ್ಯೂನಿಟಿಯ ನಿವಾಸಿ ಅಂಜಲಿ ಕುಲಕರ್ಣಿ.

‘ಇಲ್ಲಿ ವಿವಿಧ ಅಭಿರುಚಿಯುಳ್ಳವರು ಇರುವುದರಿಂದ ಸಾಕಷ್ಟು ಸಕಾರಾತ್ಮಕ ಶಕ್ತಿ ನಿರ್ಮಾಣವಾಗಿದೆ. ಇಲ್ಲಿಗೆ ಬಂದಮೇಲೆ ನನ್ನ ಆಲೋಚನೆಗಳು ಬದಲಾಗಿವೆ. ವಿವಿಧ ಆಟ, ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಆರಂಭಿಸಿದಾಗಿನಿಂದ ಖುಷಿಯಲ್ಲಿ ತೇಲುತ್ತಿದ್ದೇನೆ’ ಎನ್ನುತ್ತಾರೆ ಆಸ್ಮಾ.

‘ನಾನು ಇಲ್ಲಿ ಬಂದಮೇಲೆ ನನ್ನ ಆಯಸ್ಸು 10 ವರ್ಷ ಜಾಸ್ತಿಯಾಗಿದೆ. ನಾನೀಗ ತುಂಬಾ ಚಟುವಟಿಕೆಯಿಂದ ಇದ್ದೇನೆ. ಫಿಸಿಯೋಥೆರಪಿ ಸೆಷನ್​ಗಳನ್ನು ತುಂಬಾ ಎಂಜಾಯ್ ಮಾಡುತ್ತೇನೆ’ ಎನ್ನುತ್ತಾರೆ ರಂಜಿತ್ ಲಿಲಾನಿ.

‘ನನ್ನ ಹೆಂಡತಿ ತೀರಿ ಹೋದಮೇಲೆ ನಾನು ಒಬ್ಬಂಟಿಯಾದೆ, ಖಿನ್ನತೆ ಶುರುವಾಯಿತು. ಆದರೆ ಹೀಗಿರುವುದು ನನಗೆ ಇಷ್ಟವಿರಲಿಲ್ಲ. ಗೆಳೆಯನ ಸಲಹೆಯಂತೆ ನಾನು ಇಲ್ಲಿ ಬಂದು ವರ್ಷದ ಮೇಲಾಯಿತು. ಬೇರೆ ಬೇರೆ ಊರು, ಪ್ರದೇಶಗಳಿಂದ ಗೆಳೆಯರು ಇಲ್ಲಿ ಸಿಕ್ಕಿದ್ದಾರೆ. ತುಂಬಾ ಖುಷಿಯಿದೆ ಇಲ್ಲಿ’ ಎನ್ನುತ್ತಾರೆ 81ರ ಸುಂದರ್ ರಾಜ್.

ಸಮಾನಮನಸಿಗರೊಂದಿಗೆ ಉಲ್ಲಾಸದೊಂದಿಗೆ

‘ಇಷ್ಟು ವರ್ಷಗಳೆಲ್ಲ ಒಳಗೂ ಹೊರಗೂ ಕಷ್ಟಪಟ್ಟು ದುಡಿದು ಸಾಕಾಗಿತ್ತು. ಹಾಗಾಗಿ ಅಡುಗೆಯಿಂದ ಹಿಡಿದು ಯಾವುದೇ ಮನೆಗೆಲಸದಲ್ಲಿ ತೊಡಗಿಕೊಳ್ಳದೆ ಆರಾಮಾಗಿ ವಿಶ್ರಾಂತ ಜೀವನವನ್ನು ಕಳೆಯಬೇಕು ಎಂದು ಕನಸು ಕಂಡಿದ್ದೆ. ಆ ಪ್ರಕಾರ ಹಿರಿಯ ನಾಗರಿಕರ ವಸತಿ ಸಮುಚ್ಚಯಗಳನ್ನು ಹುಡುಕಲು ಪ್ರಾರಂಭಿಸಿದೆ. ಆಗ ಬೆಂಗಳೂರಿನ ಕನಕಪುರದ ರಸ್ತೆಯಲ್ಲಿರುವ ಪ್ರೈಮಸ್ ಸೀನಿಯರ್ ಲಿವಿಂಗ್ ಹೋಮ್ಸ್ ಕಣ್ಣಿಗೆ ಬಿದ್ದಿತು. ನನ್ನ ಮನಸಿಚ್ಛೆಯಂತೆಯೇ ಅಲ್ಲಿ ಎಲ್ಲ ವ್ಯವಸ್ಥೆಯೂ ಇತ್ತು. ಈಗಿಲ್ಲಿ ಬಂದು ಮೂರು ವರ್ಷಗಳಾದವು. ಸಮಾನ ಮನಸ್ಕರು ಸಿಕ್ಕಿದ್ದರಿಂದ ಒತ್ತಡರಹಿತ ಜೀವನ ಸಾಗಿಸುತ್ತ ಖುಷಿಯಾಗಿದ್ದೇವೆ’ ಎನ್ನುತ್ತಾರೆ ‘ಪ್ರೈಮಸ್ ರಿಫ್ಲೆಕ್ಷನ್’ ನಿವಾಸಿ ಉಮಾ ರಾಯ್ಕರ್.

ಕಾಲಕ್ಕೆ ತಕ್ಕಂತೆ ನಮ್ಮನ್ನು ನಾವೇ ಬದಲಾಯಿಸಿಕೊಂಡು ನೆಮ್ಮದಿಯಾಗಿ ಇರುವುದನ್ನು ರೂಢಿಸಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಆಧುನಿಕ ಜಗತ್ತು ಸೌಲಭ್ಯವನ್ನು ರೂಪಿಸುತ್ತಲೇ ಇದೆ. ತೆರೆದುಕೊಳ್ಳಬೇಕಷ್ಟೇ.

ಇದನ್ನೂ ಓದಿ : Next Door : ಮುಂದುವರೆಯುವುದೆಂದರೆ ತಂತ್ರಜ್ಞಾನದ ದಾಸರಾಗುವುದೆ?

Published On - 4:18 pm, Thu, 22 July 21