ಸೀಗಡಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಮಾಂಸ ಪ್ರಿಯರು ಒಮ್ಮೆಯಾದರು ಇದನ್ನು ಸವಿದಿರುತ್ತಾರೆ. ಸಾಮಾನ್ಯವಾಗಿ ಸೀಗಡಿ ಎಂದರೆ ಕೆಲವರಿಗೆ ಅರ್ಥವಾಗುವುದು ಸ್ವಲ್ಪ ಕಷ್ಟ ಏಕೆಂದರೆ ಕುಂದಾಪುರ ಭಾಗದಲ್ಲಿ ಇದನ್ನು ಚಟ್ಲಿ ಎಂದು ಕರೆಯುತ್ತಾರೆ. ಅದರಂತೆ ತುಳು ಮಾತನಾಡುವವರು ಎಟ್ಟಿ, ಇನ್ನು ಕೆಲವರು ಇದನ್ನು ಪ್ರಾನ್ಸ್ ಎಂದು ಕರೆಯುತ್ತಾರೆ. ಹೀಗಾಗಿ ಗೊಂದಲ ಬೇಡ ಇದೆಲ್ಲದರ ಅರ್ಥ ಒಂದೇ ಅದು ಸೀಗಡಿ. ಮುಳ್ಳಿಲ್ಲದ ಸೀಗಡಿ ಒಮ್ಮೆ ತಿಂದು ನೋಡು ಮನಸೋಲದೆ ಹೋಗುವುದಿಲ್ಲ ಎನ್ನುವ ಮಾತಿದೆ. ಹೀಗಾಗಿ ತಿನ್ನುವ ಹಂಬಲ ಇರುವವರು ರುಚಿಯಾದ ಸೀಗಡಿ ಅಡುಗೆಯನ್ನು ಮಾಡಲು ಒಂದು ಸರಳ ರೆಸಿಪಿ ಇದೆ. ಅದುವೇ ಸೀಗಡಿ ಪೆಪ್ಪರ್ ಸ್ಪೈಸಿ. ಹಾಗಿದ್ದರೆ ಇದನ್ನು ಮಾಡುವ ವಿಧಾನವನ್ನು ಒಮ್ಮೆ ಓದಿ ತಿಳಿದುಕೊಳ್ಳಿ ಮತ್ತು ಬಿಡುವಿನ ಸಮಯದಲ್ಲಿ ಕೇವಲ 20 ನಿಮಿಷದಲ್ಲಿ ಇದನ್ನು ಸಿದ್ಧಪಡಿಸಿ.
ಸೀಗಡಿಯನ್ನು ಸ್ವಚ್ಛಗೊಳಿಸಿ
ಸೀಗಡಿಗಳನ್ನು ಸರಿಯಾಗಿ ಸ್ವಚ್ಛಗೊಳಿಸಿ ಮತ್ತು ಹೀಗೆ ಅದನ್ನು ಸ್ವಚ್ಛ ಮಾಡುವಾಗ ಅದರ ಒಳಗಿನ ಕಪ್ಪು ಬಣ್ಣದ ರಕ್ತನಾಳಗಳನ್ನು ತೆಗೆಯಿರಿ. ಇದನ್ನು ಹಾಗೆ ಇಡುವುದರಿಂದ ಬೆನ್ನು ನೋವು ಉಂಟಾಗುವ ಸಾಧ್ಯತೆ ಇದೆ. ಬಳಿಕ ಅದಕ್ಕೆ ಅರಿಶಿಣ ಮತ್ತು ಉಪ್ಪು ಹಾಕಿ ಕಲಸಿ ತೆಗೆದಿಟ್ಟುಕೊಳ್ಳಿ. ನಂತರ ಮಧ್ಯಮ ಉರಿಯಿರುವಂತೆ ಒಲೆ ಮೇಲೆ ಒಂದು ಪಾತ್ರೆ ಇಡಿ. ಇದಾದ ಬಳಿಕ 4 ಚಮಚ ಬೆಣ್ಣೆಯನ್ನು ಹಾಕಿ, ಅದು ಚೆನ್ನಾಗಿ ಬಿಸಿ ಆದ ಮೇಲೆ ಕಲಸಿಟ್ಟುಕೊಂಡ ಸೀಗಡಿಗಳನ್ನು ಸೇರಿಸಿ ಮತ್ತು ಸ್ವಲ್ಪ ಉಪ್ಪು ಮತ್ತು ಕರಿಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಸಿ. ಸೀಗಡಿ ಬೇಯಲು ಹೆಚ್ಚು ಸಮಯ ಬೇಡ, ಹೀಗಾಗಿ ಸ್ವಲ್ಪ ಅದು ದುಂಡಗಾಗುವವರೆಗೆ ಕರಿದು ತೆಗೆದಿಟ್ಟುಕೊಳ್ಳಿ.
ಮಸಾಲೆ ಸಿದ್ಧಪಡಿಸಿಕೊಳ್ಳಿ
ಅದೇ ಪಾತ್ರೆಗೆ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಈರುಳ್ಳಿ, ಟೊಮೆಟೊ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ, ಇದು ಸ್ವಲ್ಪ ಬಾಡಿದ ನಂತರ ತೆಂಗಿನಕಾಯಿಂದ ತೆಗೆದ ಹಾಲನ್ನು ಸೇರಿಸಿ ಮತ್ತು ಸ್ವಲ್ಪ ಅದನ್ನು ಹುರಿಯಿರಿ. ಬಳಿಕ ಖಾರಕ್ಕೆ ಬೇಕಾದಷ್ಟು ಒಣ ಮೆಣಸಿನಕಾಯಿ, ಎರಡು ಅಥವಾ ಮೂರು ಲವಂಗ, ಬೆಳ್ಳುಳ್ಳಿ ಮತ್ತು ಶುಂಠಿ ಚೂರುಗಳನ್ನು ಸೇರಿಸಿ. ಮಿಶ್ರಣವು ಸ್ವಲ್ಪ ದಪ್ಪವಾಗಲಿ ಅಲ್ಲಿವರೆಗೆ ಅದನ್ನು ಫ್ರೈ ಮಾಡಿ ಬಳಿಕ ಆ ಪಾತ್ರೆಯನ್ನು ಇಳಿಸಿಕೊಳ್ಳಿ.
ತಯಾರಾದ ಗ್ರೇವಿಯನ್ನು ಸಿಗಡಿಯೊಂದಿಗೆ ಸೇರಿಸಿ
ಒಂದು ನಾನ್-ಸ್ಟಿಕ್ ಪ್ಯಾನ್ ಅನ್ನು ಬಿಸಿ ಮಾಡಿ. ಬಳಿಕ ಈಗಾಗಲೇ ತಯಾರಿಸಿದ ಮಿಶ್ರಣವನ್ನು ಸೇರಿಸಿ. ಮಿಶ್ರಣವು ಸ್ವಲ್ಪ ಡ್ರೈ ಆದ ನಂತರ ಬೆಣ್ಣೆಯಲ್ಲಿ ಕರಿದಿಟ್ಟುಕೊಂಡ ಸೀಗಡಿಗಳನ್ನು ಸೇರಿಸಿ. ಒಲೆಯನ್ನು ಕೆಡಿಸಿ. ಸರ್ವಿಂಗ್ ಬೌಲ್ಗೆ ಇದನ್ನು ಹಾಕಿ ಮತ್ತು ಅದರ ಮೇಲೆ ಕೊತ್ತುಂಬರಿ ಸೊಪ್ಪನ್ನು ಸಿಂಪಡಿಸಿ. ಬಳಿಕ ಬಿಸಿ ಬಿಸಿಯಾದ ಅನ್ನದ ಜೊತೆಗೆ ಸೀಗಡಿ ಪೆಪ್ಪರ್ ಸ್ಪೈಸಿ ಸವಿಯಿರಿ.
ಇದನ್ನೂ ಓದಿ:
ನಿಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು ಇದೆಯೇ ಒಮ್ಮೆ ಗಮನಿಸಿ